ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಮೂವರು ಸಾಧಕರಿಗೆ ವಾರ್ಷಿಕ ಪ್ರಶಸ್ತಿ

Last Updated 24 ಮೇ 2019, 13:43 IST
ಅಕ್ಷರ ಗಾತ್ರ

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿಗೆ ವಿವಿಧ ಕ್ಷೇತ್ರದ 3 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ.ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ (ಕೊಡವ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರ), ಕೋಳೆರ ಸನ್ನು ಕಾವೇರಪ್ಪ (ಕೊಡವ ಕಲಾ ಕ್ಷೇತ್ರ), ನಾಳಿಯಮ್ಮಂಡ ಕೆ. ಅಚ್ಚಮ್ಮಯ್ಯ (ಕೊಡವ ಜಾನಪದ ಕ್ಷೇತ್ರ) ಅವರು ಆಯ್ಕೆಗೊಂಡಿದ್ದಾರೆ. ಮೂವರು ಸಾಧಕರು ಕೊಡಗು ಜಿಲ್ಲೆಯವರೇ ಎಂದು ಮಾಹಿತಿ ನೀಡಿದರು.

ಪ್ರಶಸ್ತಿ ಪುರಸ್ಕೃತರಿಗೆ ₹ 50 ಸಾವಿರ ನಗದು, ಶಾಲು, ಹಾರ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಜೂನ್‌ 9ರಂದು ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ನಡೆಯುವ ‘ಬೊಳ್ಳಿನಮ್ಮ’ಯಲ್ಲಿ ಸಾಧಕರನ್ನು ಗೌರವಿಸಲಾಗುವುದು ಎಂದು ಪೊನ್ನಪ್ಪ ಹೇಳಿದರು.

ಸಾಧಕರ ಪರಿಚಯ: ಡಾ.ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ (84) ಅವರು ನಡಿಕೇರಿಯಂಡ ಚಿಣ್ಣಪ್ಪ ಅವರ ಮೊಮ್ಮಗಳು. ಬೊವ್ವೇರಿಯಂಡ ಎಂ. ಚಿಣ್ಣಪ್ಪ ಅವರನ್ನು ವಿವಾಹವಾಗಿದ್ದಾರೆ. ದೇಶ–ವಿದೇಶಗಳ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವವಿರುವ ಇವರು 1995ರಲ್ಲಿ ಕೆನಡಾದಿಂದ ಹಿಂತಿರುಗಿದ ನಂತರ ಬರೆಯುವ ಹವ್ಯಾಸವನ್ನು ತೊಡಗಿಸಿಕೊಂಡಿದ್ದಾರೆ. ಇವರ ಅಜ್ಜ ನಡಿಕೇರಿಯಂಡ ಚಿಣ್ಣಪ್ಪ ಅವರು ಬರೆದಿರುವಂತಹ ‘ಪಟ್ಟೋಲೆ ಪಳಮೆ’ ಪುಸ್ತಕವನ್ನು ಇಂಗ್ಲಿಷ್‌ಗೆ ಅನುವಾದಸಿದ್ದರು. 2003ರಿಂದ 2008ರ ತನಕ ಕೊಡಗಿನ ಎಲ್ಲಾ ಭಾಷಿಕ ಜನಾಂಗದವರ ಐನ್‌ಮನೆಗಳಿಗೆ ಭೇಟಿ 800ಕ್ಕೂ ಹೆಚ್ಚು ಐನ್‌ಮನೆಗಳ ವಿವರಗಳನ್ನು ಸಂಗ್ರಹಿಸಿ ‘ಐನ್‌ಮನೆಸ್‌ ಆಫ್ ಕೊಡಗ’ ಎಂಬ ಪುಸ್ತಕವನ್ನು ಹೊರ ತಂದಿದ್ದಾರೆ.

ಕೋಳೇರ ಸನ್ನು ಕಾವೇರಪ್ಪ (57) ಅವರು ವಿರಾಜಪೇಟೆ ತಾಲ್ಲೂಕಿನ ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಕೇರಿ ಗ್ರಾಮದಲ್ಲಿ ಕೋಳೆರ ಪೆಮ್ಮಯ್ಯ ಮತ್ತು ನೀಲಮ್ಮ ದಂಪತಿ ಪುತ್ರ. 3ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವಾಗಲೇ ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ಅಭಿನಯಿಸುವುದರ ಮೂಲಕ ಕಲಾ ಜೀವನ ಆರಂಭಿಸಿ, ನಂತರದ ದಿನಗಳಲ್ಲಿ ವರ್ಷಂಪ್ರತಿ ನಾಟಕ, ಛದ್ಮಾವೇಷಗಳಲ್ಲಿ ಅಭಿನಯಿಸುತ್ತಾ ಬಂದು 1981ರಲ್ಲಿ ಸೃಷ್ಟಿ ಕೊಡವರಂಗ ತಂಡವನ್ನು ಸೇರ್ಪಡೆಯಾದರು. 1985ರಲ್ಲಿ ನೀನಾಸಂ ರಂಗ ಶಿಕ್ಷಣ ತರಬೇತಿ ಪಡೆದರು. ಸೃಷ್ಟಿ ಸಂಸ್ಥೆಯ ನಾಟಕಗಳಾದ ಕಳ್ಳ್, ಪೆರ್ಚೊಳಿಯ, ದಿವಾನ್ ಬೋಪಣ್ಣ, ನೀಲಿ ಕುದುರೆ, ತಬರನ ಕಥೆ, ಬಿದ್ದು ಟೈಲರ್‌ನ ಪೊಣ್ಣ್, ಪೋಲಿ ಕಿಟ್ಟಿ, ತದ್ರೂಪಿ, ಕಟ್ಟೆ, ಕೊಡಗ್‌ ರಾಜ್ಯ, ಈಡಿಪಸ್, ಮಾಚಯ್ಯ, ನಾಟಕಗಳಲ್ಲಿ ಅಭಿನಯಿಸಿದ್ದಾರೆ.

1996ರಲ್ಲಿ ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ತಂಡದಲ್ಲಿ ನಾಟಕ ನಿರ್ದೇಶನದೊಂದಿಗೆ ಓಂಕಾರೇಶ್ವರ, ಪರ್ಂಜ ಕಣ್ಣೀರ್, ಇಗ್ಗುತ್ತಪ್ಪ, ಕಾವೇರಿ, ಯಯಾತಿ, ಆಲಿಬಾಬಾ, ಬ್ರಹ್ಮತೀರ್ಥ, ತೆಳ್ಂಗ್‌ನ ಕಾವೇರಿ, ಕುರ್ಕ್ಂಗ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೊಡವ ನಾಟಕ, ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕೊಡವ ಭಾಷಾ ಚಲನಚಿತ್ರಗಳಲ್ಲಿ ಅಭಿನಯಿಸುವುದರ ಮೂಲಕ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್‌ ಚಂದ್ರಹಾಸ ರೈ, ಸದಸ್ಯರಾದ ತೋರೇರ ಮುದ್ದಯ್ಯ, ಹಂಚೆಟ್ಟಿರ ಹಂಚೇಟ್ಟಿರ ಮನು ಮುದ್ದಯ್ಯ, ಬೊಳ್ಳಜಿರ ಬಿ. ಅಯ್ಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT