ಬುಧವಾರ, ಏಪ್ರಿಲ್ 8, 2020
19 °C
ಇಂದು ಮುಖ್ಯಮಂತ್ರಿ ಭೇಟಿ

ಕಂಬಳಕ್ಕೆ ಇನ್ನಷ್ಟು ಪ್ರಚಾರ ಬೇಕು: ಶ್ರೀನಿವಾಸ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ಕಂಬಳದಲ್ಲಿ ವೇಗವಾಗಿ ಓಡುವ ಮೂಲಕ ಕಂಬಳದ ಉಸೇನ್‌ ಬೋಲ್ಟ್‌ ಎಂಬ ಖ್ಯಾತಿಗೆ ಪಾತ್ರವಾಗಿರುವ ಶ್ರೀನಿವಾಸ ಗೌಡ, ಸೋಮವಾರ ಮಧ್ಯಾಹ್ನ 3.30ಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಲಿದ್ದಾರೆ.

ಈ ವಿಷಯದ ಕುರಿತು ಸಂತಸ ವ್ಯಕ್ತಪಡಿಸಿದ ಶ್ರೀನಿವಾಸ ಗೌಡ, ‘ಮುಖ್ಯಮಂತ್ರಿ ಭೇಟಿಗೆ ಅವಕಾಶ ಸಿಕ್ಕಿದ್ದು ತುಂಬಾ ಖುಷಿಯಾಗಿದೆ. ಕಂಬಳ ಕ್ರೀಡೆ ರಾಷ್ಟ್ರದ ಗಮನ ಸೆಳೆಯಬೇಕು. ಇದಕ್ಕೆ ಇನ್ನಷ್ಟು ಪ್ರಚಾರ ಸಿಗಬೇಕು’ ಎಂದರು.

‘ಕಂಬಳದಲ್ಲಿ ನನ್ನ ಸಾಧನೆಗೆ ಅಕಾಡೆಮಿಯೇ ಕಾರಣ. ಅಕಾಡೆಮಿಯಿಂದ ತರಬೇತಿ ಪಡೆಯದಿದ್ದರೆ ಕೋಣಗಳನ್ನು ಓಡಿಸಲು ಸಾಧ್ಯವಾಗುತ್ತಿರಲಿಲ್ಲ.ಕೋಣಗಳನ್ನು ಓಡಿಸಲು ಕಂಬಳದ ನುರಿತ ಓಟಗಾರರಾದ ಕಾಬೆಟ್ಟು ರಘುರಾಮ ಶೆಟ್ಟಿ, ಇರ್ವತ್ತೂರು ಆನಂದ ಕೋಟ್ಯಾನ್, ನಕ್ರೆ ಜಯಕರ ಮಡಿವಾಳ, ಪಲಿಮಾರ್ ದೇವೇಂದ್ರ ಕೋಟ್ಯಾನ್ ಹಾಗೂ ರಾಜೇಶ್ ನೀಡಿದ ತರಬೇತಿ ಸಹಕಾರಿಯಾಗಿದೆ’ ಎಂದು ಸಂತಸ ಹಂಚಿಕೊಂಡರು.

‘ಸದ್ಯಕ್ಕೆ ಮುಖ್ಯಮಂತ್ರಿಯ ಭೇಟಿಗೆ ತೆರಳುತ್ತಿದ್ದೇನೆ. ಕ್ರೀಡಾ ಪ್ರಾಧಿಕಾರಕ್ಕೆ ಹೋಗುವ ಕಾರ್ಯಕ್ರಮವಿಲ್ಲ. ಅಲ್ಲಿಗೆ ಹೋದ ನಂತರ ಏನಾಗುತ್ತದೆಯೋ ತಿಳಿದಿಲ್ಲ’ ಎಂದರು.

ಕ್ರೀಡಾ ಪ್ರಾಧಿಕಾರದ ಭೇಟಿ ಇಲ್ಲ: ‘ಭಾರತೀಯ ಕ್ರೀಡಾ ಪ್ರಾಧಿಕಾರದ ಬೆಂಗಳೂರು ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮದ ಯಾವುದೇ ಮಾಹಿತಿ ಇಲ್ಲ. ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌ ಅವರ ಸೂಚನೆಯ ಮೇರೆಗೆ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗುತ್ತಿದೆ’ ಎಂದು ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ತಿಳಿಸಿದ್ದಾರೆ.

ಬಡ ಕುಟುಂಬದ ಯುವಕ: ಅಶ್ವತ್ಥಪುರ ದೊಂಬಯ್ಯ ಗೌಡ– ಗಿರಿಜಾ ದಂಪತಿಯ ಪುತ್ರ ಶ್ರೀನಿವಾಸ ಗೌಡ (28) ಓದಿದ್ದು ಹತ್ತನೇ ತರಗತಿ. ಚಿಕ್ಕವರಿದ್ದಾಗ ಅಶ್ವತ್ಥಪುರ ದಾಸರ ಬೆಟ್ಟು ಪುರುಷೋತ್ತಮ ಗೌಡ ಅವರ ಮನೆಗೆ ಹೋಗಿ, ಕೊಟ್ಟಿಗೆಯಲ್ಲಿದ್ದ ಓಟದ ಕೋಣಗಳನ್ನು ಕುತೂಹಲದಿಂದ ವೀಕ್ಷಿಸಿ ಆನಂದಿಸುತ್ತಿದ್ದರು. ಅಲ್ಲಿಂದಲೇ ಅವರಿಗೆ ಕಂಬಳದ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತು. 2011ರಲ್ಲಿ ಕಾರ್ಕಳದ ಶಿರ್ಲಾಲಿನಲ್ಲಿ ಕಂಬಳ ಅಕಾಡೆಮಿಯ ಮೊದಲ ತರಬೇತಿ ಶಿಬಿರದಲ್ಲಿ ಭಾಗವಹಿಸಿ, ಯಶಸ್ವಿ ಶಿಬಿರಾರ್ಥಿಯಾಗಿ ಹೊರಬಂದರು.

ವೇಣೂರಿನಲ್ಲಿ ಮೂರು ಪ್ರಶಸ್ತಿ
ಭಾನುವಾರ ವೇಣೂರಿನಲ್ಲಿ ನಡೆದ ಸೂರ್ಯ– ಚಂದ್ರ ಕಂಬಳದಲ್ಲಿ ಶ್ರೀನಿವಾಸ ಗೌಡ ಓಡಿಸಿದ ಮೂರು ಜೋಡಿ ಕೋಣಗಳಿಗೆ ಪ್ರಶಸ್ತಿ ಬಂದಿವೆ.

ಅವರು ಓಡಿಸಿದ ಇರುವೈಲು ಪಾಣಿಲ ಬಾಡ ಪೂಜಾರಿಯವರ ನೇಗಿಲು ಹಿರಿಯ ವಿಭಾಗದ ಕೋಣಗಳು, ಸ್ತುತಿ ಹಾರ್ದಿಕ್ ನ್ಯೂಪಡಿವಾಳ್ಸ್‌ನ ನೇಗಿಲು ಕಿರಿಯ ವಿಭಾಗದ ಕೋಣಗಳು ಮತ್ತು ಮಿಜಾರು ಶಕ್ತಿ ಪ್ರಸಾದ್ ಶೆಟ್ಟಿ ಅವರ ಹಗ್ಗ ಕಿರಿಯ ವಿಭಾಗದ ಕೋಣಗಳು ಪ್ರಶಸ್ತಿ ಪಡೆದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು