ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕಾಯ್ದೆ: ಕೆರೆ ಒತ್ತುವರಿಗೆ ಇಲ್ಲ ಗೆರೆ

30 ಮೀಟರ್ ವ್ಯಾಪ್ತಿ ಒಳಗೂ ನಿರ್ಮಾಣ ಕಾಮಗಾರಿಗೆ ಅವಕಾಶ: ಹೊಸ ಕಾಯ್ದೆ
Last Updated 28 ಜೂನ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೆರೆಗಳ ಮೀಸಲು ಪ್ರದೇಶದ 30 ಮೀಟರ್‌ ವ್ಯಾಪ್ತಿಯ ಒಳಗೂ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

‘ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೆಲವು ನಿಯಮಗಳು–2018’ ಮಸೂದೆಗೆ ಫೆಬ್ರುವರಿಯ ಅಧಿವೇಶನದಲ್ಲಿ ಅನುಮೋದನೆ ನೀಡಲಾಗಿತ್ತು. ಅದಕ್ಕೆ ರಾಜ್ಯಪಾಲರು ಸಹಿ ಹಾಕಿದ್ದು, ಕಾಯ್ದೆ ರೂಪ ಪಡೆದಿದ್ದು, ರಾಜ್ಯಪತ್ರದಲ್ಲಿ ಮಾರ್ಚ್‌ 26ರಂದು ಪ್ರಕಟಿಸಲಾಗಿದೆ. ‘ಮೀಸಲು ಪ್ರದೇಶದ 30 ಮೀಟರ್‌ ಒಳಗೆ ರಸ್ತೆ, ಸೇತುವೆ ಹಾಗೂ ಇತರ ಕಾಮಗಾರಿಗಳನ್ನು ನಡೆಸಬಹುದು. ಇಂತಹ ಕಾಮಗಾರಿಗಳಿಂದ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗುವುದಿಲ್ಲ ಎಂದು ಖಚಿತಪಡಿಸಿಕೊಂಡು ಪ್ರಾಧಿಕಾರ ಅನುಮತಿ ನೀಡಬಹುದು’ ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

ಬಿಬಿಎಂಪಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಚುನಾವಣಾ ನೀತಿಸಂಹಿತೆ ಜಾರಿಯಾಗುವ ಮುನ್ನ ಬಿಲ್ಡರ್‌ ಮಾಫಿಯಾಕ್ಕೆ ಮಣಿದು ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪದವಿ ಪಡೆದವರು ಭಾರತೀಯ ಲೋಕಸೇವಾ ಆಯೋಗದ ಪರೀಕ್ಷೆ ಬರೆಯಬಹುದು. ಒಂದನೇ ಕ್ಲಾಸ್‌ಗೂ ಹೋಗದವರು ಈ ಪರೀಕ್ಷೆ ಬರೆಯಬಹುದು ಎಂಬಂತಿದೆ ಈ ಕಾನೂನು’ ಎಂದು ಅವರು ವ್ಯಂಗ್ಯವಾಡಿದರು.

ಕೆರೆಗಳು ಹಾಗೂ ರಾಜಕಾಲುವೆಗಳ ಸುತ್ತಮುತ್ತ ಇನ್ನು ಮುಂದೆ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಡಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) 2016ರ ಮೇ 4ರಂದು ಆದೇಶ ಹೊರಡಿಸಿತ್ತು.

ಎನ್‌ಜಿಟಿ ಆದೇಶಕ್ಕೆ ಮೊದಲು ಸ್ಥಿತಿ ಏನಿತ್ತು?: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ‘2015ನೇ ಪರಿಷ್ಕೃತ ಮಹಾಯೋಜನೆ’ಯಲ್ಲಿ ಕೆರೆ ಹಾಗೂ ರಾಜಕಾಲುವೆಗಳ ಮೀಸಲು ಪ್ರದೇಶಗಳನ್ನು ವ್ಯಾಖ್ಯಾನಿಸಲಾಗಿತ್ತು. ಕೆರೆಯ ಸುತ್ತಲಿನ 30 ಮೀಟರ್‌ ಮೀಸಲು ಪ್ರದೇಶ ನಿಗದಿ ಮಾಡಲಾಗಿತ್ತು. ಪ್ರಾಥಮಿಕ ಹಂತದ ರಾಜಕಾಲುವೆ ಮಧ್ಯಭಾಗದಿಂದ 50 ಮೀಟರ್‌, ದ್ವಿತೀಯ ಹಂತದ ಕಾಲುವೆಯಿಂದ 25 ಮೀಟರ್‌ ಹಾಗೂ ತೃತೀಯ ಹಂತದ ಕಾಲುವೆಯಿಂದ 15 ಮೀಟರ್‌ ಮೀಸಲು ಪ್ರದೇಶ ಎಂದು ಘೋಷಿಸಲಾಗಿತ್ತು. ಇದನ್ನು ಉಲ್ಲಂಘಿಸಿ ಕೆರೆಯಂಚಿನಲ್ಲಿ ಹಾಗೂ ರಾಜಕಾಲುವೆಗಳ ಮೇಲೆಯೇ ಸಾವಿರಾರು ಕಟ್ಟಡಗಳು ತಲೆ ಎತ್ತಿದ್ದವು. ಈ ಚಟುವಟಿಕೆಗಳ ವಿರುದ್ಧ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮವನ್ನೂ ಕೈಗೊಂಡಿರಲಿಲ್ಲ.

‘ಕೆರೆಗಳ ಸಂರಕ್ಷಣೆಗೆ ಎನ್‌ಜಿಟಿ ಕ್ರಾಂತಿಕಾರಕ ಆದೇಶ ಹೊರಡಿಸಿತ್ತು. ಅದನ್ನು ರಾಜ್ಯ ಸರ್ಕಾರ ಪಾಲನೆ ಮಾಡಬೇಕಿತ್ತು. ಅದರ ಬದಲು ಕೆರೆಗಳನ್ನು ಮುಚ್ಚುವ ಕಾರ್ಯಕ್ಕೆ ಹೊರಟಿದೆ. ಆರಂಭದಲ್ಲಿ ಜಲಮೂಲದ ಅಂಗಳದಲ್ಲಿ ರಸ್ತೆ, ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಬಳಿಕ ಕಟ್ಟಡಗಳು ತಲೆ ಎತ್ತುತ್ತವೆ. ಕೆರೆಗಳ ನಾಶ ಮಾಡಲು ವ್ಯವಸ್ಥಿತ ಹುನ್ನಾರ ನಡೆಸಲಾಗಿದೆ’ ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿದ್ಯಾಸಾಗರ್‌ ಕಿಡಿಕಾರಿದರು.

‘ಯಾವುದೋ ಒಂದು ಜಲಮೂಲದ ಅಂಗಳದಲ್ಲಿ ಅನಿವಾರ್ಯವಾಗಿ ರಸ್ತೆ ನಿರ್ಮಾಣ ಮಾಡಬೇಕಾಗುತ್ತದೆ ಎಂದಿಟ್ಟುಕೊಳ್ಳಿ. ಅಂತಹ ಪ್ರಕರಣಗಳಲ್ಲಿ ಎನ್‌ಜಿಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಅದನ್ನು ಬಿಟ್ಟು ಎಲ್ಲ ಜಲಮೂಲಗಳಿಗೂ ಅನ್ವಯ ಮಾಡಲು ಹೊರಟಿರುವುದು ಸರಿಯಲ್ಲ’ ಎಂದು ಅವರು ವಿಶ್ಲೇಷಿಸಿದರು.

ಎನ್‌ಜಿಟಿ ಆದೇಶದಲ್ಲಿ ಏನಿದೆ?

*ಕೆರೆಯ ಅಂಚಿನಿಂದ 75 ಮೀಟರ್‌ ಅಂದರೆ 225 ಅಡಿ ದೂರದ ಪರಿಧಿಯನ್ನು ಬಫರ್‌ ಜೋನ್‌ ಅಥವಾ ಹಸಿರು ವಲಯ ಎಂದು ನಿಶ್ಚಯಿಸಲಾಗಿದೆ.

*ಇದು ಎಲ್ಲಾ ಕೆರೆಗಳಿಗೂ ಅನ್ವಯ ಆಗುತ್ತದೆ.

*ಈ ಪ್ರದೇಶದಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಮಾಡುವಂತಿಲ್ಲ.

ರಾಜಕಾಲುವೆಗಳಲ್ಲಿ ಮೂರು ವರ್ಗಗಳು.

1.ಕೆರೆಯನ್ನು ಸೇರುವ ಮುಖ್ಯ ರಾಜಕಾಲುವೆಗಳು: ಅವುಗಳ ಎಡಬಲ ಎರಡೂ ಬದಿಗಳಲ್ಲಿ 150 (50 ಮೀಟರ್) ಅಡಿ ಸ್ಥಳ ಬಿಡಬೇಕು.

2. ಮುಖ್ಯ ಕಾಲುವೆಯನ್ನು ಸೇರುವ ಉಪ ಮುಖ್ಯ ಕಾಲುವೆಗಳು: ಈ ಎರಡನೇ ಕಾಲುವೆಗಳ ಎಡ ಮತ್ತು ಬಲಬದಿಯಲ್ಲಿ 105 ಅಡಿ (35 ಮೀಟರ್‌) ಜಾಗ ಬಿಡಬೇಕು.

3. ಈ ಎರಡೂ ಕಾಲುವೆಗಳನ್ನು ಸೇರುವ ಮೂರನೇ ಶ್ರೇಣಿಯ ಕಾಲುವೆಗಳು: ಅವುಗಳ ಎಡ ಮತ್ತು ಬಲದಲ್ಲಿ 75 ಅಡಿ (25 ಮೀಟರ್‌) ಬಿಡಬೇಕು.

*ಮುಚ್ಚಿಹೋಗಿರುವ ರಾಜಕಾಲುವೆಗಳ ಹೂಳನ್ನು ತೆಗೆಯಬೇಕು ಮತ್ತು ಅವುಗಳನ್ನು ಮೊದಲಿನ ಸ್ಥಿತಿಗೆ ತರಬೇಕು.

*ಅತಿಕ್ರಮಣ ಮಾಡಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT