ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೂ ಬೇಕಿಲ್ಲದ ‘ಸಾಂದರ್ಭಿಕ ಶಿಶು’: ಸರ್ಕಾರ ಪತನಕ್ಕೆ ಎಲ್ಲರೂ ಉತ್ಸುಕ

Last Updated 31 ಜನವರಿ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ಸಮ್ಮಿಶ್ರ ಸರ್ಕಾರವೆಂಬ ‘ಸಾಂದರ್ಭಿಕ ಶಿಶು’ವಿನ ಉಳಿವು ಯಾರಿಗೂ ಬೇಕಿಲ್ಲ. ಪಕ್ಷ ಭೇದವಿಲ್ಲದೇ ಎಲ್ಲರೂ ಸರ್ಕಾರದ ಪತನಕ್ಕೆ ಉತ್ಸುಕರಾಗಿದ್ದು, ಈ ದಿಕ್ಕಿನತ್ತ ಮುಂದಡಿ ಇಡುತ್ತಿದ್ದಾರೆ.

‘ಆಪರೇಷನ್ ಕಮಲ’ದ ಭೀತಿ ಕಾಡುತ್ತಿರುವ ಹೊತ್ತಿನಲ್ಲೇ, ಸರ್ಕಾರಕ್ಕೇ ‘ಆಪರೇಷನ್’ ಮಾಡಲು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಜ್ಜಾದಂತಿದ್ದಾರೆ. ಒಂದೂವರೆ ತಿಂಗಳಿನಿಂದೀಚೆಗೆ ರಾಜ್ಯದಲ್ಲಿ ಅರಾಜಕ ಸ್ಥಿತಿ ನಿರ್ಮಾಣವಾಗಿದೆ.

ಇತ್ತ ಸಿದ್ದರಾಮಯ್ಯ ಬೆಂಬಲಿಗರು ಹಾಕುತ್ತಿರುವ ಪಟ್ಟುಗಳು, ಅತ್ತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಂಪು ಒಡ್ಡುತ್ತಿರುವ ಸವಾಲುಗಳ ಮಧ್ಯೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರದ್ದು ‘ತಂತಿ’ ಮೇಲಿನ ನಡಿಗೆ. ‘ನಾನು ಸಾಂದರ್ಭಿಕ ಶಿಶು; ಕಾಂಗ್ರೆಸ್‌ ಮರ್ಜಿಯಲ್ಲಿದ್ದೇನೆ’ ಎಂದು ಹೇಳಿಕೊಳ್ಳುತ್ತಲೇ ಎಂಟು ತಿಂಗಳು ಅಧಿಕಾರ ಅನುಭವಿಸಿದ್ದಾರೆ.

‘ಬಹುಮತ ಸಿಗದೇ ಇದ್ದರೆ ಯಾರೊಂದಿಗೂ ಸರ್ಕಾರ ರಚಿಸುವುದಿಲ್ಲ; ವಿರೋಧ ಪಕ್ಷದಲ್ಲಿ ಕೂರುತ್ತೇನೆ’ ಎಂದು ಕುಮಾರಸ್ವಾಮಿ ಅವರು ಚುನಾವಣೆಗೆ ಮೊದಲು ಘೋಷಿಸಿದ್ದರು. ಅತಂತ್ರ ಫಲಿತಾಂಶ ಬರುತ್ತಿದ್ದಂತೆ ಹೇಳದೇ ಕೇಳದೇ ಜೆಡಿಎಸ್‌ ನಾಯಕರ ಮನೆಯ ಬಾಗಿಲು ಬಡಿದ ಕಾಂಗ್ರೆಸ್‌ ನಾಯಕರು, ಬೇಷರತ್‌ ಬೆಂಬಲ ನೀಡುವುದಾಗಿ ಪ್ರಕಟಿಸಿದರು. ಇದರಿಂದಾಗಿ, ಜೆಡಿಎಸ್ ಸೆಳೆದು ಸರ್ಕಾರ ರಚಿಸುವ ಲೆಕ್ಕಾಚಾರದಲ್ಲಿದ್ದ ಬಿಜೆಪಿ ನಾಯಕರಿಗೆ ನಿರಾಶೆಯಾಯಿತು. ಬಳಿಕ ಕುಮಾರಸ್ವಾಮಿ ಮುಖ್ಯಮಂತ್ರಿಯೂ ಆದರು.

ಸಿದ್ದರಾಮಯ್ಯನವರೇ ಆತಂಕ: ಜೆಡಿಎಸ್‌ ತೊರೆದು ಬಂದ ಮೇಲೆ ‘ಅಪ್ಪ–ಮಕ್ಕಳ’ ವಿರುದ್ಧ ತೊಡೆ ತಟ್ಟಿ ಯುದ್ಧಕ್ಕೆ ಆಹ್ವಾನ ನೀಡುತ್ತಿದ್ದ ಸಿದ್ದರಾಮಯ್ಯನವರಿಗೆ ‘ಹಳೆಯ ಪಕ್ಷ’ದ ಜತೆಗೆ ಮೈತ್ರಿಯಲ್ಲ, ಮಾತುಕತೆ ಕೂಡ ಇಷ್ಟವಿರಲಿಲ್ಲ. ಪಕ್ಷದ ಹೈಕಮಾಂಡ್‌ ರಾಹುಲ್ ಗಾಂಧಿ ಕಟ್ಟಪ್ಪಣೆಗೆ ಬಾಗಿ, ಮೈತ್ರಿಗೆ ‘ಮೌನ’ ಸಮ್ಮತಿ ನೀಡಿದರು.

ಆದರೆ, ಒಳಗೊಳಗೆ ಕುದಿಯುತ್ತಾ, ಹೆಪ್ಪುಗಟ್ಟಿದ್ದ ಸಿಟ್ಟು ಅವರನ್ನು ಶಾಂತವಾಗಿ ಇರಲು ಬಿಡಲಿಲ್ಲ. ತಮ್ಮ ಅಸಮಾಧಾನಗಳನ್ನು ಹೊರಹಾಕುತ್ತಲೇ ಬಂದರು.ಈಗಿನ ಬೆಳವಣಿಗೆಗಳನ್ನು ನೋಡಿದರೆ ಈ ಸರ್ಕಾರ ಸುದೀರ್ಘ ಅವಧಿ ಬಾಳುವುದು ಅವರಿಗೆ ಬೇಕಿಲ್ಲ. ಬಹಳ ದಿನ ಹೀಗೇ ಬಿಟ್ಟರೆ ತಮ್ಮ ಜತೆಗಿರುವ ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಳ್ಳಬಲ್ಲ ‘ಸೂಜಿಗಲ್ಲಿನ ಗುಣ’ವನ್ನು ಕುಮಾರಸ್ವಾಮಿ ಬಳಸಬಲ್ಲರು.

ಶಾಸಕರು ದೂರವಾಗುವ ಜತೆಗೆ, ಕಾಂಗ್ರೆಸ್‌ ಕೂಡ ದುರ್ಬಲಗೊಳ್ಳಲಿದೆ ಎಂಬುದೂ ಅವರಿಗೆ ಗೊತ್ತಿಲ್ಲದ ಸಂಗತಿಯಲ್ಲ. ಅದಕ್ಕಾಗಿಯೇ ಅವರು ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನುತ್ತಾರೆ ಹಿರಿಯ ಕಾಂಗ್ರೆಸ್ ನಾಯಕರು.

ಸರ್ಕಾರದ ವಿರುದ್ಧ ಅಪಸ್ವರ ಎತ್ತಿರುವ ಶಾಸಕರ ಪೈಕಿ ಬಹುತೇಕರು ಸಿದ್ದರಾಮಯ್ಯ ಕಟ್ಟಾ ಬೆಂಬಲಿಗರು. ‘ಆಪರೇಷನ್ ಕಮಲ’ಕ್ಕೆ ಸಿಲುಕಿರುವ ನಾಲ್ವರು ಕೂಡ ಅವರ ಅತ್ಯಾಪ್ತರು.

‘ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ’ ಎಂದು ಕುಮಾರಸ್ವಾಮಿ ಸಂಪುಟದ ಇಬ್ಬರು ಸಚಿವರು ಹೇಳುತ್ತಿದ್ದಾರೆ. ತಮ್ಮ ನಾಯಕನ ಮೇಲೆ ವಿಶ್ವಾಸ ಇಲ್ಲದೇ ಸರ್ಕಾರದಲ್ಲಿ ಹೇಗೆ ಮುಂದುವರಿಯುತ್ತಿದ್ದಾರೋ ಎಂಬುದನ್ನು ‘ಸಿದ್ದರಾಮಯ್ಯ’ನವರೇ ಬಲ್ಲರು.

ಸರ್ಕಾರ ಉಳಿಯಬೇಕು ಎನ್ನುವವರುರಾಹುಲ್ ಗಾಂಧಿ ಹಾಗೂ ಸಚಿವರಾಗಿರುವ ಜಿ. ಪರಮೇಶ್ವರ ಅವರಂತಹ ಕೆಲವರು ಮಾತ್ರ ಎಂಬುದು ರಹಸ್ಯವೇನಲ್ಲ.

ಗೌಡರ ಪಟ್ಟು: ‘ಇನ್ನೂ ಎಷ್ಟು ದಿನ ಕಿರಿಕಿರಿ, ಟೀಕೆ, ಒತ್ತಡ ಸಹಿಸಿಕೊಂಡು ಈ ಹುದ್ದೆಯಲ್ಲಿ ಮುಂದುವರಿಯಲಿ’ ಎಂಬ ನಿಲುವಿಗೆ ಬಂದಂತಿರುವ ಕುಮಾರಸ್ವಾಮಿ, ಅದೇ ಕಾರಣಕ್ಕೆ ರಾಜೀನಾಮೆ ಕೊಟ್ಟು ನಡೆಯುವೆ ಎಂದು ಗಡಸು ಧ್ವನಿಯಲ್ಲಿ ಹೇಳಿಕೆ‌ಕೊಡುತ್ತಿದ್ದಾರೆ. ಈ ಪಕ್ಷದಲ್ಲಿ ಸರ್ಕಾರ ಬೇಕಿರುವುದು ಸಚಿವ ರೇವಣ್ಣ ಅವರಿಗೆ ಮಾತ್ರ.

‘ಮಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು’ ಎಂಬ ದೇವೇಗೌಡರ ಕನಸು ಈಡೇರಿದ್ದು, ಅವರ ಮುಂದಿರುವುದು ಲೋಕಸಭೆ ಚುನಾವಣೆ. ಸಿದ್ದರಾಮಯ್ಯನವರ ಆಟಗಳನ್ನು ಚೆನ್ನಾಗಿ ಬಲ್ಲ ಗೌಡರು ಅದಕ್ಕಾಗಿ ಪಟ್ಟು ಹಾಕಿರುವುದು ಗುಟ್ಟೇನಲ್ಲ.ಕನಿಷ್ಠ 8 ಲೋಕಸಭೆ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿ ಅವರು ಸಿಡಿದೆದ್ದಿದ್ದಾರೆ.

‘ಸರ್ಕಾರ ಇದ್ದರೆ ಲಾಭ; ಹೋದರೆ ನಷ್ಟವೇನೂ ಇಲ್ಲ’ ಎಂಬ ತರ್ಕಕ್ಕೆ ಬಂದಂತಿರುವ ಗೌಡರು ಹಾಕಿರುವ ಪಟ್ಟು ಸರ್ಕಾರವನ್ನು ಉಳಿಸಲಿದೆಯೇ ಇಲ್ಲವೇ ಎಂಬುದು ಯಕ್ಷ ಪ್ರಶ್ನೆ.

ಸರ್ಕಾರ ಬೀಳಿಸಿಯೇ ತೀರಬೇಕೆಂದಿರುವ ಬಿಜೆಪಿ ನಾಯಕರು, ‘ಆಪರೇಷನ್ ಕಮಲ’ದ ಬಲೆ ಹೆಣೆದು ಕುಳಿತಿದ್ದಾರೆ. ಸಂಖ್ಯಾಬಲ ಕೂಡದೇ ಇರುವುದರಿಂದ ಸದ್ಯಕ್ಕೆ ಹೆಜ್ಜೆಯನ್ನು ಹಿಂದಿಟ್ಟಂತಿರುವ ಅವರು ಕಾಯುವುದನ್ನು ಬಿಟ್ಟಿಲ್ಲ. ಅವರ ಜತೆಗಿರುವ ಕಾಂಗ್ರೆಸ್ ಶಾಸಕರು, ಸರ್ಕಾರ ಬಿದ್ದರೆ ಬಿಜೆಪಿ ಜತೆ ಹೋಗುವ, ಇಲ್ಲದಿದ್ದರೆ ಪಕ್ಷಕ್ಕೆ ಮರಳುವ ಇರಾದೆಯಲ್ಲಿ ಇದ್ದಾರೆ.

ಕಾಯುವ ಜನರಿಗಿಂತ ಕೆಡುಹಲು ಮುಂದಾಗಿರುವವರ ಸಂಖ್ಯೆಯೇ ಹೆಚ್ಚಿದ್ದು, ಮೈತ್ರಿ ಸರ್ಕಾರದ ಬುಡ ಅಲ್ಲಾಡತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT