ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಸ್ಥಳಕ್ಕೆ ತೆರಳಲು ನೋಟಿಸ್‌

ಮಡಿಕೇರಿ ನಿವಾಸಿಗಳಿಗೆ ಮಳೆಗಾಲದಲ್ಲಿ ಮತ್ತೊಂದು ಸಂಕಟ, ಇತ್ತ ಬಾಡಿಗೆ ಮನೆಗಳೂ ಸಿಗುತ್ತಿಲ್ಲ
Last Updated 15 ಜೂನ್ 2019, 14:03 IST
ಅಕ್ಷರ ಗಾತ್ರ

ಮಡಿಕೇರಿ: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ‘ಮಂಜಿನ ನಗರಿ’ ನಿವಾಸಿಗಳಿಗೆ ಮತ್ತೊಂದು ಚಿಂತೆ, ಸಂಕಟ ಆರಂಭವಾಗಿದೆ.

ಕಳೆದ ವರ್ಷದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ, ಸಾಕಷ್ಟು ಅನಾಹುತ ಸಂಭವಿಸಿತ್ತು. ನಗರದ ಹಲವು ಬಡಾವಣೆಗಳಲ್ಲಿ ಮನೆಗಳು ಕುಸಿದಿದ್ದವು. ಈ ಬಾರಿ ಜೋರು ಮಳೆಗಾಲ ಆರಂಭಗೊಳ್ಳುವುದಕ್ಕೂ ಮೊದಲು ನಗರಸಭೆ ಅಪಾಯ ಸ್ಥಳದಲ್ಲಿ ವಾಸವಿದ್ದವರ ಸ್ಥಳಾಂತರಕ್ಕೆ ಮುಂದಾಗಿದೆ.

ನಗರದ ಹಲವು ಬಡಾವಣೆಗಳಲ್ಲಿ ಬೆಟ್ಟಗುಡ್ಡಗಳ ಮೇಲೆ ಮನೆ ನಿರ್ಮಿಸಿದ್ದವರಿಗೆ ನಗರಸಭೆ ನೋಟಿಸ್ ಜಾರಿ ಮಾಡಿದೆ. ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ, ಆಜಾದ್‌ ನಗರ, ಪುಟಾಣಿ ನಗರದ ಅಪಾಯದ ಸ್ಥಳದಲ್ಲಿದ್ದವರಿಗೆ ಹಲವರಿಗೆ ನೋಟಿಸ್‌ ನೀಡಲಾಗಿದೆ.

ನೋಟಿಸ್‌ನಲ್ಲಿ ಏನಿದೆ?: 2018ನೇ ಸಾಲಿನ ಮಳೆಯ ಭಯದ ವಾತಾವರಣ ಇನ್ನು ಮರೆಯುವ ಮುನ್ನ 2019ರ ಮಳೆಗಾಲ ಆರಂಭವಾಗಿದೆ.

2018ನೇ ಸಾಲಿನಲ್ಲಿ ಆದ ಮಳೆಗೆ ಆದ ನಷ್ಟ ತೊಂದರೆಗಳು ಮರುಕಳುಸದೇ ಇರಲು ಅಪಾಯ ಸ್ಥಿತಿಯಲ್ಲಿರುವ ಸ್ಥಳಗಳಲ್ಲಿನ ಮನೆಗಳು, ಎತ್ತರ ಪ್ರದೇಶಗಳಲ್ಲಿರುವ ಮನೆಗಳು ಮತ್ತು ಇಳಿಜಾರು ಬೆಟ್ಟದ ಕೆಳಗೆ ಇರುವ ಮನೆಗಳು ಮರಗಳ ಕೆಳಭಾಗದಲ್ಲಿ ಇರುವ ಮನೆಗಳಲ್ಲಿ ವಾಸವಿರುವವರು ಸುರಕ್ಷತೆ ದೃಷ್ಟಿಯಿಂದ ಮಳೆಗಾಲದ ಅವಧಿಯಲ್ಲಿ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು ಅವಶ್ಯ.

ನೀವು ಪ್ರಸಕ್ತ ವಾಸವಾಗಿರುವ ಸ್ಥಳವು ಮಳೆ–ಗಾಳಿ ಹಾಗೂ ಹವಾಮಾನ ವೈಪರೀತ್ಯದಿಂದ ವಾಸಿಸಲು ಯೋಗ್ಯವಿಲ್ಲದ ಕಾರಣ ಪ್ರಾಣ ಹಾನಿ ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ವಾಸಿಸುತ್ತಿರುವ ಸ್ಥಳವನ್ನು ಈ ಕೂಡಲೇ ತೆರವು ಮಾಡಬೇಕು. ಈ ಸೂಚನೆಯನ್ನೂ ಪಾಲಿಸದೇ ಇದ್ದಲ್ಲಿ ಮುಂದೆ ಆಗುವ ಕಷ್ಟನಷ್ಟಗಳಿಗೆ ನೀವೇ ಜವಾಬ್ದಾರರು. ಆದ್ದರಿಂದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರ ಹೆಸರಿನಲ್ಲಿ ಅಪಾಯದಲ್ಲಿರುವ ಪ್ರತಿ ಮನೆಗೂ ನೋಟಿಸ್ ವಿತರಣೆ ಮಾಡಲಾಗಿದೆ.

ನೋಟಿಸ್‌ ವಿತರಣೆಯ ಬೆನ್ನಲೇ ಜನರು ಆತಂಕಗೊಂಡಿದ್ದಾರೆ. ತಕ್ಷಣ ಬಾಡಿಗೆ ಮನೆಗಳೂ ನಗರದಲ್ಲಿ ಸಿಗುತ್ತಿಲ್ಲ. ನಗರದ ನಾಲ್ಕೈದು ಬಡಾವಣೆಯ ನಿವಾಸಿಗಳಿಗೆ ದಿಕ್ಕು ತೋಚದಾಗಿದೆ. ಹೋಮ್‌ ಸ್ಟೇ ಮತ್ತಿತರ ಕಾರಣಕ್ಕೆ ಮಡಿಕೇರಿಯಲ್ಲಿ ಬಾಡಿಗೆಯೂ ದುಬಾರಿ ಎನಿಸಿದೆ.

ಅಪಾಯದ ಅಂಚಿನಲ್ಲಿರೋ ಮನೆಗಳಿಗೆ ಮುಂಜಾಗ್ರತಾ ಕ್ರಮವಾಗಿ ನಗರಸಭೆ ಸುರಕ್ಷಿತ ಸ್ಥಳಗಳಿಗೆ ತೆರಳಿ ಅಂತ ನೋಟಿಸ್ ನೀಡಿದೆ. ಸರಿ ಮನೆ ಬಿಟ್ಟು ಹೋಗ್ತೀವಿ ಆದ್ರೆ ಎಲ್ಲಿಗೆ ಹೋಗೋದು? ಪರ್ಯಾಯ ವ್ಯವಸ್ಥೆ ಮಾಡದೇ ಮನೆ‌ಬಿಡಿ ಅಂದರೆ ಹೇಗೆ ಎಂದು ಸ್ಥಳೀಯರಾದ ಜುಲೇಕಾಬಿ ಪ್ರಶ್ನಿಸುತ್ತಾರೆ.

‘ಒಂದು ವಾರದಿಂದ ನೋಟಿಸ್ ವಿತರಣೆ ಮಾಡಲಾಗುತ್ತಿದೆ. ಬಾಡಿಗೆ ಹಣ ಪಾವತಿಸುವಂತೆ ಕೋರಿದರೆ ಅವರಿಗೆ ತಾತ್ಕಾಲಿಕವಾಗಿ ಬಾಡಿಗೆ ಹಣ ಸಿಗಲಿದೆ. ಪರಿಹಾರ ಕೇಂದ್ರ ಹಾಗೂ ಸಂಬಂಧಿಕರ ಮನೆಗೆ ತೆರಳುತ್ತೇವೆ ಎಂದು ಮುಂದೆ ಬಂದರೆ ಅವರಿಗೂ ಅವಕಾಶವಿದೆ. ಮಡಿಕೇರಿಯ ಅಪಾಯಕಾರಿ ಸ್ಥಳದಲ್ಲಿದ್ದ ಎಲ್ಲರಿಗೂ ನೋಟಿಸ್‌ ಕೊಡಲಾಗಿದೆ’ ಎಂದು ಪೌರಾಯುಕ್ತ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT