ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಕೆಗೆ 22ರವರೆಗೆ ಅವಕಾಶ

ಜೂನ್‌ 8ರಂದು ನೈರುತ್ಯ ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರದ ಚುನಾವಣೆ
Last Updated 17 ಮೇ 2018, 8:49 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಜೂನ್‌ 8ಕ್ಕೆ ನಿಗದಿಯಾಗಿದ್ದು, ಇದೇ 22ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಇಲ್ಲಿ ಬುಧವಾರ ತಿಳಿಸಿದರು.

23ರಂದು ನಾಮಪತ್ರ ಗಳ ಪರಿಶೀಲನೆ ನಡೆಯಲಿದೆ. ನಾಮ ಪತ್ರ ವಾಪಸ್‌ ಪಡೆಯಲು ಇದೇ 25 ಕೊನೆ ದಿನ. ಜೂನ್‌ 8ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಜೂನ್‌ 12ರಂದು ಮತ ಎಣಿಕೆ ನಡೆಯಲಿದೆ. 15ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಈ ಚುನಾವಣೆಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ನಾಮಪತ್ರ ಸಲ್ಲಿಕೆ, ಮತ ಎಣಿಕೆ ಪ್ರಕ್ರಿಯೆ ಮೈಸೂರಿನಲ್ಲಿ ನಡೆಯಲಿದೆ ಎಂದರು.

ನೈರುತ್ಯ ಕ್ಷೇತ್ರವು ಆರು ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಕೊಡಗು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ (ಹೊನ್ನಾಳಿ, ಚನ್ನಗಿರಿ ತಾಲ್ಲೂಕುಗಳು ಮಾತ್ರ) ಈ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ. ಇದೇ 15ರಿಂದ ಜೂನ್‌ 15ರವರೆಗೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಪದವೀಧರರ ಮತದಾರರ ಪಟ್ಟಿಯಲ್ಲಿ 8,279 ಮತ್ತು 3,154 ಮತದಾರರು ಇದ್ದಾರೆ. ಕಳೆದ ಬಾರಿ 9,361 ಪದವೀಧರ ಮತದಾರರು, 1,855 ಶಿಕ್ಷಕ ಮತದಾರರು ಪಟ್ಟಿಯಲ್ಲಿದ್ದರು’ ಎಂದು ಮಾಹಿತಿ ನೀಡಿದರು.

ನೀತಿ ಸಂಹಿತೆ ಪಾಲನೆ ನಿಗಾ ನಿಟ್ಟಿನಲ್ಲಿ ತಂಡಗಳನ್ನು ರಚಿಸಲಾಗಿದೆ. ಎಂಸಿಸಿ ತಂಡ, ವಿಚಕ್ಷಣಾ ದಳ, ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಆರು ಕಡೆ ಚೆಕ್‌ ಪೋಸ್ಟ್‌ಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕುವಾರು ತರೀಕೆರೆಯಲ್ಲಿ ಎಂ.ಸಿ.ಹಳ್ಳಿ, ಕಡೂರಿನಲ್ಲಿ ತಂಗಲಿ, ಚಿಕ್ಕಮಗಳೂರಿನಲ್ಲಿ ಮಾಗಡಿ ಕೈಮರ, ಮೂಡಿಗೆರೆಯಲ್ಲಿ ಕೊಟ್ಟಿಗೆಹಾರ, ಶೃಂಗೇರಿಯಲ್ಲಿ ಕೆರೆಕಟ್ಟೆ ಹಾಗೂ ಎನ್‌.ಆರ್.ಪುರದಲ್ಲಿ ಮುತ್ತಿನಕೊಪ್ಪದಲ್ಲಿ ತೆರೆಯಲು ವ್ಯವಸ್ಥೆ ಮಾಡಲಾಗಿದೆ. ನೀತಿ ಸಂಹಿತೆ ಪಾಲನೆ ನಿಗಾ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದರು.

ಪದವೀಧರ ಕ್ಷೇತ್ರದ ಚುನಾವಣೆಗೆ 15 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಎನ್‌ಆರ್‌ಪುರದಲ್ಲಿ ಮಿನಿ ವಿಧಾನಸೌಧದ ಸಭಾಂಗಣ, ತರೀಕೆರೆಯಲ್ಲಿ ಮಿನಿ ವಿಧಾನಸೌಧದ ಸಭಾಂಗಣ ಮತ್ತು ಕಂದಾಯ ಸಭಾಂಗಣ, ಕೊಪ್ಪದಲ್ಲಿ ತಾಲ್ಲೂಕು ಕಚೇರಿ, ಕಡೂರಿನಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ ಹೊಸ ಕಟ್ಟಡ ಮತ್ತು ಹಳೆಯ ಕಟ್ಟಡ, ಹಳೆಯ ತಾಲ್ಲೂಕು ಕಚೇರಿ, ಶೃಂಗೇರಿಯಲ್ಲಿ ತಾಲ್ಲೂಕು ಕಚೇರಿಯ ಕಂದಾಯ ಸಭಾಂಗಣ, ಚಿಕ್ಕಮಗಳೂರಿನಲ್ಲಿ ಬೇಲೂರು ರಸ್ತೆಯ ಸರ್ಕಾರಿ ಪಿಯು ಕಾಲೇಜಿನ ಉತ್ತರ ಭಾಗದ ಕೊಠಡಿ ಸಂಖ್ಯೆ 1, 3 ಮತ್ತು 5, ಬೇಲೂರು ರಸ್ತೆಯ ಸರ್ಕಾರಿ ಪ್ರೌಢಶಾಲೆಯ ಪಶ್ಚಿಮ ಭಾಗದ ಕೊಠಡಿ ಸಂಖ್ಯೆ 8, 10, 12 ಹಾಗೂ ಮೂಡಿಗೆರೆಯಲ್ಲಿ ಮಿನಿ ವಿಧಾನಸೌಧದಲ್ಲಿನ ತಾಲ್ಲೂಕು ಕಚೇರಿಯ ಕಂದಾಯ ಸಭಾಂಗಣ ಗುರುತಿಸಲಾಗಿದೆ ಎಂದರು.

ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನರಸಿಂಹರಾಜಪುರದಲ್ಲಿ ತಾಲ್ಲೂಕು ಕಚೇರಿ ಕಂದಾಯ ಸಭಾಂಗಣ, ತರೀಕೆರೆಯಲ್ಲಿ ಮಿನಿ ವಿಧಾನಸೌಧದ ಸಭಾಂಗಣ, ಕೊಪ್ಪದಲ್ಲಿ ತಾಲ್ಲೂಕು ಕಚೇರಿ, ಕಡೂರಿನಲ್ಲಿ ತಾಲ್ಲೂಕು ಕಚೇರಿ ಸಭಾಂಗಣ, ಶೃಂಗೇರಿಯಲ್ಲಿ ತಾಲ್ಲೂಕು ಕಚೇರಿ ಸಭಾಂಗಣ, ಚಿಕ್ಕಮಗಳೂರಿನಲ್ಲಿ ಬೇಲೂರು ರಸ್ತೆಯ ಸರ್ಕಾರಿ ಪಿಯು ಕಾಲೇಜಿನ ಉತ್ತರ ಭಾಗದ ಕೊಠಡಿ ಸಂಖ್ಯೆ 7 ಹಾಗೂ ಮೂಡಿಗೆರೆ ಮಿನಿ ವಿಧಾನಸೌಧದಲ್ಲಿ ಸಭಾಂಗಣ ಗುರುತಿಸಲಾಗಿದೆ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT