ಬುಧವಾರ, ನವೆಂಬರ್ 13, 2019
17 °C
ಅಂಗನವಾಡಿ ಕೇಂದ್ರಕ್ಕೇ ಬೀಗ ಹಾಕಿದ ಶಿಕ್ಷಕಿ, ಕ್ರಮಕ್ಕೆ ದಲಿತ ಸಂಘಟನೆಗಳು ಆಗ್ರಹ

ದಲಿತ ಅಂಗನವಾಡಿ ಸಹಾಯಕಿ ಕೆಲಸಕ್ಕೆ ಅಡ್ಡಿ

Published:
Updated:
Prajavani

ಕುಶಾಲನಗರ: ಸಮೀಪದ ಕುಡ್ಲೂರು ನವಗ್ರಾಮ ಅಂಗನವಾಡಿ ಕೇಂದ್ರದ ಸಹಾಯಕಿ ಕರ್ತವ್ಯಕ್ಕೆ ಹಾಜರಾಗದಂತೆ  ತಡೆಯಲು ಕೇಂದ್ರದ ಶಿಕ್ಷಕಿಯೇ ಅಂಗನವಾಡಿಗೆ ಬೀಗ ಹಾಕಿದ ಘಟನೆ ಸೋಮವಾರ ನಡೆದಿದೆ.

ನಡೆದಿದ್ದೇನು..?: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ನವಗ್ರಾಮ ಅಂಗನವಾಡಿ ಕೇಂದ್ರಕ್ಕೆ ಅಡುಗೆ ಸಹಾಯಕಿಯಾಗಿ ದಲಿತ ಮಹಿಳೆ ಕೆ.ಎ. ಶಾಂತಾ ಅವರನ್ನು ನಿಯೋಜಿಸಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಆದೇಶಿದ್ದರು. ನಿಯೋಜಿಸಲ್ಪಟ್ಟ ಸಹಾಯಕಿ ದಲಿತೆ ಎಂಬ ಕಾರಣಕ್ಕಾಗಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಕಲಾವತಿ ಕೇಂದ್ರಕ್ಕೆ ಬೀಗ ಹಾಕಿ ಅವರೂ ಕರ್ತವ್ಯಕ್ಕೂ ಗೈರು ಹಾಜರಾಗಿದ್ದಾರೆ ಎನ್ನಲಾಗಿದೆ.

ಸೋಮವಾರ ಬೆಳಿಗ್ಗೆ 9ಕ್ಕೆ ಶಾಂತಾ ಕರ್ತವ್ಯಕ್ಕೆ ಹೋದಾಗ ಕೇಂದ್ರಕ್ಕೆ ಬೀಗ ಹಾಕಲಾಗಿತ್ತು. ಮಧ್ಯಾಹ್ನದವರೆಗೂ ಕಾದರೂ ಶಿಕ್ಷಕಿಯ ಸುಳಿವೇ ಇಲ್ಲ. ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿರುವುದನ್ನು ನೋಡಿ ಮಕ್ಕಳು ಕೂಡ ಮನೆಗಳಿಗೆ ತೆರಳಿದರು.  

ಮೂರರಿಂದ ನಾಲ್ಕು ತಾಸು ಕಾದರೂ ಕೇಂದ್ರಕ್ಕೆ ಬರದ ಶಿಕ್ಷಕಿ ವರ್ತನೆ ಖಂಡಿಸಿ ಶಾಂತಾ ಕೇಂದ್ರ ಮುಂದೆ ಪ್ರತಿಭಟನೆ ನಡೆಸಿದರು. ಅಂಗನವಾಡಿ ಶಿಕ್ಷಕಿಗೆ ಕಲಾವತಿಗೆ ಸಹಾಯಕಿಯಾಗಿ ಶಾಂತಾ ನೇಮಕವಾಗಿರುವುದು ಇಷ್ಟವಿಲ್ಲ ಈ ಕಾರಣಕ್ಕೆ ಕೇಂದ್ರಕ್ಕೆ ಬೀಗ ಹಾಕಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆಪಾದಿಸಿದರು.

ಈ ಹಿಂದೆ ಕುಡ್ಲೂರು ನವಗ್ರಾಮ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಶಾಂತಾ ಅವರು ಇದೇ ಶಿಕ್ಷಕಿಯ ಕಿರುಕುಳ ವರ್ತನೆಯಿಂದ ಬೇಸತ್ತು ಕೂಡ್ಲುರು (ಅದೇ ಗ್ರಾಮದ ಮತ್ತೊಂದು ಕೇಂದ್ರ) ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದರು. ಇದೀಗ ಮತ್ತೆ ಶಾಂತಾರನ್ನು ನವಗ್ರಾಮ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡಿ ಅಧಿಕಾರಿಗಳು ಆದೇಶಿಸಿದ್ದರು. ಆದರೆ, ಹಿರಿಯ ಅಧಿಕಾರಿಗಳ ಆದೇಶವನ್ನೂ ಲೆಕ್ಕಿಸಿದೇ ಶಿಕ್ಷಕ ಬೀಗ ಹಾಕಿ ತೆರಳಿರುವುದು ಚರ್ಚೆಗೆ ಕಾರಣವಾಗಿದೆ. 

‘ಆರು ತಿಂಗಳಿಂದ ಮಾಸಿಕ ವೇತನ ಬಂದಿಲ್ಲ. ಜೀವನ ನಡೆಸುವುದೇ ಚಿಂತಾಜನಕವಾಗಿದೆ. ಶಿಕ್ಷಕಿ ಕೇಂದ್ರಕ್ಕೆ ಬೀಗ ಹಾಕಿಕೊಂಡು ಹೋಗಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿದ್ದಾರೆ’ ಎಂದು ಶಾಂತಾ ತೋಡಿಕೊಂಡರು.

ತೀವ್ರ ಖಂಡನೆ: ದಲಿತ ಮಹಿಳೆ ಎಂಬ ಕಾರಣಕ್ಕೆ ಅಂಗನವಾಡಿ ಕೇಂದ್ರದ ಶಿಕ್ಷಕಿ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿರುವ ಕ್ರಮವನ್ನು ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಅಂಗನವಾಡಿ ಶಿಕ್ಷಕಿ ಕಲಾವತಿಯನ್ನು ಅಮಾನತು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಲ್ಲಾ ಸಂಚಾಲಕ ದಿವಾಕರ್‌ ಒತ್ತಾಯಿಸಿದ್ದಾರೆ. 

ಪ್ರತಿಕ್ರಿಯಿಸಿ (+)