ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ವಲಸಿಗರ ಮಾಹಿತಿಯೇ ಇಲ್ಲ!

ರಾಜ್ಯದಲ್ಲಿ 800ಕ್ಕೂ ಹೆಚ್ಚು ಅಕ್ರಮ ವಲಸಿಗರು– ಎಫ್‌ಆರ್‌ಆರ್‌ಒ
Last Updated 5 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಸಿಆರ್‌) ನಿಯಮ ಜಾರಿಗೊಳಿಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿರುವ ಬೆನ್ನಲ್ಲೇ, ವಿದೇಶಿ ಅಕ್ರಮ ವಲಸಿಗರ ಸಂಖ್ಯೆ ಎಷ್ಟಿದೆ ಎಂಬುದರ ಬಗ್ಗೆ ಗೊಂದಲ ತಲೆದೋರಿದೆ.

ರಾಜ್ಯದಲ್ಲಿ 40,000 ಬಾಂಗ್ಲಾ ಅಕ್ರಮ ವಲಸಿಗರಿದ್ದಾರೆಂದು 2015ರಲ್ಲೇ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು. ಆದರೆ, ಅದೇ ವೇಳೆ ಗೃಹ ಸಚಿವರಾಗಿದ್ದ ಜಿ. ಪರಮೇಶ್ವರ, 748 ಬಾಂಗ್ಲಾ ದೇಶಿಯರಿದ್ದು, ಆ ಪೈಕಿ 283 ಮಂದಿ ಮಾತ್ರ ಅಕ್ರಮ ವಾಸಿಗಳು ಎಂದು ವಿಧಾನಸಭೆಯಲ್ಲಿ ಹೇಳಿದ್ದರು. ಆದರೆ, ಲೆಕ್ಕಕ್ಕೆ ಸಿಗದ ಲಕ್ಷಕ್ಕೂ ಹೆಚ್ಚು ವಿದೇಶಿ ಅಕ್ರಮ ವಲಸಿಗರಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ರಾಜ್ಯದಲ್ಲಿರುವ ವಿದೇಶಿ ಅಕ್ರಮ ವಲಸಿಗರ ಸಂಖ್ಯೆ ಕುರಿತು ಅಧಿಕೃತ ಮಾಹಿತಿ ಲಭ್ಯವಿಲ್ಲ. ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಂಕಿಸಂಖ್ಯೆಗಳ ಪ್ರಕಾರಸುಮಾರು 23 ಸಾವಿರ ವಿದೇಶಿ ಪ್ರಜೆಗಳು ನಗರದಲ್ಲಿದ್ದಾರೆ. ಅವರಲ್ಲಿ 16 ಸಾವಿರ ಪ್ರಜೆಗಳ ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗಿದ್ದು, ಉಳಿದವರ ಮಾಹಿತಿ ಸಂಗ್ರಹಿಸಬೇಕಿದೆ’ ಎಂದು ಮೂರು ವರ್ಷದ ಹಿಂದೆ ಹೇಳಲಾಗಿತ್ತು.

ಈಗ ಒಟ್ಟು 20 ದೇಶಗಳ 800ಕ್ಕೂ ಹೆಚ್ಚು ಪ್ರಜೆಗಳು ಮಾತ್ರ ವೀಸಾ ಅವಧಿ ಮುಗಿದಿದ್ದರೂ ರಾಜ್ಯದಲ್ಲಿ ನೆಲೆಸಿದ್ದಾರೆ. ಇವರಲ್ಲಿ 200 ಮಂದಿ ಬಾಂಗ್ಲಾದವರು. ಉಳಿದವರು ಬಹುತೇಕ ಆಫ್ರಿಕಾ ರಾಷ್ಟ್ರಗಳ ನಾಗರಿಕರು ಎಂದು ಉನ್ನತ ಮೂಲಗಳು ತಿಳಿಸಿವೆ.

‘ವೈಟ್‌ಫೀಲ್ಡ್‌, ಕೆ.ಆರ್‌.‍ಪುರ, ಆನೇಕಲ್‌, ಹೊಸಕೋಟೆ ಸೇರಿದಂತೆಬೆಂಗಳೂರಿನ ಹೊರವಲಯದಲ್ಲಿ ಬಾಂಗ್ಲಾ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರನ್ನು ಬಾಂಗ್ಲಾದವರು ಎಂದು ಸಾಬೀತುಪಡಿಸುವುದು ಸವಾಲಿನ ಕೆಲಸ. ಏಕೆಂದರೆ, ಅವರೆಲ್ಲರ ಬಳಿ ಆಧಾರ್‌ ಕಾರ್ಡ್‌ ಇಲ್ಲವೆ ಮತದಾರರ ಚೀಟಿಗಳಿವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

‘ಚುನಾವಣೆ ಸಮಯ, ಆನಂತರದ ದಿನಗಳಲ್ಲಿ ಸ್ಥಳೀಯರ ಮಾಹಿತಿ ಆಧರಿಸಿ ಅನೇಕರ ವಿಚಾರಣೆ ನಡೆಸಿದ್ದೇವೆ. ತಾವು ಪಶ್ಚಿಮ ಬಂಗಾಳ, ಅಸ್ಸಾಂನ ನಾಗರಿಕರು ಎಂದು ಅವರು ಹೇಳಿದ್ದಾರೆ. ಆ ಪ್ರದೇಶಗಳ ಮಾಹಿತಿಗಳನ್ನು ಸಂಪೂರ್ಣವಾಗಿ ನೀಡುತ್ತಾರೆ. ಬಂಗಾಳಿ ಭಾಷೆ ಮಾತನಾಡುತ್ತಾರೆ. ಅವರ ಬಳಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ಗುರುತಿನ ಚೀಟಿಗಳೂ ಇವೆ. ಈ ದಾಖಲೆಗಳ ಸತ್ಯಾಸತ್ಯತೆಯನ್ನೂ ಪರಿಶೀಲಿಸಲಾಗಿದೆ. ಇವು ಅಸಲಿ ಎಂದೂ ಖಚಿತವಾಗಿರುವುದರಿಂದ ಹೊರ ಹಾಕುವುದು ಕಷ್ಟವಾಗಿದೆ’ ಎಂದು ಅವರು ವಿವರಿಸಿದರು.

ಜನಪ್ರತಿನಿಧಿಗಳೇ ರಕ್ಷಕರು: ‘ಕೂಲಿ ಹಾಗೂ ಇತರೆ ಕಾರಣಗಳಿಗಾಗಿ ನಗರಕ್ಕೆ ಬಂದಿರುವ ಅಕ್ರಮ ವಾಸಿಗಳಿಗೆ ಸ್ಥಳೀಯ ಕೆಲವು ಜನಪ್ರತಿನಿಧಿಗಳು ರಕ್ಷಣೆ ನೀಡುತ್ತಿದ್ದಾರೆ’ ಎಂದು ಈ ಹಿಂದೆ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಗುಪ್ತಚರ ವಿಭಾಗ ಹೇಳಿತ್ತು. ಈ ವರದಿ ದೂಳು ಹಿಡಿಯುತ್ತಿದೆ.

ಅಸ್ಸಾಂನಲ್ಲಿ ಸಿಕ್ಕಿಬಿದ್ದ ವಲಸಿಗರು!

ಗಡಿಯೊಳಗೆ ನುಸುಳಿ ಬಂದು ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ 31 ಮಂದಿ ಬಾಂಗ್ಲಾಕ್ಕೆ ಹಿಂತಿರುಗಲು ಹೊರಟಿದ್ದಾಗ, 2018ರ ಅಕ್ಟೋಬರ್‌ನಲ್ಲಿ ಅಸ್ಸಾಂ ಪೊಲೀಸರು ಗುವಾಹಟಿಯಲ್ಲಿ ವಶಕ್ಕೆ ಪಡೆದಿದ್ದರು. ಅವರಲ್ಲಿ ಎಂಟು ಮಂದಿ ಮಹಿಳೆಯರು ಮತ್ತು ಹದಿಮೂರು ಮಕ್ಕಳಿದ್ದರು. ಅವರ ಬಳಿ ಭಾರತದ ಪೌರತ್ವ ಸಾಬೀತುಪಡಿಸುವ ಯಾವುದೇ ದಾಖಲೆಗಳು ಇರಲಿಲ್ಲ. ವಿಚಾರಣೆ ನಡೆಸಿದಾಗ ಅವರು ಬಾಂಗ್ಲಾದ ಬಗೇರ್ಹತ್‌ ಜಿಲ್ಲೆಯವರೆಂದು ಗೊತ್ತಾಗಿತ್ತು.

‘ನಗರದ ಹೊರವಲಯದ ಹೆಬ್ಬಗೋಡಿಯ ಕೊಳೆಗೇರಿ ಪ್ರದೇಶವೊಂದರಲ್ಲಿ ಅಕ್ರಮ ವಲಸಿಗರಿದ್ದಾರೆ’ ಎಂಬ ಗುಪ್ತಚರ ಇಲಾಖೆ ಸುಳಿವಿನ ಮೇರೆಗೆ ಪೊಲೀಸರು ಈ ಹಿಂದೆ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದರು. ಆಗ ಬಂದೂಕಿನ 15 ಕಾಟ್ರಿಜ್‌ಗಳು, ಬುಲೆಟ್‌ಗಳು ದೊರೆತಿದ್ದವು. ಅದಕ್ಕೂ ಮೊದಲು ಪೊಲೀಸರು ನಡೆಸಿದ ದಾಳಿಯಲ್ಲಿ ಶೋಬಿಕುಲ್‌ ಇಸ್ಲಾಂ ಎಂಬ ಅಕ್ರಮ ವಲಸಿಗನನ್ನು ಬಂಧಿಸಲಾಗಿತ್ತು. ನಗರದಲ್ಲಿ ಮತ್ತಷ್ಟು ಅಕ್ರಮ ವಲಸಿಗರಿರುವುದಾಗಿ ಆತ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ.

ಏನಿದು ಎನ್‌ಆರ್‌ಸಿ?

ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಎಂದರೆ ಭಾರತೀಯರು ಮತ್ತು ವಲಸಿಗರನ್ನು ಪ್ರತ್ಯೇಕಿಸುವ ಪಟ್ಟಿ. 1951ರ ಜನಸಂಖ್ಯೆಯ ವರದಿ ಆಧರಿಸಿ ಮೊದಲ ಬಾರಿಗೆ ಎನ್‌ಆರ್‌ಸಿಯನ್ನು ಸರ್ಕಾರ ಜಾರಿ ಮಾಡಿತ್ತು. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಎನ್‌ಆರ್‌ಸಿ ನಿಯಮ ಜಾರಿಗೊಳಿಸಲಾಗುತ್ತಿದೆ. ಒಮ್ಮೆ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದರೆ ಎಲ್ಲ ಸಾಂವಿಧಾನಿಕ ಹಕ್ಕುಗಳು ಹಾಗೂ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT