ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ರೈತರಿಂದ ತಲಕಾವೇರಿಯಲ್ಲಿ ಪೂಜೆ

ಪ್ರಾಧಿಕಾರದಿಂದಲೂ ರೈತ ವಿರೋಧಿ ನೀತಿ: ದರ್ಶನ್‌ ಪುಟ್ಟಣ್ಣಯ್ಯ
Last Updated 5 ಜುಲೈ 2019, 15:44 IST
ಅಕ್ಷರ ಗಾತ್ರ

ಮಡಿಕೇರಿ: ‘ಮಂಡ್ಯದಲ್ಲಿ ಕಬ್ಬು ಬೆಳೆಯುವ ರೈತರಿಗೆ ಕೆಆರ್‌ಎಸ್‌ ಅಣೆಕಟ್ಟೆಯಿಂದ ನೀರು ಹರಿಸುವಂತೆ ಬೇಡಿಕೊಳ್ಳುತ್ತಿದ್ದೇವೆ. ರಾಜ್ಯದ ಸಚಿವರಲ್ಲೂ ಮನವಿ ಮಾಡಿದ್ದೇವೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವೂ ರೈತ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ರಾಜ್ಯ ರೈತ ಸಂಘದ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಗಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶುಕ್ರವಾರ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಡಿಕೇರಿಯ ಸುದರ್ಶನ ಅತಿಥಿಗೃಹದಲ್ಲಿ ಅವರು ಮಾತನಾಡಿದರು.

‘ನೀರು ಹರಿಸದೇ ರೈತರ ತಾಳ್ಮೆ ಪರೀಕ್ಷೆ ಮಾಡಲಾಗುತ್ತಿದೆ. ಹೋರಾಟ ನಡೆಸಿದರೆ ಹತ್ತಿಕ್ಕುವ ಪ್ರಯತ್ನ ಮತ್ತೊಂದೆಡೆ. ಕೆಆರ್‌ಎಸ್‌ನಿಂದ ನೀರು ಹರಿಸದಿರಲು ಕಾರಣವೇನು’ ಎಂದು ದರ್ಶನ್ ಪುಟ್ಟಣ್ಣಯ್ಯ ಪ್ರಶ್ನಿಸಿದರು.

‘ನೀರು ಹರಿಸದೇ ಸುಮಾರು 40 ಸಾವಿರ ರೈತ ಕುಟುಂಬಗಳು ಕಂಗಾಲಾಗಿವೆ. ಕಾವೇರಿ ನದಿ ನೀರು ಅವಲಂಬಿಸಿರುವ ರೈತರ ಮೇಲೆ ನೂರಾರು ಕೋಟಿ ರೂಪಾಯಿ ಸಾಲದ ಹೊರೆಯಿದೆ. ಈ ಸತ್ಯಾಂಶವನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವೂ ಅರಿತುಕೊಳ್ಳಬೇಕು. ನಮ್ಮ ಪಾಲಿನ ನೀರನ್ನು ರೈತರ ಜಮೀನಿಗೆ ಹರಿಸಲು’ ಎಂದು ಆಗ್ರಹಿಸಿದರು.

ರೈತ ಸಂಘದ ಮಂಡ್ಯ ಜಿಲ್ಲಾ ಅಧ್ಯಕ್ಷ ಸುರೇಶ್ ಮಾತನಾಡಿ, ‘ಕಾವೇರಿ ಕಣಿವೆ ರೈತರು ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಬೆಳೆಗಳಿಗೆ ಇರಲಿ, ಕುಡಿಯಲು ನೀರಿಲ್ಲದ ಸ್ಥಿತಿ ಬಂದಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ದ್ವೇಷದ ರಾಜಕಾರಣ ಮಾಡಿ ಮಂಡ್ಯ ಜಿಲ್ಲೆಯ ರೈತರನ್ನು ಹಿಂಸಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಪುತ್ರ ನಿಖಿಲ್‌ ಸೋಲಿಗೆ ರೈತರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ರೈತರ ಸಮಸ್ಯೆ ಆಲಿಸುವುದನ್ನು ಬಿಟ್ಟು ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ’ ಎಂದು ‌ದೂರಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕಾರ್ಯದರ್ಶಿ ಸುಜಯ್ ಬೋಪಯ್ಯ ಹಾಜರಿದ್ದರು. ದರ್ಶನ್ ಪುಟ್ಟಣ್ಣಯ್ಯ ಮುಂದಾಳತ್ವದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ಮುಖಂಡರು, ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದ ದರ್ಶನ ಮಾಡಿ ಕುಂಕುಮಾರ್ಚನೆ ಹಾಗೂ ಮಹಾಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT