ಸೋಮವಾರ, ನವೆಂಬರ್ 18, 2019
23 °C
ಪ್ರತಿಧ್ವನಿಸಿದ ಆರೋಪ – ಪ್ರತ್ಯಾರೋಪ

ಅಂಗನವಾಡಿ ಕೇಂದ್ರಕ್ಕೆ ಬೀಗ | ಸಹಾಯಕಿ, ಗ್ರಾಮಸ್ಥರ ಸಂಘರ್ಷ: ಮಕ್ಕಳಿಗೆ ಸಂಕಷ್ಟ

Published:
Updated:
Prajavani

ಕುಶಾಲನಗರ: ಇಲ್ಲಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ನವಗ್ರಾಮದ ಅಂಗನವಾಡಿ ಕೇಂದ್ರದ ಸಹಾಯಕಿ ಹಾಗೂ ಗ್ರಾಮಸ್ಥರ ನಡುವೆ ಸಂಘರ್ಷ ತಾರಕಕ್ಕೇರಿದ್ದು ಇದರಿಂದ ಅಂಗನವಾಡಿ ಮಕ್ಕಳು ಸಂಕಷ್ಟ ಎದುರಿಸುವಂತಾಗಿದೆ.

ಈ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಇಬ್ಬರು ಮಹಿಳೆಯರು ನೇಮಕಗೊಂಡಿದ್ದರು. ಕೇಂದ್ರದಲ್ಲಿನ ಕಾರ್ಯಕರ್ತೆ ಕಲಾವತಿ ಹಾಗೂ ಸಹಾಯಕಿ ಶಾಂತಾ ನಡುವಿನ ಅಂತರಿಕ ಕಲಹ ಈಗ ತಾರಕಕ್ಕೇರಿದೆ.

ಎರಡು ದಿನಗಳಿಂದ ಕೇಂದ್ರದ ಬಾಗಿಲು ತೆರೆದಿಲ್ಲ. ಇದರೊಂದಿಗೆ ಅಂಗನವಾಡಿ ಕೇಂದ್ರದ ಸಹಾಯಕಿ, ಗ್ರಾಮಸ್ಥರ ನಡುವೆ ಜಾತಿ ಮತ್ತು ಕಳ್ಳತನದ ಆರೋಪ - ಪ್ರತ್ಯಾರೊಪಗಳು ಪ್ರತಿಧ್ವನಿಸುತ್ತಿವೆ.

’ನಾನು ದಲಿತ ಮಹಿಳೆ ಅನ್ನುವ ಕಾರಣಕ್ಕೆ ಕೆಲಸಕ್ಕೆ ಬರದಂತೆ ಅಂಗನವಾಡಿ ಶಿಕ್ಷಕಿ ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ’ ಎಂದು ಶಾಂತಾ ಆರೋಪಿಸಿದರು.

‘ಗ್ರಾಮಸ್ಥರೂ ಸಹ ನಮ್ಮೂರಿಗೆ ಈ ಸಹಾಯಕಿ ಬೇಡವೇ ಬೇಡ. ಅವರನ್ನು ಬದಲಿಸುವ ತನಕ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲ್ಲ’ ಎಂದು ಹಟ ಹಿಡಿದಿರುವುದರಿಂದ ಅಂಗನವಾಡಿ ಬಿಕೋ ಎನ್ನುತ್ತಿದೆ.

‘ಮಕ್ಕಳಿಗೆ ಕೊಡಬೇಕಾದ ವಸ್ತುಗಳನ್ನು ಮನೆಗೆ ಹೊತ್ತೊಯ್ಯುತ್ತಾರೆ. ಅಲ್ಲದೇ ಸರಿಯಾದ ಸಮಯಕ್ಕೆ ಕೆಲಸಕ್ಕೂ ಬರುವುದಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಜಾತಿ ವಿರೋಧಿಗಳ ಪಟ್ಟಕಟ್ಟುತ್ತಿದ್ದಾರೆ. ಅವರು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವ ತನಕ ಮಕ್ಕಳನ್ನು ಈ ಕೇಂದ್ರಕ್ಕೆ ಕಳುಹಿಸುವುದಿಲ್ಲ’ ಎಂದು ಗ್ರಾಮಸ್ಥ ಮಂಜುನಾಥ್ ಹೇಳಿದರು. 

‘ನಾನು ದಲಿತ ಮಹಿಳೆ ಎನ್ನುವ ಉದ್ದೇಶದಿಂದ ಕೆಲವರು ನನ್ನ ಮೇಲೆ ಕಳವು ಆರೋಪ ಹೊರಿಸಿದ್ದಾರೆ. ಹದಿನೈದು ಕೆ.ಜಿಯಷ್ಟು ಅಕ್ಕಿಯನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಹೊತ್ತೊಯ್ಯಲು ಸಾಧ್ಯವೇ? ಅವರಿಗೆ ನಾನು ಅಲ್ಲಿ ಕೆಲಸ ಮಾಡುವುದು ಇಷ್ಟವಿಲ್ಲ ಅಷ್ಟೆ’ ಎಂದು ಸಹಾಯಕಿ ಶಾಂತಾ ತಮ್ಮ ಅಳಲು ತೋಡಿಕೊಂಡರು. 

ಅಂಗನವಾಡಿಯಲ್ಲಿ ಕಲಿಯಬೇಕಿದ್ದ ಪುಟಾಣಿಗಳು ಇದೀಗ ಮನೆಯಲ್ಲಿದ್ದಾರೆ. ಕೂಡಲೇ ಮೇಲಿನ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.  

ಪ್ರತಿಕ್ರಿಯಿಸಿ (+)