ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಪಿಎಸ್ಸಿ ಅಕ್ರಮ ಬಯಲಿಗೆಳೆಯಲು ಕಾನೂನು ಹೋರಾಟ ಅಗತ್ಯ’

ನ್ಯಾ.ಎನ್. ಸಂತೋಷ್ ಹೆಗ್ಡೆ ಅಭಿಮತ
Last Updated 29 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) 2015ನೇ ಗೆಜೆಟೆಡ್‌ ಪ್ರೊಬೇಷನರಿ 428 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಕೋರ್ಟ್‌ನಲ್ಲಿ ಹೋರಾಟ ಮಾಡುವುದು ಸೂಕ್ತ’ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.

ಕೆಎಎಸ್ ನೊಂದ ಅಭ್ಯರ್ಥಿಗಳ ಹಿತರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾರ್ವಜನಿಕ ಹುದ್ದೆಗಳ ನೇಮಕಾತಿ– ಭ್ರಷ್ಟಾಚಾರ ನಿರ್ಮೂಲನೆಯ ಅನಿವಾರ್ಯತೆ’ ವಿಚಾರಸಂಕಿರಣದಲ್ಲಿ ಮಾತನಾಡಿದರು.

‘ಇಂತಹ ಪ್ರಕರಣಗಳಲ್ಲಿ ಸರ್ಕಾರದಿಂದ ನ್ಯಾಯ ಸಿಗುತ್ತದೆ ಎಂದು ಹೇಳಲಾರೆ. ನಿಯಮ ಉಲ್ಲಂಘಿಸಿ ನೇಮಕಾತಿ ಮಾಡಿರುವುದು ಗೋಚರಿಸುತ್ತಿದೆ. ಆಯ್ಕೆ ಪ್ರಕ್ರಿಯೆಗೆ 2 ವರ್ಷ 7 ತಿಂಗಳು ತೆಗೆದುಕೊಂಡು, ಆಕ್ಷೇಪಣೆಗೆ ಕೇವಲ 7 ದಿನಗಳು ಅವಕಾಶ ನೀಡಿರುವುದು ವಿಪರ್ಯಾಸ. ಅದರಲ್ಲೂ ಮೂರು ದಿನಗಳು ಸರ್ಕಾರಿ ರಜೆಗಳಿದ್ದವು. ಇದಕ್ಕೆ ಸೂಕ್ತ ಕಾರಣ ನೀಡದಿರುವುದು ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಇನ್ನಷ್ಟು ಪುಷ್ಟಿ ನೀಡಲಿದೆ. ನೊಂದ ಅಭ್ಯರ್ಥಿಗಳು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯನ್ನಿಟ್ಟು, ಹೋರಾಟ ಮಾಡಬೇಕು’ ಎಂದು ಹೇಳಿದರು.

ಭ್ರಷ್ಟರಿಗೆ ಮಣೆ: ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮಾತನಾಡಿ, ‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರೇಕೆಪಿಎಸ್‌ಸಿಯ ಭ್ರಷ್ಟಾಚಾರದ ಗಾಡ್‌ ಫಾದರ್‌. ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುವವರು ವ್ಯವಸ್ಥೆಯನ್ನೇ ನುಂಗಿ ನೀರು ಕುಡಿದರು.ಅವರ ಕುಟುಂಬ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ, ಆಳ ನೋಡುವ ಗುಂಪಾಗಿದೆ. ಮಠಾಧೀಶರ ಸಹೋದರನೇ ಈಗ ಆಯೋಗದ ಅಧ್ಯಕ್ಷನಾಗಿದ್ದಾರೆ. ಆರ್ಥಿಕ ಮತ್ತು ರಾಜಕೀಯ ಪ್ರಭಾವ ಹೊಂದಿರುವವರು ಆಯೋಗದ ಸದಸ್ಯರಾಗಿ, ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ‘ಈ ಸಮಾಜದಲ್ಲಿ ಶೇ 80 ರಷ್ಟು ಮಂದಿ ನೊಂದವರಾಗಿದ್ದಾರೆ. ಅಲೆಮಾರಿಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಸಾರ್ವಜನಿಕ ಸಂಸ್ಥೆಗಳ ಶುದ್ಧೀಕರಣ ನಡೆಯಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಸತ್ಯ ಶೋಧನಾ ಸಮಿತಿ ರಚಿಸಿ’
ವೇದಿಕೆ ಪ್ರಧಾನ ಸಂಚಾಲಕಿ ಆಯಿಷಾ ಫರ್ಝಾನ ಮಾತನಾಡಿ, ‘ಡಿಜಿಟಲ್ ಮೌಲ್ಯಮಾಪನವು ಅಕ್ರಮಗಳಿಂದ ಕೂಡಿದ್ದು, ಅಂಕಗಳನ್ನು ಯಾವಾಗಬೇಕಾದರೂ ತಿದ್ದುವ ಸಾಧ್ಯತೆಗಳಿವೆ. ಹಾಗಾಗಿ, ಈ ಹಿಂದಿನ ಮೌಲ್ಯಮಾಪನ ವ್ಯವಸ್ಥೆಯನ್ನೇ ಅನುಸರಿಸಬೇಕು. 2015ರ ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸಲು ಸತ್ಯ ಶೋಧನಾ ಸಮತಿ ರಚನೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಹೋಟಾ ಸಮಿತಿಯ ಪ್ರಮುಖ ಶಿಫಾರಸ್ಸುಗಳನ್ನು ಕೈಬಿಟ್ಟು, ತಮಗೆ ಬೇಕಾದ ಅಂಶಗಳನ್ನು ಮಾತ್ರ ಅಳವಡಿಕೆ ಮಾಡಿಕೊಳ್ಳಲಾಗಿದೆ. 2015ರ ಅಂಕಪಟ್ಟಿಯಲ್ಲಿ ಯಾವುದೇ ಸುರಕ್ಷತೆ ಅನುಸರಿಸಿಲ್ಲ. ಯಾವುದೇ ಸಹಿ ಮತ್ತು ಲೋಗೊ ಕೂಡಾ ಇಲ. ಉತ್ತರ ಪತ್ರಿಕೆಗಳ ನಕಲು ಪ್ರತಿಗಳನ್ನೂ ನೀಡದೆ ಅನ್ಯಾಯ ಮಾಡಲಾಗಿದೆ’ ಎಂದರು.

‘ಕೆಪಿಎಸ್‌ಸಿ: ಹರಾಜು ಕರೆಯಿರಿ’
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕೆ.ಎಸ್.ಶಿವರಾಮು ಮಾತನಾಡಿ,‘ಕೆಪಿಎಸ್‌ಸಿ ಲೂಟಿಕೋರರ ಸಂಸ್ಥೆಯಾಗಿದೆ. ವ್ಯವಸ್ಥೆ ಬದಲಿಸಲು ಸಾಧ್ಯವಾಗದಿದ್ದರೇ ಇನ್ನು ಮುಂದೆ ಹುದ್ದೆಗಳ ಖರೀದಿಗೆ ಟೆಂಡರ್ ಕರೆಯಿರಿ. ಹಣ ಉಳ್ಳವರು ಹುದ್ದೆ ಗಿಟ್ಟಿಸಿಕೊಳ್ಳುತ್ತಾರೆ. ನಾವು ಕೂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುವುದಿಲ್ಲ. 2015ರ ನೇಮಕಾತಿಯಲ್ಲಿ ₹ 250 ಕೋಟಿಗೂ ಅಧಿಕ ಹಣ ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT