ಬುಧವಾರ, ನವೆಂಬರ್ 13, 2019
28 °C

ರಾಜೀನಾಮೆಗೆ ಸಿದ್ದರಾಮಯ್ಯ ಕಾರಣ ಎಂಬ ಅನರ್ಹರ ಹೇಳಿಕೆ ತನಿಖೆಯಾಗಲಿ: ಬೊಮ್ಮಾಯಿ

Published:
Updated:

ಬೆಳಗಾವಿ: ‘ನಾವು ರಾಜೀನಾಮೆ ನೀಡಲು ಸಿದ್ದರಾಮಯ್ಯ ಕಾರಣ, ಅವರೇ ನಮ್ಮನ್ನು ಕಳುಹಿಸಿದರು' ಎಂದು ಅನರ್ಹ ಶಾಸಕರು ಹೇಳಿದ್ದಾರೆ. ಈ ಹೇಳಿಕೆ ಕುರಿತು ತನಿಖೆ ನಡೆಯಬೇಕು’ ಎಂದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

‘ಶಾಸಕರಿಗೆ ಆಮಿಷ ಒಡ್ಡಿ ಮೈತ್ರಿ ಸರ್ಕಾರ ಕೆಡವಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಿಜೆಪಿ ಸರ್ಕಾರ ವಜಾಗೊಳಿಸಬೇಕು’ ಎಂದು ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವ ಕುರಿತು ಭಾನುವಾರ ಇಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ಕಾಂಗ್ರೆಸ್‌ನವರು ಅಧಿಕಾರ ಕಳೆದುಕೊಂಡು ಹತಾಶರಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಸಮ್ಮಿಶ್ರ ಸರ್ಕಾರದ ಆಂತರಿಕ ಕಚ್ಚಾಟದಿಂದಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು‌ ರಾಜೀನಾಮೆ ನೀಡಿದ್ದಾರೆ. ಇದನ್ನು ಬಿಟ್ಟು ಬಿಜೆಪಿಯವರನ್ನು ಗುರಿಯಾಗಿಸಿ ಕಾಂಗ್ರೆಸ್‌ನವರು ರಾಜ್ಯಪಾಲರಿಗೆ ಮನವಿ ಕೊಟ್ಟಿರುವುದು ರಾಜಕೀಯ ಪ್ರೇರಿತವಾದುದಾಗಿದೆ’ ಎಂದರು.

‘ಈ ರೀತಿಯ ಸರ್ಕಸ್‌ಗಳನ್ನು ಕಾಂಗ್ರೆಸ್‌ನವರು ನಿಲ್ಲಿಸಬೇಕು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)