ಸೋಮವಾರ, ಸೆಪ್ಟೆಂಬರ್ 20, 2021
21 °C
ಮುಂಗಾರಿಗೂ ಮೊದಲೇ ಎಚ್ಚರಿಕೆ ಕ್ರಮ, ಪೊಲೀಸರಿಗೂ ತರಬೇತಿ

ಕೊಡಗು: ವಿಪತ್ತು ಎದುರಿಸಲು ಜಿಲ್ಲಾಡಳಿತ ಸಿದ್ಧತೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗಿಗೆ ಮುಂಗಾರು ಮಳೆ ಪ್ರವೇಶಿಸಲು ಕೆಲವೇ ದಿನಗಳಷ್ಟೇ ಬಾಕಿಯಿದ್ದು ಜಿಲ್ಲಾಡಳಿತ ಈ ಬಾರಿ ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡಿದೆ. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ನೇತೃತ್ವದಲ್ಲಿ ಹಲವು ಸುತ್ತಿನ ಸಭೆ ನಡೆಸಿ, ರಕ್ಷಣಾ ತಂಡಗಳನ್ನು ಸಿದ್ಧತೆಯಲ್ಲಿ ಇಡಲಾಗಿದೆ. 

ಜಿಲ್ಲೆಯಲ್ಲಿ ಜೂನ್‌ ಮೊದಲ ವಾರದಲ್ಲಿ ಮಳೆ ಆರಂಭಗೊಂಡರೆ ಆಗಸ್ಟ್‌ ಕೊನೆಗೇ ಮಳೆ ಬಿಡುವುದು. ಕಳೆದ ವರ್ಷ ಮಾತ್ರ ಮುಂಗಾರು ಕೊಡಗಿಗೆ ಶಾಪವಾಗಿ ಕಾಡಿತ್ತು. ನಿತ್ಯವೂ ನೋಡುತ್ತಿದ್ದ ಬೆಟ್ಟಗಳೇ ಜಾರಿ ಬಂದಿದ್ದವು. ಈ ವರ್ಷ ವಾಡಿಕೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಸ್ವಲ್ಪಮಟ್ಟಿಗೆ ಆತಂಕ ನಿವಾರಣೆ ಮಾಡಿದೆ. ಆದರೂ, ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸನ್ನದ್ಧವಾಗಿದೆ. 

ಕಹಿ ನೆನಪು

ಜಿಲ್ಲೆಯ ಜನರಲ್ಲಿ ಕಳೆದ ವರ್ಷದ ಭೂಕುಸಿತ, ಪ್ರವಾಹ, ಜಲಸ್ಫೋಟವು ಕಹಿಯಾಗಿ ಕಾಡುತ್ತಿದೆ. ಮಳೆಗಾಲ ಹತ್ತಿರವಾಗುತ್ತಿದ್ದು ಒಂದು ಮನೆಯೂ ಹಸ್ತಾಂತರ ಆಗಿಲ್ಲ ಎಂಬುದು ನೋವಾಗಿ ಕಾಡುತ್ತಿದೆ.  

ಎನ್‌ಡಿಆರ್‌ಎಫ್‌: ಈ ತಿಂಗಳಾಂತ್ಯಕ್ಕೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್‌ಡಿಆರ್‌ಎಫ್‌) ಒಂದು ತಂಡವು ಜಿಲ್ಲೆಗೆ ಬರಲಿದೆ. ಮಳೆ ಬಿಡುವು ನೀಡುವ ತನಕವೂ ಎನ್‌ಡಿಆರ್‌ಎಫ್‌ ಇಲ್ಲೇ ಇರಲಿದೆ. ಇನ್ನು ಅಗ್ನಿಶಾಮಕ, ಗೃಹ ರಕ್ಷಕ ದಳ, ರಾಜ್ಯ ವಿಪತ್ತು ಸ್ಪಂದನಾ ಪಡೆಗೆ (ಎಸ್‌ಡಿಆರ್‌ಎಫ್) ಅಗತ್ಯ ಸಲಕರಣೆಯೊಂದಿಗೆ ಸಿದ್ಧತೆಯಲ್ಲಿರಲು ಸೂಚಿಸಲಾಗಿದೆ. ಪ್ರವಾಹ ಬಂದರೆ ಹೆಚ್ಚುವರಿ ದೋಣಿ ತರಿಸಿಕೊಳ್ಳಲೂ ಜಿಲ್ಲಾಡಳಿತ ಯೋಜನೆ ರೂಪಿಸಿದೆ. ನಾಪೋಕ್ಲು, ಬಲಮುರಿ, ಭಾಗಮಂಡಲ, ಕರಡಿಗೋಡು ವ್ಯಾಪ್ತಿಯಲ್ಲಿ ಪ್ರತಿವರ್ಷ ಕಾವೇರಿ ಉಕ್ಕೇರಿ ಪ್ರವಾಹ ಬರುತ್ತದೆ. ಕಳೆದ ವರ್ಷ ಹಾರಂಗಿ ಜಲಾಶಯದಿಂದ ಏಕಾಏಕಿ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಿದ್ದರ ಪರಿಣಾಮ ನಾಲ್ಕೈದು ಬಡಾವಣೆಗಳು ಒಂದುವಾರ ಜಲಾವೃತಗೊಂಡಿದ್ದವು. ಮನೆಯಲ್ಲಿದ್ದವರನ್ನು ರಾತ್ರೋರಾತ್ರಿ ಪರಿಹಾರ ಕೇಂದ್ರಕ್ಕೆ ಸೇರಿಸಲಾಗಿತ್ತು.

ಪೊಲೀಸರಿಗೂ ತರಬೇತಿ

ಕಳೆದ ವರ್ಷ ಜನರ ರಕ್ಷಣೆಯಲ್ಲಿ ಜಿಲ್ಲೆಯ ಪೊಲೀಸರ ಪಾತ್ರವೂ ದೊಡ್ಡದಾಗಿತ್ತು. ಈ ಬಾರಿ ಪೊಲೀಸ್‌ ರಕ್ಷಣಾ ತಂಡವನ್ನು ರಚಿಸಲಾಗಿದ್ದು ಅಪಾಯದಲ್ಲಿ ಸಿಲುಕಿದ್ದವನ್ನು ಹೇಗೆ ರಕ್ಷಣೆ ಮಾಡಬೇಕೆಂದು ಅವರಿಗೆ ತರಬೇತಿ ನೀಡಲಾಗಿದೆ. 60 ಮಂದಿಯ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಬೆಂಗಳೂರಿನ ಟೀಂ ಸೃಷ್ಟಿ ಅಡ್ವೆಂಚರ್ಸ್ ಸಂಸ್ಥೆಯ ತಜ್ಞರಾದ ಸಂತೋಷ್, ಅಕ್ಷಿತಾ, ಅನಘಾ ಹಾಗೂ ಪುಣೆಯ ಆರ್.ಟಿ. ಜಿಯೋ ಮತ್ತು ಪರಿಸರ ಸಮನ್ವಯ ಸಂಸ್ಥೆಯ ಭೂವಿಜ್ಞಾನಿ ರೆನಿ ಥಾಮಸ್ ಅವರು ಒಂದುವಾರ ತರಬೇತಿ ನೀಡಿದ್ದಾರೆ. ವಿಪತ್ತು ಎದುರಿಸಲು ಪೊಲೀಸರು ಸಜ್ಜಾಗಿ ನಿಂತಿದ್ದಾರೆ.

ತಂಡ ನಿಯೋಜನೆ

ಕಳೆದ ವರ್ಷದ ದುರಂತದಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು ಅಧಿಕಾರಿಗಳ ತಂಡಗಳನ್ನು ನಿಯೋಜಿಸಿದೆ. ವಿವಿಧ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಶೋಧನಾ ಮತ್ತು ರಕ್ಷಣಾ ಸಮಿತಿ, ಆಹಾರ ಮತ್ತು ಸ್ವಚ್ಛತಾ ಸಮಿತಿ, ಆಶ್ರಯ ನಿರ್ವಹಣಾ ಸಮಿತಿ, ಜಾನುವಾರು ರಕ್ಷಣಾ ಸಮಿತಿ, ಪುನರ್‌ ನಿರ್ಮಾಣ ಸಮಿತಿ, ಟಾಸ್ಕ್‌ ಪೋರ್ಸ್ ಸಮಿತಿ ರಚಿಸಲಾಗಿದೆ. ಪ್ರತಿ ಸಮಿತಿಗೆ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದ್ದು ಅವರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಔಷಧಿ ದಾಸ್ತಾನು

ಕಳೆದ ವರ್ಷ ಮಹಾಮಳೆಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿತ್ತು. ಪ್ರವಾಹ ಹೆಚ್ಚಾದಂತೆ ನೀರು ವಾರಗಟ್ಟಲೇ ಹಿಂದೆ ಸರಿದಿರಲಿಲ್ಲ. ಕಳೆದ ವರ್ಷ ಪ್ರವಾಹ ಸಂತ್ರಸ್ತರಿಗೆ ಪ್ರಥಮ ಚಿಕಿತ್ಸೆ ನೀಡಲು ಔಷಧಿ ಹಾಗೂ ವೈದ್ಯರ ಕೊರತೆ ಎದುರಾಗಿತ್ತು. ದುರಂತ ಸಂಭವಿಸಿ ಎರಡು ದಿನಗಳ ಬಳಿಕವಷ್ಟೇ ಮೈಸೂರು, ಹಾಸನದಿಂದ ವೈದ್ಯರು ಕೊಡಗಿಗೆ ಬಂದಿದ್ದರು. ಆದರೆ, ಈ ಬಾರಿ ಮೊದಲೇ ತಯಾರಿ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ. 

ಕರ್ಣಂಗೇರಿಯಲ್ಲಿ 35 ಮನೆ ಹಂಚಿಕೆ: ಉಳಿದವರಿಗೆ ನಿರಾಸೆ

ತಾಲ್ಲೂಕಿನ ಕರ್ಣಂಗೇರಿ ಗ್ರಾಮದಲ್ಲಿ ಸಂತ್ರಸ್ತರಿಗೆ ನಿರ್ಮಿಸಲಾಗುತ್ತಿರುವ 35 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ಸೋಮವಾರ ಲಾಟರಿ ಮೂಲಕ ಕರ್ಣಂಗೇರಿ ನಿರಾಶ್ರಿತರಿಗೆ ಮನೆ ಹಂಚಿಕೆ ಮಾಡಲಾಗಿದೆ. ಉದಯಗಿರಿ ಹಾಗೂ ಕರ್ಣಂಗೇರಿ ಗ್ರಾಮದ 19 ನಿರಾಶ್ರಿತ ಕುಟುಂಬಗಳಿಗೆ ಮೊದಲ ಪ್ರಾಶಸ್ತ್ಯದಲ್ಲಿ ಮನೆ ಹಂಚಿಕೆ ಮಾಡಲಾಗಿದೆ. ಉಳಿದ 16 ಮನೆಗಳನ್ನು ಲಾಟರಿ ಮೂಲಕ ಸಂತ್ರಸ್ತರ ಆಯ್ಕೆ ಮಾಡಲಾಗಿದೆ.  

ಆ ಸ್ಥಳದಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಿದ್ದವರಿಗೆ ಮನೆ ನಿಗದಿ ಮಾಡಲಾಗಿದೆ. ಮೊದಲ ಹಂತದಲ್ಲಿ ಮನೆ ಹಸ್ತಾಂತರಿಸುವ ಪ್ರಕ್ರಿಯೆ ಸದ್ಯದಲ್ಲೇ  

ಮಡಿಕೇರಿ ನಗರಕ್ಕೆ ಯಾರು?

ನಗರದ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಮಂಗಳಾದೇವಿ ನಗರ, ಅಜಾದ್ ನಗರ, ಭಗವತಿ ನಗರ ಮತ್ತು ಪುಟಾಣಿ ನಗರಗಳಿಗೆ ನಗರಸಭೆ ಪೌರಾಯುಕ್ತ ರಮೇಶ್ (94499 79262), ವಿರಾಜಪೇಟೆ ನಗರಕ್ಕೆ ವಿರಾಜಪೇಟೆ ಪ.ಪಂ. ಮುಖ್ಯಾಧಿಕಾರಿ (94499 79262) ಅವರನ್ನು ನೇಮಕ ಮಾಡಲಾಗಿದೆ.

ಅತಿವೃಷ್ಟಿಗೆ ಸಿಲುಕಿದ್ದ ಗ್ರಾಮಕ್ಕೆ ಅಧಿಕಾರಿಗಳ ನೇಮಕ

ಮುಂಗಾರು ಅವಧಿಯಲ್ಲಿ ತೀವ್ರ ಅತಿವೃಷ್ಟಿಯಿಂದ ಸಂಭವಿಸಬಹುದಾದ ಅನಾಹುತ ಎದುರಿಸಲು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳ 32 ಗ್ರಾಮ ಪಂಚಾಯಿತಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ವಿವರ ಇಂತಿದೆ: ಕೆ.ನಿಡುಗಣೆ ಗ್ರಾಮ ಪಂಚಾಯಿತಿ ದೇವಸ್ತೂರು, ಹೆಬ್ಬೆಟ್ಟಗೇರಿ ಗ್ರಾಮ ಮತ್ತು ಗಾಳಿಬೀಡು ಗ್ರಾ.ಪಂಯ ಕಾಲೂರು, ನಿಡುವಟ್ಟು ಮತ್ತು ಬಾರಿಬೆಳ್ಳಚ್ಚು ಗ್ರಾಮಕ್ಕೆ ಕೃಷಿ ಇಲಾಖೆ ಉಪ ನಿರ್ದೇಶಕ ರಾಜು ಅವರನ್ನು ನೇಮಿಸಲಾಗಿದೆ. (ಮೊಬೈಲ್‌: 99005 94717)

ಮಕ್ಕಂದೂರು ಗ್ರಾ.ಪಂ.ಯ ತಂತಿಪಾಲ, ಮುಕ್ಕೋಡ್ಲು, ಆವಂಡಿ, ಮೇಘತ್ತಾಳು, ಬಡಿಗೇರಿ ಗ್ರಾಮ್ಕಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅವಿನ್ (98869 07455), ಮಕ್ಕಂದೂರು ಗ್ರಾ.ಪಂ ಉದಯಗಿರಿ, ಮಕ್ಕಂದೂರು, ಹೆಮ್ಮತ್ತಾಳು ಗ್ರಾಮಗಳಿಗೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಶಿವಕುಮಾರ್ (97419 99571) ಅವರನ್ನು ನೇಮಕ ಮಾಡಲಾಗಿದೆ.

ಮದೆ ಗ್ರಾ.ಪಂಯ ಕಾಟಕೇರಿ, ಜೋಡುಪಾಲ, ಮದೆ ಮತ್ತು 2ನೇ ಮೊಣ್ಣಂಗೇರಿ ಗ್ರಾಮಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಎಂಜಿನಿಯರ್‌ ಹೇಮಂತ್ ಕುಮಾರ್ (99802 40966), ಗಾಳಿಬೀಡು ಗ್ರಾ.ಪಂಯ ಗಾಳಿಬೀಡು, ಹಮ್ಮಿಯಾಲ, 1ನೇ ಮೊಣ್ಣಂಗೇರಿ ಗ್ರಾಮಗಳಿಗೆ ಜಿ.ಪಂ ಉಪ ಕಾರ್ಯದರ್ಶಿ ಗುಡೂರು ಭೀಮಸೇನ (94480 45062), ಕೆ.ನಿಡುಗಣೆ ಗ್ರಾ.ಪಂಯ ಕರ್ಣಂಗೇರಿ, ಕೆ.ನಿಡುಗಣೆ ಗ್ರಾಮೀಣ ಗ್ರಾಮಗಳಿಗೆ ಬಿಸಿಎಂ ವಿಸ್ತರಣಾಧಿಕಾರಿ ಕವಿತಾ (94482 05919), ಮದೆ ಗ್ರಾ.ಪಂ.ಯ ಬೆಟ್ಟತ್ತೂರು ಗ್ರಾಮ ಮತ್ತು ಸಂಪಾಜೆಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾದೋ (94485 04537) ಅವರನ್ನು ನೇಮಿಸಲಾಗಿದೆ.

ಮೇಕೇರಿ ಗ್ರಾ.ಪಂಯ ಮೇಕೇರಿ ಮತ್ತು ಬಿಳಿಗೇರಿ ಗ್ರಾಮ ಹಾಗೂ ಮರಗೋಡು ಗ್ರಾ.ಪಂಯ ಮರಗೋಡು ಮತ್ತು ಸೊಡ್ಲೂರು ಕಟ್ಟೆಮಾಡು ಗ್ರಾಮಗಳಿಗೆ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ (98456 21719), ಕುಂದಚೇರಿ ಗ್ರಾ.ಪಂಯ ಕುಂದಚೇರಿ, ಕೋಪಟ್ಟಿ, ಸಿಂಗತ್ತೂರು ಹಾಗೂ ಚೇರಂಬಾಣೆ ಗ್ರಾ.ಪಂಯ ಬೇಂಗೂರು, ಬಿ.ಬಾಡಗ, ಕೊಳಗದಾಳು ಗ್ರಾಮಗಳಿಗೆ ಮಡಿಕೇರಿ ಅಬಕಾರಿ ಉಪ ಆಯುಕ್ತ ಮಧುಸೂದನ ರೆಡ್ಡಿ (9449 597135) ಅವರನ್ನು ನೇಮಕ ಮಾಡಲಾಗಿದೆ.

ಕಾಂತೂರು ಮೂರ್ನಾಡು ಗ್ರಾ.ಪಂಯ ಕಾಂತೂರು, ಕಿಗ್ಗಾಲು, ಎಂ. ಬಾಡಗ, ಮುತ್ತಾರ್ಮುಡಿ ಗ್ರಾಮಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲಕೃಷ್ಣ (98451 52053), ಹೊದ್ದೂರು ಗ್ರಾ.ಪಂಯ ಹೊದ್ದೂರು, ಕುಂಬಳದಾಳು ಮತ್ತು ಹೊದವಾಡ ಗ್ರಾಮಗಳಿಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಭಾರತಿ (77602 21461) ಅವರನ್ನು  ನಿಯೋಜಿಸಲಾಗಿದೆ.

ಗರ್ವಾಲೆ ಗ್ರಾ.ಪಂಯ ಗರ್ವಾಲೆ, ಶಿರಂಗಳ್ಳಿ, ಸೂರ್ಲಬ್ಬಿ ಗ್ರಾಮಗಳಿಗೆ ಮಡಿಕೇರಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ (94489 99277), ಮಾದಾಪುರ ಗ್ರಾ.ಪಂಯ ಕುಂಬೂರು, ಕಾಂಡನಕೊಲ್ಲಿ, ಮೂವತ್ತೊಕ್ಲು ಗ್ರಾಮಗಳಿಗೆ ಮಡಿಕೇರಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿ (94808 69100) ಅವರನ್ನು ನೇಮಿಸಲಾಗಿದೆ.

ಕುಶಾಲನಗರ ಪಟ್ಟಣ ಮತ್ತು ಮುಳ್ಳುಸೋಗೆ ಗ್ರಾಮಗಳಿಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ (97404 34089), ಕೂಡುಮಂಗಳೂರು ಮತ್ತು ಕೂಡಿಗೆ ಗ್ರಾ.ಪಂಯ ಬೆಂಡೆಬೆಟ್ಟ ಅರಣ್ಯ, ಮಾವಿನಹಳ್ಳ ಅರಣ್ಯ, ಜೇನುಕಲ್ಲುಬೆಟ್ಟ ಅರಣ್ಯ, ಹೆಬ್ಬಾಲೆ, ಮರೂರು ಮತ್ತು ಹುಲುಸೆ ಗ್ರಾಮಗಳಿಗೆ ಸೋಮವಾರಪೇಟೆ ಬಿಸಿಎಂ ವಿಸ್ತರಣಾಧಿಕಾರಿ ಶ್ರೀಕಾಂತ್ (96322 25847), ಚೆಟ್ಟಳ್ಳಿ ಗ್ರಾ.ಪಂಯ ಚೇರಳ ಶ್ರೀಮಂಗಲ, ಈರಳೆ ವಳಮುಡಿ, ಕೂಡ್ಲೂರು ಚೆಟ್ಟಳ್ಳಿ, ನೆಲ್ಲಿ ಹುದಿಕೇರಿ ಗ್ರಾ.ಪಂಯ ನೆಲ್ಲಿಹುದಿಕೇರಿ, ವಾಲ್ನೂರು ತ್ಯಾಗತ್ತೂರು, ಅಭ್ಯತ್‌ಮಂಗಲ ಗ್ರಾಮಕ್ಕೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಚ್.ಟಿ. ಕುಮಾರ್ (99644 81065), ತೋಳೂರು ಶೆಟ್ಟಳ್ಳಿಯ ತೋಳೂರು ಶೆಟ್ಟಳ್ಳಿ, ಚಿಕ್ಕತೋಳೂರು, ದೊಡ್ಡ ತೋಳೂರು ಮತ್ತು ಕೂತಿ ಗ್ರಾಮಗಳಿಗೆ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ (99727 13465), ಶಾಂತಳ್ಳಿ ಗ್ರಾ.ಪಂಯ ಶಾಂತಳ್ಳಿ, ಅಬ್ಬಿಮಠ, ತಲ್ತರೆ ಶೆಟ್ಟಳ್ಳಿ ಮತ್ತು ಹರಗ ಗ್ರಾಮಗಳಿಗೆ ಸೋಮವಾರಪೇಟೆ ತಾ.ಪಂ ಕಾರ್ಯನಿರ್ವಹಣಾಧಿಖಾರಿ ಸುನಿಲ್ (9480 869105), ಗೌಡಳ್ಳಿ ಗ್ರಾ.ಪಂಯ ಗೌಡಳ್ಳಿ, ಶುಂಠಿ, ಚೆನ್ನಾಪುರ, ಹೆಗ್ಗುಲ ಮತ್ತು ನಂದಿಗುಂದ ಗ್ರಾಮಗಳಿಗೆ ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಖರ್ (97415 11562) ಅವರನ್ನು ನೇಮಕ ಮಾಡಲಾಗಿದೆ.

ಐಗೂರು ಗ್ರಾ.ಪಂಯ ಐಗೂರು, ಯಡವನಾಡು ಅರಣ್ಯ 1ನೇ ಬಿಟ್, ಯಡವನಾಡು ಅರಣ್ಯ 2ನೇ ಬಿಟ್‍ಗಳಿಗೆ ಮತ್ತು ಬೇಳೂರು ಗ್ರಾ.ಪಂಯ ಬೇಳೂರು ಬಸವನಹಳ್ಳಿ, ಬಳಗುಂದ, ಕುಸುಬೂರು ಮತ್ತು ಗಡಿನಾಡು ಅರಣ್ಯಗಳಿಗೆ ಸೋಮವಾರಪೇಟೆ ಸಹಾಯಕ ಕೃಷಿ ನಿರ್ದೇಶಕರಾದ ರಾಜಶೇಖರ್ (98459 85461) ಹಾಗೂ (82779 31907), ಗುಡ್ಡೆಹೊಸೂರು ಗ್ರಾ.ಪಂ.ಯ ಬಸವನಹಳ್ಳಿ, ರಸಲ್‍ಪುರ, ಅತ್ತೂರು ಅರಣ್ಯ, ಆನೆಕಾಡು ಅರಣ್ಯ ಮತ್ತು ಬೈಚನಹಳ್ಳಿ ಗ್ರಾಮಗಳಿಗೆ ಕುಶಾಲನಗರದ ಹುಲುಗುಂದ ಉಪವಿಭಾಗದ ನಂ.:3 ಕ್ವಾಲಿಟಿ ಕಂಟ್ರೋಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ ಕುಮಾರ್ ಪಿ.ಆರ್. (9449 679751), ಕೆದಕಲ್ ನೇಗದಾಳ್, ಕಂಬಿಬಾಣೆಯ ಅತ್ತೂರು ನಲ್ಲೂರು, ಅಂದಗೋವೆಯ ಕೊಡಗರಹಳ್ಳಿ ಗ್ರಾಮಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ (ಅಕ್ಷರ ದಾಸೋಹ) ಎಚ್.ಕೆ.ಪಾಂಡು (94808 35587) ಹಾಗೂ (9448 390766), ಹಾನಗಲ್ಲು ಗ್ರಾ.ಪಂ.ಯ ಹಾನಗಲ್ಲು, ಯಡೂರು ಮತ್ತು ಕಲ್ಕಂದೂರು, ಚೌಡ್ಲು, ಸೋಮವಾರಪೇಟೆ ನಗರ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ (ಮೊಬೈಲ್‌: 99641 40613) ಅವರನ್ನು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು