ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಜಲ ಭದ್ರತಾ ಕಾಯ್ದೆ ರಚಿಸಿ: ಜಲತಜ್ಞ ರಾಜೇಂದ್ರ ಸಿಂಗ್‌ ಆಗ್ರಹ

Last Updated 21 ಜುಲೈ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ನೀರನ್ನು ಇಲ್ಲಿನವರೇ ಬಳಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ಜಲ ಭದ್ರತಾ ಕಾಯ್ದೆ ರಚಿಸಬೇಕು’ ಎಂದು ಜಲ ತಜ್ಞ ರಾಜೇಂದ್ರ ಸಿಂಗ್ ಆಗ್ರಹಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಬರ ಮುಕ್ತ ಕರ್ನಾಟಕ ಆಂದೋಲನ ಮತ್ತು ಸ್ವರಾಜ್‌ ಇಂಡಿಯಾ ಪಕ್ಷ–ಕರ್ನಾಟಕ ಸಹಯೋಗದಲ್ಲಿ 39ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನೀರು ರೈತರ ಹಕ್ಕು. ನೀರಿನ ಸಂಕಟ ನಿವಾರಣೆ, ನೆಲ, ಜಲ ಮತ್ತು ಅರಣ್ಯ ರಕ್ಷಣೆಗಾಗಿ ಸಂಘಟಿತರಾಗಿ ಹೋರಾಡಬೇಕು. ರೈತ ಸಂಘ ನೇತೃತ್ವ ವಹಿಸಿಕೊಳ್ಳಬೇಕು. ನೀರಿನ ಅಧಿಕಾರಕ್ಕಾಗಿ ಕಾನೂನು ಹೋರಾಟವನ್ನೂ ನಡೆಸಬೇಕು’ ಎಂದು ಸಲಹೆ ನೀಡಿದರು.

ಕಂಪನಿಗಳಿಗೆ ಲಾಭ ಮಾಡಿಕೊಡಲು:‘ದೇಶದಾದ್ಯಂತ ಬರಗಾಲ ತಾಂಡವವಾಡುತ್ತಿದೆ. ಕುಡಿಯುವುದಕ್ಕೂ ನೀರು ಸಿಗುತ್ತಿಲ್ಲ. ಅಂತರ್ಜಲಮಟ್ಟ ಕುಸಿದಿದೆ. ಹೀಗಿರುವಾಗ, ಮನೆ ಮನೆಗೆ ನೀರಿನ ಸಂಪರ್ಕ ಕಲ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಜಲಶಕ್ತಿ ಮಂತ್ರಾಲಯ ಮೂಲಕ ಇದನ್ನು ಅನುಷ್ಠಾನಗೊಳಿಸಲಾಗುವುದು ಎನ್ನುತ್ತಿದ್ದಾರೆ. ನೀರೆಲ್ಲಿದೆ? ಇದು ಪೈಪ್ ತಯಾರಿಕಾ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆಯಷ್ಟೇ’ ಎಂದು ಟೀಕಿಸಿದರು.

‘ನೀರಿನ ಸಂಕಷ್ಟ ನಿವಾರಣೆಗೆ ನದಿಗಳ ಜೋಡಣೆ‌ ಪರಿಹಾರವಲ್ಲ. ಅಂತರ್ಜಲ ಸಂರಕ್ಷಣೆಗೆ ಆದ್ಯತೆ‌ ನೀಡಬೇಕು. ಬರ ಮುಕ್ತ ಕರ್ನಾಟಕ ಮಾಡಬೇಕಾದರೆ ಮಳೆ ನೀರು ಹರಿದು ಹೋಗದಂತೆ, ಬಿದ್ದಲ್ಲಿಯೇ ಇಂಗುವಂತೆ ವ್ಯವಸ್ಥೆ ಮಾಡಬೇಕು. ಮೋಡ ಬಿತ್ತನೆ ಕೂಡ ಅವೈಜ್ಞಾನಿಕವೇ. ಕೇಂದ್ರ ಸರ್ಕಾರ ನದಿಗಳ ಹಕ್ಕು ತನ್ನದಾಗಿಸಿಕೊಂಡು ನಿಯಂತ್ರಿಸಲು ಮುಂದಾಗಿದೆ. ಅದಕ್ಕೆ ಅವಕಾಶ ಕೊಡಬಾರದು. ನಮ್ಮಲ್ಲಿ ಬೀಳುವ ಮಳೆ, ಜಲಾಶಯಗಳಲ್ಲಿರುವ ನೀರು ನಮ್ಮದೇ ಆಗಬೇಕು. ನೀರಿನ ವ್ಯಾಪಾರಕ್ಕಾಗಿ ಕೇಂದ್ರ ಸರ್ಕಾರ ನಡೆಸುತ್ತಿರುವ ಹುನ್ನಾರವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ತಿಳಿಸಿದರು.

ಘೋಷಣೆ ಅನುಷ್ಠಾನವಾಗಬೇಕು:‘ರೈತರ ಹಕ್ಕುಗಳ ವಿಶ್ವಸಂಸ್ಥೆ ಘೋಷಣೆ–2018’ ಪೂರ್ಣಪಾಠದ ಮುದ್ರಿತ ಪ್ರತಿಗಳನ್ನು ಬಿಡುಗಡೆ ಮಾಡಿದ ಕಾನೂನು ತಜ್ಞ ಪ್ರೊ.ರವಿವರ್ಮ ಕುಮಾರ್‌ ಮಾತನಾಡಿ, ‘ರೈತ ಸಂಘದ ಸ್ಥಾಪಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರು ಹಿಂದೆ ಮಾಡಿದ್ದ ಬಿತ್ತನೆ ಇಂದು ಫಲ ನೀಡಿದೆ. ಸಂವಿಧಾನದಲ್ಲಿ ರೈತರ ಹಕ್ಕುಗಳ ಪ್ರಸ್ತಾಪ ಇಲ್ಲದಿರುವುದನ್ನು ಪ್ರಸ್ತಾಪಿಸಿ, ಹೋರಾಡಿದ್ದರು. ಜಿನಿವಾದಲ್ಲಿ ಡಬ್ಲ್ಯುಟಿಒ (ವರ್ಲ್ಡ್‌ ಟ್ರೇಡ್ ಆರ್ಗನೈಜೇಷನ್) ವಿರುದ್ಧ ಪ್ರತಿಭಟಿಸಿದ್ದರು. ಅದೆಲ್ಲದರ ಪರಿಣಾಮವೇ ರೈತರ ಹಕ್ಕುಗಳನ್ನು ವಿಶ್ವ ಸಂಸ್ಥೆಯು ಘೋಷಿಸಿದೆ. ಇದಕ್ಕೆಅಮೆರಿಕ ಹಾಗೂ ಇಂಗ್ಲೆಂಡ್ ವಿರೋಧಿಸಿದವು. ಭಾರತ ಸೇರಿದಂತೆ 123 ರಾಷ್ಟ್ರಗಳು ಪರವಾಗಿ ಮತ ಹಾಕಿವೆ. ಈ ಘೋಷಣೆ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

‘ಎಲ್ಲ ರೈತರಿಗೂ‌ ಜಮೀನಿನ ಹಕ್ಕು, ಭದ್ರತೆ ಇರಬೇಕು ಹಾಗೂ ಬೇಕಾಬಿಟ್ಟಿಯಾಗಿ ಒಕ್ಕಲೆಬ್ಬಿಸಬಾರದು ಎಂದು ಘೋಷಣೆಯಲ್ಲಿ ಹೇಳಲಾಗಿದೆ. ಒಕ್ಕಲೆಬ್ಬಿಸುವ ಪರಿಪಾಠಕ್ಕೆ ಬಲಿಯಾಗುತ್ತಿರುವ ರೈತರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು’ ಎಂದರು.

‘ಘೋಷಣೆ ಅನುಷ್ಠಾನಕ್ಕೆ ತರಲು ಬೇಕಾದ ಹೋರಾಟ ನಡೆಸಬೇಕು. ರೈತರ ಹಕ್ಕುಗಳ ವಿಸ್ತರಣೆಗೆ ಸಂವಿಧಾನದ ತಿದ್ದುಪಡಿ ಆಗುವವರೆಗೂ ಈ ಘೋಷಣೆಗಳನ್ನು ವಕೀಲರು ಬಳಸಿಕೊಳ್ಳಬೇಕು. ರೈತರ ಹಕ್ಕುಗಳಿಗಾಗಿಯೇ ಹೊಸ ಸಚಿವಾಲಯವನ್ನು ಕೇಂದ್ರ ಸರ್ಕಾರ ಆರಂಭಿಸಬೇಕು. ರೈತರ ಹಕ್ಕುಗಳ ನಿರ್ದೇಶನಾಲಯ ರಚಿಸಿ, ಘೋಷಣೆಗಳನ್ನು ಕಾನೂನುದತ್ತವಾಗಿ ರೈತರ ಹಕ್ಕುಗಳನ್ನಾಗಿಸಲು ಹೋರಾಟ ನಡೆಸಬೇಕು. ರೈತ ಸಂಘ ನೇತೃತ್ವ ವಹಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಹಕಾರ ವ್ಯಾಪ್ತಿಗೆ ತರಬೇಕು:ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ ಮಾತನಾಡಿ, ‘ಕೃಷಿ ಭೂಮಿಯನ್ನು ಕೃಷಿಯೇತರ ಹಾಗೂ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಕೊಡಬಾರದು. ನಮ್ಮ ನೀರು ಮತ್ತು ಮಣ್ಣು ರಕ್ಷಿಸಿದರೆ ದೇಶ ಹಾಗೂ ಕೃಷಿ ಉಳಿಯುತ್ತದೆ. ಇದಕ್ಕಾಗಿ ಆಂದೋಲನ ನಡೆಸಬೇಕಾಗಿದೆ. ಉಳುವವನೇ ಒಡೆಯ ಎನ್ನುವುದು ಆಡಳಿತದ ಕಾರ್ಯಸೂಚಿಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಬೇಕು. ರಾಷ್ಟ್ರೀಯ ಭೂಮಿ ನೀತಿ ರಚಿಸಬೇಕು. ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಕಾರ್ಪೊರೇಟ್ ಕಪಿಮುಷ್ಟಿಯಿಂದ ಸಹಕಾರ ಕ್ಷೇತ್ರದ ವ್ಯಾಪ್ತಿಗೆ ತರಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಜಾಲತಾಣವನ್ನು (https://krrs.org/) ಮುಖಂಡ ದರ್ಶನ್ ಪುಟ್ಟಣ್ಣಯ್ಯ ಬಿಡುಗಡೆ ಮಾಡಿದರು.

ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ತಮಿಳುನಾಡಿನ ರೈತ ಮುಖಂಡ ಸೆಲ್ವ ಮುತ್ತು, ಮುಖಂಡರಾದ ಪಂಚನಗೌಡ ದ್ಯಾಮನಗೌಡ, ಕಲ್ಯಾಣರಾವ್ ಮುಚಳಂಬಿ, ನಾಗತ್ನಮ್ಮ ಪಾಟೀಲ, ಅಭಿರುಚಿ ಗಣೇಶ್ ಭಾಗವಹಿಸಿದ್ದರು.

ಇದಕ್ಕೂ ಮುನ್ನ, ರಾಣಿ ಚನ್ನಮ್ಮ ವೃತ್ತದಿಂದ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT