ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟದಲ್ಲಿ ನಾಲ್ಕು ಹೊಸ ಜೇಡ ಪ್ರಭೇದಗಳು: ವಿಶ್ವದ ಗಮನ ಸೆಳೆದ ಸಂಶೋಧನೆ

Last Updated 15 ಡಿಸೆಂಬರ್ 2018, 6:11 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗ ವಿಶ್ವವಿದ್ಯಾಲಯದ ಪ್ರಾಣಿಶಾಶ್ತ್ರ ವಿಭಾಗದಲ್ಲಿ ಅರೆಮಲೆನಾಡು ಪ್ರದೇಶದಲ್ಲಿರುವ ಜೇಡಗಳ ವೈವಿಧ್ಯದ ಬಗ್ಗೆ ಸಂಶೋಧನೆ ಮಾಡುತ್ತಿರುವ ಪಿಎಚ್‌ಡಿ ವಿದ್ಯಾರ್ಥಿ ಎಸ್‌.ಎಂ.ಪ್ರಶಾಂತಕುಮಾರ ನಾಲ್ಕು ಹೊಸ ಜೇಡ ಪ್ರಭೇದಗಳನ್ನು ಪತ್ತೆ ಹಚ್ಚಿದ್ದಾರೆ. ಅವರ ಸಂಶೋಧನೆಯು ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಸಿದ್ಧ ನಿಯತಕಾಲಿಕೆ ‘ಜೂಟಾಕ್ಸಾ’ದಲ್ಲಿ ಪ್ರಕಟವಾಗಿದೆ.

ತರೀಕೆರೆ ತಾಲ್ಲೂಕು ಸುಣ್ಣದಹಳ್ಳಿ ಗ್ರಾಮದ ಪ್ರಶಾಂತಕುಮಾರ ತಮ್ಮ ಹುಟ್ಟೂರಿನಲ್ಲಿ ಎರಡು ಮತ್ತು ತಾವು ಅಧ್ಯಯನ ಮಾಡುತ್ತಿರುವ ಕ್ಯಾಂಪಸ್‌ನಲ್ಲಿ ಎರಡು ಹೊಸ ಪ್ರಭೇದಗಳನ್ನು ಪತ್ತೆಹಚ್ಚಿ ವಿಶ್ವದ ಗಮನ ಸೆಳೆದಿದ್ದಾರೆ. ತಮ್ಮ ಪಿಎಚ್‌ಡಿ ಪ್ರೌಢಪ್ರಬಂಧದಕ್ಕಾಗಿ ಸಂಶೋಧನೆ ನಡೆಸುವ ಸಂದರ್ಭ, ರಾಜ್ಯದ ಅರೆಮಲೆನಾಡು ಪ್ರದೇಶದಲ್ಲಿ 28 ಕುಟುಂಬಗಳಿಗೆ ಸೇರಿದ 147 ಜೇಡ ಪ್ರಭೇದಗಳನ್ನು ಗುರುತಿಸಿದ್ದರು.

‘ನಾನು ಗುರುತಿಸಿದ ಪ್ರಭೇದಗಳ ಪೈಕಿ ಒಂಬತ್ತು ಪ್ರಭೇದದ ಜೇಡಗಳು ಭಾರತದಲ್ಲಿ ಮಾತ್ರವೇ ಕಂಡು ಬರುತ್ತವೆ. 12 ಪ್ರಭೇದಗಳು ಈ ಹಿಂದೆ ವಿಶ್ವದ ಇತರ ಭಾಗಗಳಲ್ಲಿ ಪತ್ತೆಯಾಗಿದ್ದವು. ಆದರೆ ಭಾರತದಲ್ಲಿ ಪತ್ತೆಯಾಗಿವುದು ಇದೇ ಮೊದಲು. ಜಗತ್ತಿನಲ್ಲಿ ಒಟ್ಟು 47,500 ಜೇಡ ಪ್ರಭೇದಗಳಿವೆ. ಭಾರತದಲ್ಲಿ 1686 ಪ್ರಭೇದಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಜೇಡಗಳ ಕುರಿತ ಸಂಶೋಧನೆ ಹೆಚ್ಚಾಗಿ ನಡೆದಿಲ್ಲ’ ಎನ್ನುತ್ತಾರೆ ಪ್ರಶಾಂತಕುಮಾರ.

ಸಂಶೋಧಕ ಎಸ್‌.ಎಂ.ಪ್ರಶಾಂತಕುಮಾರ
ಸಂಶೋಧಕ ಎಸ್‌.ಎಂ.ಪ್ರಶಾಂತಕುಮಾರ

ಪ್ರೊ.ಎಂ.ವೆಂಕಟೇಶ್ವರಲು ಅವರ ಮಾರ್ಗದರ್ಶನದಲ್ಲಿ ಪ್ರಶಾಂತಕುಮಾರ ಅವರ ಸಂಶೋಧನೆ ಸಾಗಿದೆ. ತಾವು ಗುರುತಿಸಿದ ಪ್ರಭೇದಗಳು ಮತ್ತು ಸಂಗ್ರಹಿಸಿದ ಮಾದರಿಗಳ ಬಗ್ಗೆ ಕೇರಳದ ಕೊಚಿನ್‌ನಲ್ಲಿರುವ ಸೇಕ್ರೆಡ್ ಹಾರ್ಟ್ ಕಾಲೇಜಿನ ‘ಡಿವಿಷನ್ ಆಫ್ ಅರ್ಕ್‌ನಾಲಜಿ’ (ಜೇಡಗಳ ಅಧ್ಯಯನ) ಪ್ರಯೋಗಾಲಯದ ತಜ್ಞರ ಜೊತೆಗೆ ವಿಚಾರ ವಿನಿಮಯ ನಡೆಸುವ ಮೂಲಕ ದೃಢಪಡಿಸಿಕೊಂಡಿದ್ದಾರೆ. ಪ್ರಶಾಂತ ಕುಮಾರ ಅವರ ಸಂಶೋಧನೆಗೆಆರ್ಕ್‌ನಾಲಜಿ ಪ್ರಯೋಗಾಲಯದ ಮುಖ್ಯಸ್ಥರಾದ ಪ್ರೊ.ಪಿ.ಎ.ಸಬ್ಯಾಸ್ಟಿಯನ್ ಮತ್ತು ತಂಡವೂ ಅಗತ್ಯ ಸಹಕಾರ ನೀಡಿದೆ.

ಕಂಬಾಲಿಡಾ ಡಿಯೋರ್ಸಾ (Cambalida deorsa)
ಕಂಬಾಲಿಡಾ ಡಿಯೋರ್ಸಾ (Cambalida deorsa)

‘ಜ್ಞಾನ ಸಹ್ಯಾದ್ರಿ’ಯಲ್ಲಿ ಓಡಿ ಹಿಡಿಯುವ ಬೇಟೆಗಾರರು

ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್ ಜ್ಞಾನ ಸಹ್ಯಾದ್ರಿ ಆವರಣದಲ್ಲಿಯೇ ಎರಡು ಹೊಸ ಜೇಡ ಪ್ರಭೇದಗಳು ಪತ್ತೆಯಾಗಿವೆ. ಇವುಗಳನ್ನು ಕಂಬಾಲಿಡಾ ಡಿಯೋರ್ಸಾ (Cambalida deorsa) ಮತ್ತು ಟ್ರೊಪಿಝೋಡಿಯಂ ಕಲಾಮಿ (Tropizodium kalami) ಎಂದು ಗುರುತಿಸಲಾಗಿದೆ.

ಕಂಬಾಲಿಡಾ ಡಿಯೋರ್ಸಾ ಪ್ರಭೇದವು ಕೊರಿನೀಡೆ ಜೇಡ ಕುಟುಂಬಕ್ಕೆ ಸೇರಿದೆ. ಈ ಜೇಡದ ಮೈಬಣ್ಣ ಕಂದು. 3.7 ಮಿ.ಮೀ ಉದ್ದ, 1.36 ಮಿ.ಮೀ ಅಗಲ ಮತ್ತು 0.58 ಮಿ.ಮೀ ಎತ್ತರವಿದೆ. ಇದು ಆಕಾರದಲ್ಲಿ ಇರುವೆಯನ್ನು ಹೋಲುವುದರಿಂದ ಇದಕ್ಕೆ ‘ಆಂಟ್ ಮಿಮಿಕಿಂಗ್’ ಎಂದೂ ಕರೆಯಲಾಗುತ್ತದೆ. ‘ಜೇಡಗಳ ಕಣ್ಣಿನ ಆಕಾರವನ್ನು ಪರಿಗಣಿಸಿ ಅವುಗಳ ಕುಟುಂಬ ಪತ್ತೆಹಚ್ಚಲಾಗುತ್ತದೆ’ ಎನ್ನುತ್ತಾರೆ ಸಂಶೋಧನಾರ್ಥಿ ಪ್ರಶಾಂತ ಕುಮಾರ. ಈ ಕುಟುಂಬದ ಜೇಡಗಳಲ್ಲಿ ಎರಡು ಸಾಲುಗಳಲ್ಲಿ ಎಂಟು ಕಣ್ಣುಗಳು ಗೋಚರಿಸುತ್ತವೆ.

ನೆಲದ ಮೇಲೆ ಒಣಎಲೆಗಳ ಕೆಳಗೆ ವಾಸಿಸುತ್ತವೆ. ನೂಲಿನ ಎಳೆಗಳ ಮೂಲಕ ಎಲೆಗಳನ್ನು ಬೆಸೆದು, ಎಲೆಗೆಳಿಗೆ ಅಂಟಿಕೊಂಡಿರುತ್ತವೆ.ನೆಲದ ಮೇಲೆ ಓಡಾಡುವ ಕೀಟಗಳೇ ಇವುಗಳ ಆಹಾರ. ಹೀಗಾಗಿಯೇ ಈ ಪ್ರಭೇದವನ್ನು ‘ಗ್ರೌಂಡ್ ರನ್ನರ್ಸ್’ ಎನ್ನುತ್ತಾರೆ. ಅಹಾರ ಬೇಟೆಗೆ ಬಲೆ ಕಟ್ಟದ ಈ ಕೀಟಗಳು ನೆಲದ ಮೇಲೆ ಓಡಾಡುವ ಕೀಟಗಳನ್ನು ಬೇಟಿಯಾಡಿ (ರನ್ ಅಂಡ್ ಚೇಸ್) ಬದುಕುತ್ತವೆ. ಈ ಜೇಡಗಳನ್ನು ವರ್ಷವಿಡಿ ನೋಡಬಹುದು.

ಟ್ರೊಪೊಝೋಡಿಯಂ ಕಲಾಮಿ (Tropizodium kalami)

ಇದು ಕೇರಳದ ಎರ್ನಾಕುಲಂನಲ್ಲಿ ಧ್ರುವ ಪ್ರಜಾಪತಿ ಅವರು ಮೊದಲ ಬಾರಿಗೆ ಗುರುತಿಸಿದ್ದರು. ನಂತರದ ದಿನಗಳಲ್ಲಿ ಕುವೆಂಪು ವಿವಿ ಆವರಣದಲ್ಲಿ ಗುರುತಿಸಲಾಯಿತು.1.86 ಮಿ.ಮೀ ಉದ್ದ, 0.55 ಮಿ.ಮೀ ಅಗಲ ಹಾಗೂ 0.40 ಮಿ.ಮೀ ಎತ್ತರದ ಇದು ಗಾತ್ರದಲ್ಲಿ ಪುಟಾಣಿ. ಈ ಜೇಡಕ್ಕೆ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಗೌರವಾರ್ಥ ‘ಟ್ರೊಪಿಝೋಡಿಯಂ ಕಲಾಮಿ’ ಎಂದು ಹೆಸರಿಸಲಾಗಿದೆ. ಈ ಜೇಡವೂ ನೆಲವಾಸಿ.ಮಣ್ಣಿನ ಮೇಲ್ಪದರದಲ್ಲಿ ಗೂಡು ಕಟ್ಟಿಕೊಂಡು ವಾಸಿಸುವ ಈ ಜೇಡ ಬಲೆ ಕಟ್ಟುವುದಿಲ್ಲ ಎನ್ನುವುದೇ ವಿಶೇಷ. ನೆಲದ ಮೇಲೆ ಓಡಾಡುವ ಕೀಟಗಳನ್ನು ಬೇಟೆಯಾಡುತ್ತದೆ.

ಈ ಹೆಣ್ಣು ಜೇಡಗಳ ಎದುರು ಗಂಡು ಬಡಪಾಯಿ

ಮ್ಯುಯೋಟಿಪ ಪಿಕ್ಚುರೇಟಾ (Meotipa picturata)

ಥೆರಿಡಿಡೆ ಕುಟುಂಬಕ್ಕೆ ಸೇರಿದ ಈ ಜೇಡಗಳ ಪೈಕಿ ಹೆಣ್ಣುಜೇಡವನ್ನು ಸೈಮನ್ ಎಂಬ ಕೀಟಶಾಸ್ತ್ರಜ್ಞ ಪತ್ತೆಹಚ್ಚಿದ್ದರು. ಪ್ರಶಾಂತಕುಮಾರ ಅವರು ಇದೇ ಮೊದಲ ಬಾರಿಗೆ ಈ ಪ್ರಭೇದದ ಗಂಡುಜೇಡವನ್ನು ಗುರುತಿಸಿ, ವಿಶ್ಲೇಷಿಸಿದ್ದಾರೆ. ಈ ಪ್ರಭೇದದ ಜೇಡಗಳ ಅಂಗರಚನೆಯನ್ನೂ ಮರು ವ್ಯಾಖ್ಯಾನಿಸಿದ್ದಾರೆ. ಈ ಪ್ರಭೇದದಲ್ಲಿ ಗಂಡುಜೇಡವು ಹೆಣ್ಣುಜೇಡಕ್ಕಿಂತ ಮೂರುಪಟ್ಟು ಚಿಕ್ಕದಿರುತ್ತದೆ. ಗಂಡು ಜೇಡ 1.88 ಮಿ.ಮೀ. ಉದ್ದವಿದ್ದರೆ, ಹೆಣ್ಣು ಜೇಡದ ಉದ್ದ 5.60 ಮಿ.ಮೀ. ಇವೂ ಎಲೆಗಳ ಹಿಂಭಾಗದಲ್ಲಿ ಬಲೆ ಹೆಣೆದುಕೊಂಡು ವಾಸಿಸುತ್ತವೆ. ಕೇರಳದಲ್ಲಿ ಪತಿರಮನಲ್ ದ್ವೀಪದಲ್ಲಿ ಫಾದರ್ ಜೋಬಿ ಅವರೂ ಈ ಜೇಡವನ್ನು ಗುರುತಿಸಿದ್ದರು.

ಎಲೆಯ ಹಿಂಬದಿಯಲ್ಲಿ ಮ್ಯುಯೋಟಿಪ ಪಿಕ್ಚುರೇಟಾ
ಎಲೆಯ ಹಿಂಬದಿಯಲ್ಲಿ ಮ್ಯುಯೋಟಿಪ ಪಿಕ್ಚುರೇಟಾ

ಮ್ಯುಯೋಟಿಪ ಮುಲ್ಟುಮಾ (Meotipa multuma)

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಸುಣ್ಣದಹಳ್ಳಿಯಲ್ಲಿ ಕಂಡು ಬಂದಿರುವ ಈ ಜೇಡವು ಥೆರಿಡಿಡೆ ಕುಟುಂಬಕ್ಕೆ ಸೇರಿದೆ. ಹೆಣ್ಣು ಜೇಡಗಳ ಸಂತಾನೋತ್ಪತ್ತಿ ಅಂಗದ ಭಾಗವಾಗಿರುವ ‘ಕಾಪೊಲೊಟರಿ ಡಕ್ಟ್‌’ (ಯೋನಿ ನಳಿಕೆ) ನೀಳವಾಗಿದೆ. ಇದೇ ಕಾರಣಕ್ಕೆ ಈ ಜೇಡಕ್ಕೆ ‘ಮುಲ್ಟುಮಾ’ ಎಂದು ಹೆಸರಿಸಲಾಗಿದೆ. (ಲ್ಯಾಟಿನ್ ಭಾಷೆಯಲ್ಲಿ ಮುಲ್ಟುಮ್ ಎಂದರೇ ಉದ್ದ ಎಂದರ್ಥ). ಇದು ಕಂಬಾಲಿಡಾ ಡಿಯೋರ್ಸಾಗಿಂತ ಚಿಕ್ಕದು. ಬಿಳಿ ಬಣ್ಣದ ಈ ಜೇಡಗಳ ಕಾಲು ಮತ್ತು ದೇಹದ ಮೇಲ್ಬಾಗದಲ್ಲಿ 12 ರಿಂದ 15 ಭರ್ಜಿಯಾಕಾರದ ಮುಳ್ಳುಗಳಿವೆ. ಹಸಿರು ಎಲೆಗಳ ಕೆಳಭಾಗದಲ್ಲಿ ಮಾತ್ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಕಾಣಿಸಿಕೊಳ್ಳುತ್ತವೆ. ನೂಲುಸ್ರವಿಸಿ, ಬಲೆ ಹೆಣೆದು ಬೇಟೆಯಾಗುವ ಜೀವನಕ್ರಮವ್ನು ಅನುಸರಿಸುತ್ತವೆ. 2.59 ಮಿ.ಮೀ ಉದ್ದ, 0.88 ಮಿ.ಮೀ ಅಗಲ ಮತ್ತು 0.55 ಮಿ.ಮೀ ಎತ್ತರ ಇರುತ್ತವೆ.

ಸಂಶೋಧಕ ಎಸ್‌.ಎಂ.ಪ್ರಶಾಂತಕುಮಾರಅವರ ಇಮೇಲ್ ವಿಳಾಸ:sprashanth.az@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT