ಸೋಮವಾರ, ಸೆಪ್ಟೆಂಬರ್ 16, 2019
27 °C
ಮೂರ್ನಾಡು– ನಾಪೋಕ್ಲು ರಸ್ತೆ ಸಂಪರ್ಕ ಕಡಿತ

ಕೊಡಗಿನಲ್ಲಿ ಮತ್ತೆ ಮಳೆಯ ಆರ್ಭಟ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ಮಳೆ ಆರ್ಭಟ ಮುಂದುವರಿದಿದೆ. ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಬೇತ್ರಿ, ಮೂರ್ನಾಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಶುಕ್ರವಾರ ಮಧ್ಯಾಹ್ನದ ತನಕವೂ ಬಿಡುವು ನೀಡಿದ್ದ ಮಳೆ ಬಳಿಕ ಆರ್ಭಟಿಸಲು ಆರಂಭಿಸಿದೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಮತ್ತಷ್ಟು ಏರಿಕೆಯಾಗಿದೆ. ಮೂರ್ನಾಡು – ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಾವೇರಿ ನದಿ ಮತ್ತಷ್ಟು ಮೈದುಂಬಿಕೊಂಡು ಹರಿಯುತ್ತಿದೆ. ಕರಡಿಗೋಡು, ಗುಹ್ಯ, ನೆಲ್ಯಹುದಿಕೇರಿ, ಕುಂಬಾರಗುಂಡಿ ನದಿ ದಂಡೆಯ ನಿವಾಸಿಗಳು ಆಗಸ್ಟ್‌ ಮೊದಲ ವಾರ ಸುರಿದಿದ್ದ ಭಾರೀ ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದರು. ಈಗ ಮತ್ತೆ ಆತಂಕದಲ್ಲಿದ್ದಾರೆ.  

ಉತ್ತರ ಕೊಡಗಿನ ಸೋಮವಾರಪೇಟೆ, ಮಲ್ಲಳ್ಳಿ, ಶಾಂತಳ್ಳಿ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಡಿಕೇರಿ, ಶನಿವಾರಸಂತೆ, ಕೊಡ್ಲಿಪೇಟೆ, ಸುಂಟಿಕೊಪ್ಪ, ಗೋಣಿಕೊಪ್ಪಲು, ವಿರಾಜಪೇಟೆ ಸುತ್ತಮುತ್ತ ಸಾಧಾರಣ ಮಳೆಯಾಗುತ್ತಿದೆ.

24 ಗಂಟೆ ಅವಧಿಯಲ್ಲಿ ಭಾಗಮಂಡಲದಲ್ಲಿ 11.5 ಸೆಂ.ಮೀ, ಶಾಂತಳ್ಳಿ 10.5, ನಾಪೋಕ್ಲು 6.6, ಸೋಮವಾರಪೇಟೆ 5.6, ಹುದಿಕೇರಿ 5, ಮಡಿಕೇರಿ 3 ಸೆಂ.ಮೀ ಮಳೆಯಾಗಿದೆ. 

Post Comments (+)