ಶಂಕಿತ ನಕ್ಸಲ್‌ ನಾಯಕನಿಂದಲೇ ವಾದ ಮಂಡನೆ

ಮಂಗಳವಾರ, ಜೂಲೈ 16, 2019
24 °C
ಭಾರೀ ಭದ್ರತೆಯಲ್ಲಿ ಕೋರ್ಟ್‌ಗೆ ಹಾಜರು

ಶಂಕಿತ ನಕ್ಸಲ್‌ ನಾಯಕನಿಂದಲೇ ವಾದ ಮಂಡನೆ

Published:
Updated:
Prajavani

ಮಡಿಕೇರಿ: ರಾಜ್ಯದ ಗಡಿಭಾಗದಲ್ಲಿ ನಕ್ಸಲ್‌ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ನಕ್ಸಲ್‌ ನಾಯಕ ರೂಪೇಶ್‌ನನ್ನು ಮಂಗಳವಾರ ಕೊಡಗು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಭದ್ರತೆಯಲ್ಲಿ ಸೋಮವಾರ ಸಂಜೆಯೇ ಕೇರಳದ ಕಾರಾಗೃಹದಿಂದ ಕರೆತಂದು ಸಮೀಪದ ಕರ್ಣಂಗೇರಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ 11ರ ಸುಮಾರಿಗೆ ನ್ಯಾಯಾಲಯದ ಆವರಣಕ್ಕೆ ರೂಪೇಶ್‌ನನ್ನು ಕರೆ ತರುತ್ತಿದ್ದಂತೆಯೇ ನಕ್ಸಲ್‌ ಪರವಾದ ಘೋಷಣೆ ಕೂಗಿದ.

ನ್ಯಾಯಾಧೀಶರಾದ ವೀರಭದ್ರಪ್ಪ ಮಲ್ಲಪ್ಪ ಅವರ ಎದುರು ರೂಪೇಶ್‌ನನ್ನು ಹಾಜರು ಪಡಿಸಲಾಯಿತು. ಬಂಧನಕ್ಕೂ ಮೊದಲು ರೂಪೇಶ್‌ ಸಹ ಕೇರಳದ ಕೋರ್ಟ್‌ನಲ್ಲಿ ವಕೀಲ ವೃತ್ತಿಯಲ್ಲಿದ್ದ. ಹೀಗಾಗಿ, ತನ್ನ ಪರವಾಗಿ ತಾನೇ ವಾದ ಮಂಡಿಸಿದ. ಸುಮಾರು ಒಂದೂವರೆ ಗಂಟೆ ವಾದ ನಡೆಯಿತು. 

‘ಕೇರಳ ಹಾಗೂ ಕೊಡಗಿನಲ್ಲಿ ಒಂದೇ ಸಮಯದಲ್ಲಿ ಪ್ರಕರಣದಲ್ಲಿ ಭಾಗಿಯಾಗಿದ್ದೇನೆಂದು ನನ್ನ ವಿರುದ್ಧ ದೂರು ದಾಖಲಾಗಿವೆ. ಅದು ಹೇಗೆ ಸಾಧ್ಯ? ಹೀಗಾಗಿ, ಪ್ರಕರಣವನ್ನು ರದ್ದು ಪಡಿಸಬೇಕು’ ಎಂದು ಕೋರಿದ.

ಜತೆಗೆ, ಸುಪ್ರಿಂ ಕೋರ್ಟ್‌ನ ಹಲವು ತೀರ್ಪು ಉಲ್ಲೇಖಿಸಿ, ‘ಪ್ರಕರಣದಿಂದ ನನ್ನನ್ನು ಕೈಬಿಡಬೇಕು’ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ. ಬಳಿಕ, ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಲಾಯಿತು. ನಂತರ, ಕೇರಳ ಹಾಗೂ ಕರ್ನಾಟಕದ ಪೊಲೀಸರ ಭದ್ರತೆಯಲ್ಲಿ ಕೇರಳದ ಕಾರಾಗೃಹಕ್ಕೆ ವಾಪಸ್‌ ಕರೆದೊಯ್ಯಲಾಯಿತು.

ಏನು ಆರೋಪ?:  

ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ಚೇರಂಬಾಣೆಯಲ್ಲಿ ರೂಪೇಶ್‌ ನೇತೃತ್ವದ ಶಂಕಿತ ನಕ್ಸಲ್‌ ತಂಡವು ಪ್ರತ್ಯಕ್ಷವಾಗಿತ್ತು ಎಂಬ ಆರೋಪವಿದೆ. ಹಲವು ಮನೆಗಳಿಗೆ ಭೇಟಿ ನೀಡಿ ಆಹಾರ ಪದಾರ್ಥ ಸಂಗ್ರಹ ಹಾಗೂ ನಕ್ಸಲ್‌ ಪರವಾದ ಕರಪತ್ರ ಹಂಚಿಕೆ ಮಾಡಿದ್ದ ಆರೋಪವೂ ಇದೆ. ಭಾಗಮಂಡಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕಾಲೂರು ಭಾಗದಲ್ಲೂ ಇದೇ ತಂಡವು ಪ್ರತ್ಯಕ್ಷವಾಗಿತ್ತು ಎಂಬ ಮಾಹಿತಿಯೂ ಪೊಲೀಸರಿಗೆ ಸಿಕ್ಕಿತ್ತು. ಕೊಡಗಿನಲ್ಲೂ ನಕ್ಸಲ್‌ ಚಟುವಟಿಕೆ ನಡೆಸಿದ್ದ ಆರೋಪದ ಮೇಲೆ ಜಿಲ್ಲಾ ನ್ಯಾಯಾಲಯಕ್ಕೆ 7ನೇ ಬಾರಿಗೆ ಹಾಜರು ಪಡಿಸಲಾಗಿದೆ.

ಎಲ್ಲಿ ಬಂಧನ?:

ರೂಪೇಶ್‌ನನ್ನು ಆಂಧ್ರಪ್ರದೇಶ ಹಾಗೂ ತಮಿಳುನಾಡು ನಕ್ಸಲ್‌ ನಿಗ್ರಹ ಪಡೆ ಜಂಟಿ ಕಾರ್ಯಾಚರಣೆ ನಡೆಸಿ, ಕೊಯಮತ್ತೂರಿನಲ್ಲಿ ಬಂಧಿಸಿತ್ತು. 2015ರಲ್ಲಿ ಕೊಡಗು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಸಹ ನಡೆಸಿದ್ದರು. ನಕ್ಸಲ್‌ ನಾಯಕ ವಿಕ್ರಂಗೌಡನೊಂದಿಗೂ ನಿಕಟ ಸಂಪರ್ಕ ಹೊಂದಿರುವ ಆರೋಪವೂ ಇದೆ. ಕಳೆದ ವರ್ಷ ವಿಕ್ರಂಗೌಡ ನೇತೃತ್ವದ ತಂಡವು ಸಂಪಾಜೆ ಹಾಗೂ ನಾಲಾಡಿ ಭಾಗದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಬಳಿಕ ತಂಡವು ಕೇರಳಕ್ಕೆ ತೆರಳಿದೆ ಎಂಬ ಮಾತುಗಳು ಕೇಳಿಬಂದಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !