ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಕ್ಕೆ ರಾಜಮಾರ್ಗ: ಬಂಡವಾಳ ಹೂಡಿಕೆಗೆ ರಾಜ್ಯ ಸರ್ಕಾರ ಉತ್ತೇಜನ

ಕೈಗಾರಿಕೆ ಸ್ಥಾಪನೆಗೆ ಇದ್ದ ಅಡ್ಡಿ ನಿವಾರಣೆಗೆ ಸುಗ್ರೀವಾಜ್ಞೆ: ಜಗದೀಶ ಶೆಟ್ಟರ್
Last Updated 25 ಜೂನ್ 2020, 20:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆ ಆರಂಭಿಸಲು ಇದ್ದ ಅಡ್ಡಿಗಳನ್ನು ನಿವಾರಿಸಿ, ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಿಗಳಿಗೆ ಉತ್ತೇಜನ ನೀಡುವತ್ತ ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಈ ಕುರಿತು ವಿವರ ನೀಡಿದರು.

‘ಕರ್ನಾಟಕ ಕೈಗಾರಿಕಾ ಸೌಲಭ್ಯಗಳ ಕಾಯ್ದೆ–2002’ಕ್ಕೆ ಸುಗ್ರೀವಾಜ್ಞೆ ಮೂಲಕತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಇದರಿಂದ ಕೈಗಾರಿಕಾ ಘಟಕಗಳ ಸ್ಥಾಪನೆಗೆತಕ್ಷಣವೇ ಅನುಮತಿ ಸಿಗಲಿದೆ.ಎನ್ಒಸಿ, ಬಿಲ್ಡಿಂಗ್‌ ಪ್ಲಾನ್‌, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣಪತ್ರ, ಏಕಗವಾಕ್ಷಿ ಅನುಮತಿ, ಭೂಪರಿವರ್ತನೆ ಇತ್ಯಾದಿಗಳನ್ನು ಶೀಘ್ರವೇ ಮಾಡಿಕೊಡಲಾಗುವುದು’ ಎಂದು ಅವರು ಹೇಳಿದರು.

‘ಕರ್ನಾಟಕ ಉದ್ಯೋಗ ಮಿತ್ರದಡಿ ಅರ್ಜಿ ಸಲ್ಲಿಸಿದ ತಕ್ಷಣ ಜಿಲ್ಲಾ ಸಮಿತಿ ಮತ್ತು ರಾಜ್ಯಮಟ್ಟದ ಉನ್ನತಾಧಿಕಾರ ಸಮಿತಿಗಳು ಒಪ್ಪಿಗೆ ನೀಡಿ ದೃಢೀಕರಿಸಬೇಕು. ಲ್ಯಾಂಡ್‌ ಆಡಿಟ್‌ ಸಮಿತಿಯು ಕೈಗಾರಿಕೆ ಸ್ಥಾಪನೆಗಾಗಿ ಅರ್ಜಿದಾರ ನಮೂದಿಸಿದ ಜಮೀನಿನ ಮಾಹಿತಿ ತರಿಸಿಕೊಂಡು ಪರಿಶೀಲಿಸುತ್ತದೆ. ಇವೆಲ್ಲದರ ಪರಿಶೀಲನೆ ಮುಗಿಸಿ ಒಪ್ಪಿಗೆ ನೀಡಿದ ತಕ್ಷಣವೇ ಉದ್ಯಮಿ ಕೈಗಾರಿಕೆ ಸ್ಥಾಪನೆಗೆ ಚಾಲನೆ ನೀಡಬಹುದು’ ಎಂದು ಶೆಟ್ಟರ್‌ ವಿವರಿಸಿದರು.

ಮುಖ್ಯವಾಗಿ, ಕೈಗಾರಿಕಾ ಘಟಕದ ಕಟ್ಟಡ ನಿರ್ಮಾಣ, ಯಂತ್ರೋಪಕರಣ ಸ್ಥಾಪನೆ ಇತ್ಯಾದಿ ಕೆಲಸಗಳನ್ನು ಮುಗಿಸಿಕೊಳ್ಳಬಹುದು. ಕೈಗಾರಿಕೆ ಸ್ಥಾಪನೆಗೆ ಮೊದಲೇ ಪಡೆಯಬೇಕಾಗಿದ್ದ ಪರಿಸರ ಅನುಮತಿ ಸೇರಿದಂತೆ ವಿವಿಧ ಬಗೆಯ‍ಪ್ರಮಾಣಪತ್ರಗಳು ಸಿಗುವ ತನಕ ಕಾಯಬೇಕಿಲ್ಲ. ಇವುಗಳನ್ನು ಮೂರು ವರ್ಷಗಳೊಳಗೆ ಪಡೆದರೆ ಸಾಕು ಎಂದರು.

‘ಇಂತಹದ್ದೊಂದು ನಿಯಮ ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ಇದೆ. ಅಲ್ಲಿ ಸಣ್ಣ ಉದ್ಯಮಗಳಿಗೆ ಮಾತ್ರ ಅನ್ವಯವಾಗುತ್ತದೆ. ನಮ್ಮಲ್ಲಿ ಎಲ್ಲ ಬಗೆಯ ಉದ್ಯಮಗಳಿಗೂ ಇದು ಅನ್ವಯವಾಗುತ್ತದೆ’ ಎಂದು ಅವರು ಹೇಳಿದರು.

ಮುದ್ರಾಂಕದಿಂದ ವಿನಾಯಿತಿ

‘ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ಬಂಡವಾಳ ಹೂಡುವವರಿಗೆ ಶೇ 100 ರಷ್ಟು ಮುದ್ರಾಂಕ ಶುಲ್ಕದ ವಿನಾಯಿತಿ ನೀಡಲು ತೀರ್ಮಾನಿಸಿದೆ. ರಾಜ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಲಾಗಿದೆ’ ಎಂದು ಅವರು ತಿಳಿಸಿದರು.

ಶಿಕ್ಷಣ, ಧಾರ್ಮಿಕ ಉದ್ದೇಶಕ್ಕೆ ಲೀಸ್ ಕಾಯಂ ಮಂಜೂರು

ಖಾಸಗಿ ಸಂಘ–ಸಂಸ್ಥೆಗಳು ಸರ್ಕಾರಿ ಜಮೀನನ್ನು ಲೀಸ್‌ ಮೇಲೆ ಪಡೆದಿದ್ದರೆ, ಅವುಗಳನ್ನು ಕಾಯಂ ಆಗಿ ಮಂಜೂರು ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

‘ಸರ್ಕಾರ ಯಾವ ಉದ್ದೇಶಕ್ಕಾಗಿ ಭೂಮಿ ನೀಡಿತ್ತೋ ಅದೇ ಉದ್ದೇಶಕ್ಕೆ ಬಳಸುತ್ತಿದ್ದರೆ ಮಾತ್ರ ದರ ನಿಗದಿ ಮಾಡಿ ಮಂಜೂರು ಮಾಡಲಾಗುವುದು’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ಲಬ್‌ಗಳಿಗೆ ಕಾಯಂ ಮಾಡಿಕೊಡುವುದಿಲ್ಲ. ಕೈಗಾರಿಕೆ, ಶಿಕ್ಷಣ ಸಂಸ್ಥೆ, ವೈದ್ಯಕೀಯ, ಬೇಸಾಯ, ಧಾರ್ಮಿಕ ಸಂಸ್ಥೆ ಇತ್ಯಾದಿಗಳಿಗೆ ಲೀಸ್‌ ಮೇಲೆ ಜಮೀನು ಪಡೆದವರಿಗೆ ಕಾಯಂ ಮಾಡಿಕೊಡಲಾಗುವುದು. ಇವರು ಪ್ರತಿ ವರ್ಷ ನವೀಕರಣಕ್ಕೆ ಅರ್ಜಿ ಸಲ್ಲಿಸುತ್ತಲೇ ಇರುತ್ತಾರೆ. ಸರ್ಕಾರ ನವೀಕರಣ ಮಾಡಿಕೊಡುತ್ತಲೇ ಇರುತ್ತದೆ. ಅದರ ಬದಲು ಕಾಯಂ ಆಗಿ ನೀಡಲು ತೀರ್ಮಾನ ಮಾಡಲಾಗಿದೆ ಎಂದರು.

ಕ್ಲಬ್‌ ಮತ್ತು ಆ ರೀತಿಯ ಉದ್ದೇಶ ಹೊಂದಿರುವ ಲೀಸ್‌ ಜಮೀನುಗಳನ್ನು ಕಾಯಂ ಮಾಡಿಕೊಡುವುದಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

ಸರ್ಕಾರದಿಂದ ಜಮೀನು ಪಡೆದು ಬಳಸದೇ ಉಳಿಸಿಕೊಂಡಿರುವವರು ಮತ್ತು ಅನ್ಯ ಉದ್ದೇಶಗಳಿಗೆ ಬಳಸಿದ್ದರೆ ಅಂತಹವರಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

***
ಕೈಗಾರಿಕಾ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರುವ ಹಿನ್ನೆಲೆಯಲ್ಲಿ ಇದೊಂದು ಐತಿಹಾಸಿಕ ನಿರ್ಧಾರ. ಉದ್ಯಮಿಗಳಿಗೆ ಇದರಿಂದ ಅನುಕೂಲವಾಗುತ್ತದೆ

-ಜಗದೀಶ ಶೆಟ್ಟರ್, ಕೈಗಾರಿಕ ಸಚಿವ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT