ನೀಟ್‌ ಬರೆದಿದ್ದ ವಿದ್ಯಾರ್ಥಿಗಳ ಮಾಹಿತಿ ಸೋರಿಕೆ

7
ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚನೆ; ಇಬ್ಬರ ಸೆರೆ

ನೀಟ್‌ ಬರೆದಿದ್ದ ವಿದ್ಯಾರ್ಥಿಗಳ ಮಾಹಿತಿ ಸೋರಿಕೆ

Published:
Updated:
ಸುಭಾಷಿತ್‌ಪತಿ ಮತ್ತು ಸಮರ್‌ಜಿತ್‌

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಬರೆದಿದ್ದ ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರ ಒಳಗೊಂಡ ಮಾಹಿತಿ ಸೋರಿಕೆಯಾಗಿದ್ದು, ಅದನ್ನು ಬಳಸಿಕೊಂಡೇ ವಿದ್ಯಾರ್ಥಿಗಳಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಜಾಲವೊಂದು ನಗರದ ಪೊಲೀಸರ ಬಲೆಗೆ ಬಿದ್ದಿದೆ.

ನಗರದ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ಹೇಳಿ ನಂಬಿಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಂದ  ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಆರೋಪದಡಿ ಓಡಿಶಾದ ಸುಭಾಷಿತ್‌ಪತಿ ಹಾಗೂ ಸಮರ್‌ಜಿತ್ ಪಂಡ್ ಎಂಬುವರನ್ನು ಕಬ್ಬನ್ ಪಾರ್ಕ್ ಪೊಲೀಸರು ಸೋಮವಾರ ಸೆರೆಹಿಡಿದಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಸೆಪ್ಟೆಂಬರ್ 20ರವರೆಗೆ ಹೆಚ್ಚಿನ ವಿಚಾರಣೆಗಾಗಿ ಅವರಿಬ್ಬರನ್ನೂ ಕಸ್ಟಡಿಗೆ ಪಡೆದುಕೊಂಡಿದ್ದಾರೆ. 

‘ವಂಚನೆಗೀಡಾದ ಪೋಷಕರೊಬ್ಬರು ನೀಡಿದ್ದ ದೂರಿನಡಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಬ್ಬರ ಬಳಿ ಎರಡು ಲ್ಯಾಪ್‌ಟಾಪ್‌ಗಳು ಸಿಕ್ಕಿವೆ. 2017 ಹಾಗೂ 2018ರಲ್ಲಿ ನೀಟ್‌ ಬರೆದಿದ್ದ ವಿದ್ಯಾರ್ಥಿಗಳ ಮಾಹಿತಿಯೆಲ್ಲವೂ ಆ ಲ್ಯಾಪ್‌ಟಾಪ್‌ಗಳಲ್ಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನೀಟ್ ನಡೆಸುತ್ತದೆ. ಈ ಪರೀಕ್ಷಾ ನೋಂದಣಿಗೆ ವಿದ್ಯಾರ್ಥಿಗಳು ನೀಡುವ ಮಾಹಿತಿಯನ್ನು ಗೌಪ್ಯವಾಗಿರಿಸಬೇಕು. ಆದರೆ, ಪ್ರತಿಯೊಂದು ಮಾಹಿತಿಯನ್ನು ₹1 ಲಕ್ಷಕ್ಕೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಅದೇ ವಿವರ ಬಳಸಿಕೊಂಡು ಆರೋಪಿಗಳು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸಂಪರ್ಕಿಸಿ ವಂಚಿಸಿದ್ದಾರೆ. ಆ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ವಿವರಿಸಿದರು.

‘ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ ಕೆಲವು ಉದ್ಯೋಗಿಗಳು, ಆರೋಪಿಗಳ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಅವರೇ, ವಿದ್ಯಾರ್ಥಿಗಳ ಮಾಹಿತಿಯನ್ನು ಆರೋಪಿಗಳಿಗೆ ಮಾರಾಟ ಮಾಡಿರುವ ಅನುಮಾನವಿದೆ. ಅವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಹೇಳಿದರು.

ನಕಲಿ ಸಂಸ್ಥೆ ಸೃಷ್ಟಿ: ‘ಆರೋಪಿ ಸುಭಾಷಿತ್‌ಪತಿ, ಎಂಜಿನಿಯರಿಂಗ್ ಪದವೀಧರ. ಸಮರ್‌ಜಿತ್ ಸಹ ಎಂಬಿಎ ವ್ಯಾಸಂಗ ಮಾಡಿದ್ದಾನೆ. ಅವರಿಬ್ಬರು  ಸ್ನೇಹಿತರಾದ ಸೋಮ್ಯಕಾಂತ್ ಮೊಹಾಂತಿ, ಅನಿಲ್ ಮುಖರ್ಜಿ, ಇಲಿಯಾಜ್ ಹಾಗೂ ಮನೋಹರ್‌ ದಾಸ್  ಜೊತೆ ಸೇರಿ ಕೃತ್ಯ ಎಸಗುತ್ತಿದ್ದರು. ಸದ್ಯ ಆ ಸ್ನೇಹಿತರೆಲ್ಲ ತಲೆಮರೆಸಿಕೊಂಡಿದ್ದಾರೆ’ ಎಂದು ಅಧಿಕಾರಿ ಹೇಳಿದರು.

‘ವಂಚನೆಗೆಂದೇ ‘ಸನ್‌ರೈಸ್ ಶಿಕ್ಷಣ ಸಂಸ್ಥೆ’ ಸ್ಥಾಪಿಸಿದ್ದ ಆರೋಪಿಗಳು, ಅದರ ಹೆಸರಿನಲ್ಲೇ ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣ ಪತ್ರಗಳನ್ನು ಕೊಟ್ಟು ನಂಬಿಸುತ್ತಿದ್ದರು’ ಎಂದು ವಿವರಿಸಿದರು.

‘ವಿದ್ಯಾರ್ಥಿಗಳ ಹೆಸರು, ವಿಳಾಸ, ಪೋಷಕರ ಹೆಸರು, ಸಂಪರ್ಕ ಸಂಖ್ಯೆ, ಪಿಯುಸಿ ಹಾಗೂ ನೀಟ್ ಪರೀಕ್ಷೆ ಫಲಿತಾಂಶದ ವಿವರವೆಲ್ಲವೂ ಆರೋಪಿಗಳ ಬಳಿ ಇರುತ್ತಿತ್ತು. ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಮೊಬೈಲ್‌ಗೆ ಕರೆ ಮಾಡುತ್ತಿದ್ದ ಆರೋಪಿಗಳು, ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜು, ಎಂ.ವಿ.ಜೆ, ವೈದೇಹಿ ಕಾಲೇಜು, ಬಿ.ಆರ್‌. ಅಂಬೇಡ್ಕರ್, ಬಿಜಿಎಸ್ ಕಾಲೇಜು ಹಾಗೂ ಬಿಎಂಎಸ್ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡುವುದಾಗಿ ಹೇಳುತ್ತಿದ್ದರು’

‘ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಬೆಂಗಳೂರಿಗೆ ಕರೆಸಿ ₹10 ಲಕ್ಷದಿಂದ ₹1 ಕೋಟಿಯವರೆಗೆ ಹಣ ಪಡೆಯುತ್ತಿದ್ದರು. ಅದಾದ ನಂತರ, ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿಕೊಂಡು ತಲೆಮರೆಸಿಕೊಳ್ಳುತ್ತಿದ್ದರು. ಆರೋಪಿಗಳು ಇದುವರೆಗೂ 10ಕ್ಕೂ ಹೆಚ್ಚು ಮಂದಿಯನ್ನು ವಂಚಿಸಿರುವುದು ತನಿಖೆ ಗೊತ್ತಾಗಿದೆ’ ಎಂದು ಅಧಿಕಾರಿ ವಿವರಿಸಿದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !