ಶುಕ್ರವಾರ, ನವೆಂಬರ್ 22, 2019
21 °C
ಕೊಡಗಿನಲ್ಲಿ ಮಳೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ

ಕೊಡಗು: ನದಿ ಅಂಚಿನ ಬಡಾವಣೆಗಳ ಜನರಲ್ಲಿ ಆತಂಕ

Published:
Updated:
Prajavani

ಕುಶಾಲನಗರ: ಕೊಡಗು ಜಿಲ್ಲೆಯ ಭಾಗಮಂಡಲ, ತಲಾಕಾವೇರಿ ವ್ಯಾಪ್ತಿ ಸೇರಿದಂತೆ ಇತರೆ ಕಡೆಗಳಲ್ಲಿ ಮಳೆ ರಭಸದಿಂದ ಸುರಿಯುತ್ತಿದ್ದು, ಜೀವನ ನದಿ ಕಾವೇರಿಯಲ್ಲಿ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಪಟ್ಟಣದಲ್ಲಿ ಹಾದು ಹೋಗಿರುವ ಕಾವೇರಿ ಹಾಗೂ ಹಾರಂಗಿ ನದಿಗಳಲ್ಲೂ ನೀರಿನ ಹರಿವಿನಲ್ಲಿ ಹೆಚ್ಚಳ ಉಂಟಾಗಿರುವ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಸೇರಿದಂತೆ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಕೂಡುಮಂಗಳೂರು, ಕೂಡಿಗೆ, ಕಣಿವೆ, ತೆಪ್ಪದ ಕಂಡಿ, ನಿಸರ್ಗಧಾಮ ಮತ್ತಿತರ ಕಡೆಗಳಲ್ಲಿನ ನದಿ ಅಂಚಿನ ಬಡಾವಣೆಗಳ ಜನರಲ್ಲಿ ಆತಂಕ ಉಂಟಾಗಿದೆ.

ಆಗಸ್ಟ್ ಎರಡನೇ ವಾರದಲ್ಲಿ ಸುರಿದ ಮಹಾಮಳೆಯಿಂದಾಗಿ ನೆರೆ ಪ್ರವಾಹ ಉಂಟಾಗಿ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಸಿಂಗಾರಮ್ಮ, ಬಸಪ್ಪ, ದಂಡಿನಪೇಟೆ ಸೇರಿದಂತೆ ಹತ್ತಾರೂ ಬಡಾವಣೆಗಳು ಜಲಾವೃತಗೊಂಡು ನೂರಾರು ಮನೆಗಳು ನೀರಿನಲ್ಲಿ ಮುಳುಗಡೆಯಾಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಯಿತು.

ಪ್ರವಾಹ ಇಳಿಮುಖಗೊಂಡ ಬಳಿಕ ನಿಧಾನವಾಗಿ ಚೇತರಿಕೆ ಕಂಡುಕೊಳ್ಳುತ್ತಿದ್ದ ಪ್ರವಾಹ ಪೀಡಿತ ಪ್ರದೇಶಗಳ ನಾಗರಿಕರು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇದೀಗ ಮತ್ತೆ ಪ್ರವಾಹ ಭೀತಿ ಎದರಿಸುತ್ತಿವುದು ಕಂಡುಬಂದಿದೆ. ರಾತ್ರಿ ಸಮಯದಲ್ಲಿ ಊಟ, ನಿದ್ರೆಯಿಲ್ಲದೆ ಆತಂಕ ಪಡುತ್ತಿದ್ದಾರೆ.

ಜಿಲ್ಲೆಯಲ್ಲಿ ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಣೆಯನ್ನು ಹಾವಾಮಾನ ಇಲಾಖೆ ಮುನ್ಸೂಚನೆ ಹಾಗೂ ಎಚ್ಚರಿಕೆಯನ್ನು ನೀಡುತ್ತಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಬಡಾವಣೆಗಳ ನಿವಾಸಿಗಳನ್ನು ಎಚ್ಚರಿಸುವ ಕೆಲಸ ನಡೆಯುತ್ತಿದೆ. ನದಿ ತಟದ ಜನತೆ ಸುರಕ್ಷಿತರಾಗಲು ಸೂಚನೆ ನೀಡಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಲಾಗುತ್ತಿದೆ.

ಪಟ್ಟಣದ ಸಾಯಿ ಬಡಾವಣೆಯಲ್ಲಿ ಕಾವೇರಿ ನದಿಯ ಹಿನ್ನೀರು ರಾಜಕಾಲುವೆ ಮೂಲಕ ಹಿಂದಕ್ಕೆ ತುಂಬಲು ಆರಂಭಿಸಿರುವುದು ಕಂಡುಬಂದಿದೆ. ನದಿಯಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಕೆಲವು ಜನರು ಈಗಾಗಲೆ ತಮ್ಮ ಮನೆಗಳನ್ನು ಖಾಲಿ ಮಾಡಲು ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿ, ಅಗತ್ಯ ಸಾಮಗ್ರಿಗಳನ್ನು ಸಾಗಿಸಲು ಟೆಂಪೋಗಳನ್ನು ಬುಕ್ ಮಾಡಿ ಸಿದ್ಧವಾಗಿರಿಸಿಕೊಂಡಿರುವುದು ಕಂಡುಬಂತು.

ಜಿಲ್ಲೆಯಲ್ಲಿ ಇದೇ ರೀತಿ ಜೋರು ಮಳೆ ಮುಂದಿನ ಮೂರು ನಾಲ್ಕು ದಿನಗಳು ಸುರಿದರೆ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ದಂಡಿನಪೇಟೆ ಭಾಗದಲ್ಲಿ ನದಿ ತಟದ ನಿವಾಸಿಗಳು ಮನೆ ಖಾಲಿ ಮಾಡಿ ಬೇರೆಡೆ ತೆರಳಲು ಮುಂದಾಗಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದೆಯೇ ಇಳಿಮುಖವಾಗುತ್ತಿದ್ದೆಯೇ ಎಂದು ಸದಾ ನದಿಯ ನೀರಿನ ಮಟ್ಟದ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಅದೇ ರೀತಿ ಹಾರಂಗಿ ಜಲಾನಯನ ಪ್ರದೇಶದಲ್ಲಿಯೂ ಕೂಡ ಜೋರಾಗಿ ಮಳೆ ಸುರಿಯುತ್ತಿದೆ. 

ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಲ್ಲಿ ಹಾಗೂ ಹಾರಂಗಿ ಜಲಾಶಯದಿಂದ ನದಿಗೆ ನೀರು ಹರಿಸಿದರೆ ಕುಶಾಲನಗರ ಪಟ್ಟಣ ಮತ್ತೆ ಭಾಗಶಃ ಮುಳುಗಡೆಯಾಗುವ ಆತಂಕ ಸೃಷ್ಟಿಯಾಗಿದ್ದು, ನದಿ ತಟದ ನಿವಾಸಿಗಳಲ್ಲಿ ನಡುಕ ಶುರುವಾಗಿದೆ.

ಪ್ರತಿಕ್ರಿಯಿಸಿ (+)