ಭಾನುವಾರ, ಡಿಸೆಂಬರ್ 8, 2019
20 °C

ನೆಹರೂ ವಿದ್ರೋಹ ಮರೆಯಲು ಸಾಧ್ಯವಿಲ್ಲ: ಬಿ.ಎಲ್‌.ಸಂತೋಷ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೊದಲ ಪ್ರಧಾನಿ ನೆಹರೂ ಮತ್ತು ಬ್ರಿಟನ್‌ನ ಹೈಕಮಿಷನರ್‌ ಆಗಿದ್ದ ಕೃಷ್ಣ ಮೆನನ್‌ ಈ ದೇಶಕ್ಕೆ ಮಾಡಿ ಹೋಗಿರುವ ವಿದ್ರೋಹವನ್ನು ನೂರು ಪೀಳಿಗೆ ದಾಟಿದರೂ ಮರೆಯಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದರು.

ಲೇಖಕ ಸಂತೋಷ್ ತಮ್ಮಯ್ಯ ಅವರ, ‘ಸಮರ ಭೈರವಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಎಪ್ಪತ್ತೂ ಚಿಲ್ಲರೆ ವರ್ಷಗಳಲ್ಲಿ ನೆಹರೂ ಮಾಡಿ ಹೋಗಿರುವ ನೂರಾರು ಎಡವಟ್ಟುಗಳನ್ನು ಇವತ್ತು ನಮ್ಮ ಪಕ್ಷದ ಸರ್ಕಾರ ಸರಿ ಮಾಡುತ್ತಿದೆ’ ಎಂದರು.

‘ನಮ್ಮ ದೇಶದಲ್ಲಿ ನ್ಯಾಯಾಂಗವೂ ಸೇರಿದಂತೆ ಅನೇಕ ಸಂಸ್ಥೆಗಳು ಎಷ್ಟೋ ಸಂದರ್ಭಗಳಲ್ಲಿ ವಿಫಲವಾಗಿವೆ. ಆದರೆ, ಸೇನೆ ಮಾತ್ರ ಯಾವತ್ತೂ ನಪಾಸಾಗಿಲ್ಲ. ರಾಷ್ಟ್ರದ ರಕ್ಷಣೆ ಮತ್ತು ಬದ್ಧತೆ ವಿಷಯದಲ್ಲಿ 130 ಕೋಟಿ ಜನರ ವಿಶ್ವಾಸವನ್ನು ಅದು ಸದಾ ಕಾಪಾಡಿಕೊಂಡು ಬಂದಿದೆ’ ಎಂದರು.

ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ರಾಜ್ಯ ಸಚಿವ ಹಾಗೂ ನಿವೃತ್ತ ಜನರಲ್ ವಿ.ಕೆ.ಸಿಂಗ್‌ ಮಾತನಾಡಿದರು.

‘ಸಂತೋಷ್‌ಗೆ ಇತಿಹಾಸ ಗೊತ್ತಿಲ್ಲ’

‘ಜವಾಹರಲಾಲ್‌ ನೆಹರು ಈ ದೇಶಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಅವರಿಗೇನು ಗೊತ್ತಿದೆ. ಇತಿಹಾಸ ಗೊತ್ತಿಲ್ಲದವರು ಏನು ಬೇಕಾದರೂ ಮಾತನಾಡಬಹುದು’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ವಿರುದ್ಧ ಕಾಂಗ್ರೆಸ್‌ ಶಾಸಕ ಕೃಷ್ಣ ಬೈರೇಗೌಡ ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ರದ್ದುಪಡಿಸಿರುವ ಕುರಿತು ನಗರದಲ್ಲಿ ಶುಕ್ರವಾರ ಉಪನ್ಯಾಸ ನೀಡಿದ್ದ ಸಂತೋಷ್‌, ‘ನೆಹರೂ ಅವರ ಎಡವಟ್ಟುಗಳಿಂದ ಜಮ್ಮು ಮತ್ತು ಕಾಶ್ಮೀರ ಹಿಂಸಾಚಾರದ ತಾಣವಾಗಿತ್ತು. ಅದನ್ನು ಮೋದಿ ಸರಿಪಡಿಸಿದ್ದಾರೆ’ ಎಂದು ಹೇಳಿದ್ದರು. ಈ ಹೇಳಿಕೆಗೆ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ನೆಹರು ಇಲ್ಲದಿದ್ದರೆ ಕಾಶ್ಮೀರ ದೇಶದಲ್ಲಿ ಉಳಿಯುತ್ತಿರಲಿಲ್ಲ. ನೆಹರು, ಶಾಸ್ತ್ರಿಯಿಂದ ಕಾಶ್ಮೀರ ನಮ್ಮಲ್ಲೇ ಉಳಿದಿದೆ. ಸಂತೋಷ್‌ ಅವರಿಗೆ ಇತಿಹಾಸ ಗೊತ್ತಿಲ್ಲ. ಸುಳ್ಳಿನ ಮೂಲಕ ಜನರ ದಾರಿ ತಪ್ಪಿಸುವುದಷ್ಟೇ ಅವರ ಗುರಿ’ ಎಂದರು.

‘ನೆಹರು ಬಗ್ಗೆ ಮಾತನಾಡಲು ಸಂತೋಷ್ ಅವರಿಗೆ ಹಕ್ಕಿಲ್ಲ. ಆರ್‌ಎಸ್ಎಸ್‌ ಕೊಡುಗೆ ಏನು ಎನ್ನುವುದನ್ನು ಅವರು ಮೊದಲು ಹೇಳಲಿ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು