ಶುಕ್ರವಾರ, ನವೆಂಬರ್ 22, 2019
20 °C
ಮುನ್ನೆಚ್ಚರಿಕೆ ವಹಿಸದಿದ್ದರೆ ಮತ್ತೆ ಅನಾಹುತ: ಭೂವಿಜ್ಞಾನಿಗಳ ಎಚ್ಚರಿಕೆ

ಬೆಟ್ಟಗಳ ಇಳಿಜಾರು ಅಸ್ಥಿರದಿಂದ ಭೂಕುಸಿತ

Published:
Updated:
Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ, ಜನವಸತಿಗಾಗಿ ಬೆಟ್ಟ ಪ್ರದೇಶದ ಇಳಿಜಾರನ್ನು ಅಸ್ಥಿರಗೊಳಿಸಿರುವುದೇ ಬೆಟ್ಟದಲ್ಲಿನ ಬಿರುಕಿಗೆ ಹಾಗೂ ಭೂಕುಸಿತಕ್ಕೆ ಕಾರಣ ಎಂದು ಭೂವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಬೆಟ್ಟಗಳನ್ನು ಅವೈಜ್ಞಾನಿಕವಾಗಿ ಮಾರ್ಪಾಡು ಮಾಡಿದರೆ ಹಾಗೂ ಸಹಜ ಇಳಿಜಾರಿಗೆ ಧಕ್ಕೆ ತಂದರೆ ಭವಿಷ್ಯದಲ್ಲಿ ಮತ್ತೆ ಭೂಕುಸಿತದ ಸಾಧ್ಯತೆ ಇದ್ದು, ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

ಕೊಡಗಿನಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ್ದ ಭೂಕುಸಿತ ಹಾಗೂ ಬೆಟ್ಟಗಳ ಬಿರುಕು ಕುರಿತು ಅಧ್ಯಯನ ನಡೆಸಿರುವ ಭಾರತೀಯ ಭೂಸರ್ವೇಕ್ಷಣಾ ಇಲಾಖೆಯ ಭೂವಿಜ್ಞಾನಿಗಳು, 25 ಪುಟಗಳ ಪ್ರಾಥಮಿಕ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ.

ಬಿರುಕು ಕಾಣಿಸಿಕೊಂಡಿದ್ದ ಅಯ್ಯಪ್ಪಬೆಟ್ಟ, ತಲಕಾವೇರಿಯ ಬ್ರಹ್ಮಗಿರಿ ಹಾಗೂ ಭೂಕುಸಿತವಾಗಿದ್ದ ತೋರ, ಕೋರಂಗಾಲದಲ್ಲಿ ಹಿರಿಯ ಭೂವಿಜ್ಞಾನಿಗಳಾದ ಸುನಂದನ್‌ ಬಸು ಹಾಗೂ ಕಪಿಲ್ ಸಿಂಗ್‌ ಅಧ್ಯಯನ ನಡೆಸಿದ್ದರು.

ತಲಕಾವೇರಿ ಭಾಗದಲ್ಲಿ ರಸ್ತೆ ವಿಸ್ತರಣೆ ಸಂದರ್ಭ ಮುನ್ನೆಚ್ಚರಿಕೆ ಕ್ರಮ ವಹಿಸದೇ, ಇಳಿಜಾರು ಕತ್ತರಿಸಲಾಗಿದೆ. ಮಳೆ ನೀರು ಇಳಿಯಲು ಸೂಕ್ತ ಮಾರ್ಗೋಪಾಯ ಕಂಡುಕೊಂಡಿಲ್ಲ. ಬೆಟ್ಟದ ಮೇಲೆ ಇಂಗು ಗುಂಡಿ ಸಹ ತೆಗೆಯಲಾಗಿದೆ. ಅದರಲ್ಲಿ ಶೇಖರಣೆಗೊಂಡಿರುವ ನೀರಿನಿಂದ ಬಿರುಕು ಕಾಣಿಸಿಕೊಂಡಿರುವ ಸಾಧ್ಯತೆಯಿದೆ. ತೋರ ಹಾಗೂ ಅಯ್ಯಪ್ಪ ಬೆಟ್ಟದ ತಪ್ಪಲು ಪ್ರದೇಶ ಮುಖ್ಯವಾಗಿ ಜನವಸತಿಗಾಗಿಯೇ ಮಾರ್ಪಾಡಾಗಿದ್ದು, ಅದರ ವಿಸ್ತೃತ ಅಧ್ಯಯನಕ್ಕೆ ಇನ್ನಷ್ಟು ಸಮಯಬೇಕು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಬಿರುಕು ಬಿಟ್ಟ ಜಾಗವನ್ನು ಮುಚ್ಚಬೇಕು. ಈ ತಪ್ಪಲಿನಲ್ಲಿ ಜನವಸತಿ ಪ್ರದೇಶವನ್ನು ನಿರ್ಬಂಧಿಸಬೇಕು. ಇಲ್ಲಿ ವಾಸವಿರುವ ಜನರು, ಮಳೆಗಾಲ ಮುಗಿಯುವವರೆಗೆ ಸುರಕ್ಷಿತ ಸ್ಥಳದಲ್ಲೇ ನೆಲೆಸಲು ಕ್ರಮ ಕೈಗೊಳ್ಳಬೇಕು. ಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ಮತ್ತಿತರ ಅಭಿವೃದ್ಧಿ ಕಾಮಗಾರಿ ನಡೆಸುವಾಗ ಅದು ವೈಜ್ಞಾನಿಕವಾಗಿ ಇರುವಂತೆ ನಿಗಾ ವಹಿಸುವಂತೆ ಮಾಡಬೇಕು. ರಸ್ತೆ ಬದಿಯಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದೂ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. 

ಪ್ರತಿಕ್ರಿಯಿಸಿ (+)