ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ವರ್ಗಾವಣೆಗೆ ಹೊಸ ನಿಯಮ: ಸಚಿವ ಡಾ. ಅಶ್ವತ್ಥನಾರಾಯಣ

ಪದವಿ ಪರೀಕ್ಷೆ: ಜೂನ್ ಮೊದಲ ವಾರ ದಿನಾಂಕ ನಿರ್ಧಾರ
Last Updated 21 ಮೇ 2020, 12:40 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆಗೆ ಈಗಿರುವ ಕಾನೂನು ರದ್ದುಗೊಳಿಸಿ, ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಉನ್ನತ ಶಿಕ್ಷಣದ ಪಠ್ಯಕ್ರಮ, ಪರೀಕ್ಷೆ, ಆನ್‌ಲೈನ್‌ ಶಿಕ್ಷಣ, ಉಪನ್ಯಾಸಕರ ವರ್ಗಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆಗುರುವಾರ ಸಭೆ ನಡೆಸಿದ ಬಳಿಕ ಡಾ.ಅಶ್ವತ್ಥನಾರಾಯಣ ಅವರು ಸುದ್ದಿಗಾರರ ಜತೆ ಮಾತನಾಡಿದರು.

'ಕಳೆದ 3-4 ವರ್ಷಗಳಿಂದ ಉಪನ್ಯಾಸಕರ ವರ್ಗಾವಣೆ ಆಗಿಲ್ಲ. ಹಾಗಾಗಿ ಈ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ಉಪನ್ಯಾಸಕರ ವರ್ಗಾವಣೆಯ ಈಗಿನ ಕಾನೂನು ರದ್ದುಪಡಿಸಿ ಹೊಸ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಗುವುದು. ವರ್ಗಾವಣೆ ಕುರಿತು ಕರಡು ನಿಯಮ ರೂಪಿಸಿ ಉಪನ್ಯಾಸಕರ ಸಂಘದವರಿಗೆ ಕಳುಹಿಸಲಾಗುವುದು. ಜತೆಗೆ ಸಂಬಂಧಪಟ್ಟ ಎಲ್ಲರಿಗೂ ಕಳುಹಿಸಿ, ಅವರಿಂದ ಸಲಹೆಗಳನ್ನು ಪಡೆಯಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಕಾನೂನು ತಿದ್ದುಪಡಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು,' ಎಂದು ತಿಳಿಸಿದರು.

'ಹೊಸ ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ನೇಮಕ ತಕ್ಷಣ ಆಗಬೇಕೆಂದು ವಿಧಾನಪರಿಷತ್‌ ಸದಸ್ಯರು ಒತ್ತಾಯಿಸಿದ್ದಾರೆ. ಈ ಸಂಬಂಧ ಅಧಿಸೂಚನೆ ಹೊರಡಿಸಿ, ನೇಮಕಕ್ಕೆ ಸೂಕ್ತ ಕ್ರಮ ವಹಿಸಲಾಗುವುದು. ಶೈಕ್ಷಣಿಕ ವರ್ಷ ಪ್ರಾರಂಭವಾಗುವ ವೇಳೆಗೆ ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ನೇಮಕ ಆಗುತ್ತದೆ,' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜೂನ್‌ ಮೊದಲ ವಾರ ಪರೀಕ್ಷೆ ಮಾಹಿತಿ

'ಉನ್ನತ ಶಿಕ್ಷಣದ ಪರೀಕ್ಷೆ ಕುರಿತು ಜೂನ್‌ ಮೊದಲ ವಾರ ವಿವರ ಹಂಚಿಕೊಳ್ಳಲಾಗುವುದು. ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಕೊವಿಡ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಆತಂಕ ಪರಿಹರಿಸುವ ನಿಟ್ಟಿನಲ್ಲಿ ಸದಸ್ಯರು ನೀಡಿರುವ ಸಲಹೆಗಳನ್ನು ಪರಿಗಣಿಸಿ ಸಮಸ್ಯೆಗಳಿದ್ದರೆ ಅವುಗಳನ್ನು ಬಗೆಹರಿಸಲಾಗುವುದು,' ಎಂದು ತಿಳಿಸಿದರು.

'ಪ್ರಥಮ, ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ತರಗತಿಗಳು, ಪಠ್ಯಕ್ರಮ ಹಾಗೂ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳಿರುವ ಸರಳ ಪರೀಕ್ಷೆ ನಡೆಸುವ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಶೈಕ್ಷಣಿಕ ಸಾಲಿನ ರಜೆ ಕಡಿತಗೊಳಿಸಿ ಪಠ್ಯಕ್ರಮ ಪೂರ್ಣಗಳಿಸಬಹುದೆಂಬ ಸಲಹೆಯನ್ನು ವಿಧಾನ ಪರಿಷತ್ತಿನ ಸದಸ್ಯರು ನೀಡಿದ್ದಾರೆ,' ಎಂದು ಹೇಳಿದರು.

ಆನ್‌ಲೈನ್‌ ತರಗತಿ ಬಗ್ಗೆ ಮೆಚ್ಚುಗೆ

'ಕೊವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಸರ್ಕಾರ ಆಯೋಜಿಸಿದ್ದ ಆನ್‌ಲೈನ್‌ ತರಗತಿ, ಯೂಟ್ಯೂಬ್‌ ಪಾಠ, ವಾಟ್ಸ್‌ಆ್ಯಪ್‌ ಮೂಲಕ ಪಠ್ಯ ಸಾರಂಶ, ಸಿಇಟಿ ಹಾಗೂ ನೀಟ್‌ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಗೆಟ್ ಸೆಟ್ ಗೊ ತರಬೇತಿ ಬಗ್ಗೆ ಮೇಲ್ಮನೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ತಮ್ಮ ಬೆಂಬಲ ಇರುವುದಾಗಿ ಭರವಸೆ ನೀಡಿದ್ದಾರೆ,' ಎಂದು ಅವರು ತಿಳಿಸಿದರು.

ಪಠ್ಯಕ್ರಮ ಪರಿಷ್ಕರಣೆ

'ಹೊಸ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಅದರ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಟಾಸ್ಕ್‌ ಫೋರ್ಸ್‌ ರಚನೆ ಮಾಡಲಾಗಿದೆ. ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಡಿಪ್ಲೊಮಾ ಪಠ್ಯಕ್ರಮದಲ್ಲಿ ಬದಲಾವಣೆ ತರುವ ಮೂಲಕ ಅದನ್ನು ಉದ್ಯೋಗ ಆಧರಿತ ಕೋರ್ಸ್‌ ಆಗಿ ಪರಿವರ್ತಿಸಲಾಗುವುದು. ಡಿಪ್ಲೊಮಾ ಕೋರ್ಸ್‌ ಅನ್ನು ಮತ್ತಷ್ಟು ಪರಿಣಾಮಕಾರಿ ರೂಪಿಸಲು ನಾಸ್ಕಂ ಜತೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ, ಪದವಿ ತರಗತಿಗಳ ಪಠ್ಯಕ್ರಮ ಪರಿಷ್ಕರಣೆ ಮಾಡಲಾಗುವುದು,' ಎಂದು ವಿವರಿಸಿದರು.

ಸಂಬಳ ವಿಳಂಬವಾಗದಂತೆ ಕ್ರಮ

'ಅತಿಥಿ ಉಪನ್ಯಾಸಕರ ಸಂಬಳ ತಡವಾಗುತ್ತಿರುವ ವಿಚಾರದ ಬಗ್ಗೆ ಈಗಾಗಲೇ ಗಮನಹರಿಸಲಾಗಿದೆ. ಇದು ಬಹಳ ಹಳೆಯ ಸಮಸ್ಯೆಯಾಗಿದ್ದು, ಪರಿಹರಿಸಲು ಯೋಜನಾಬದ್ಧವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಅತಿಥಿ ಉಪನ್ಯಾಸಕರ ವೇತನಕ್ಕೆ ವ್ಯವಸ್ಥಿತವಾಗಿ ಬಜೆಟ್ ರೂಪಿಸುವ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು. ಜುಲೈ ತಿಂಗಳಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು,' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT