ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಗೋದಾಮಿನಲ್ಲಿದೆ ಇನ್ನೂ 43 ಟನ್‌ ಅಕ್ಕಿ!  

7 ಪರಿಹಾರ ಕೇಂದ್ರಕ್ಕೆ ಪೂರೈಕೆ ಆಗುತ್ತಿರುವ ಪರಿಹಾರ ಸಾಮಗ್ರಿ
Last Updated 6 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಕೊಡಗು ಜಿಲ್ಲೆಗೆ ರಾಜ್ಯದ ಮೂಲೆ ಮೂಲೆಯಿಂದ ಅಪಾರ ಪ್ರಮಾಣದ ಆಹಾರ ಸಾಮಗ್ರಿ ಹರಿದು ಬಂದಿತ್ತು. ಅದರಲ್ಲಿ 43 ಟನ್‌ನಷ್ಟು ಅಕ್ಕಿ ಇನ್ನೂ ಗೋದಾಮಿನಲ್ಲಿಯೇ ದಾಸ್ತಾನಿದೆ!

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡದಲ್ಲಿ ದಾಸ್ತಾನು ಇಡಲಾಗಿದೆ. ಮಡಿಕೇರಿಯಲ್ಲಿ 6, ಕುಶಾಲನಗರದಲ್ಲಿ 1 ಒಟ್ಟು 7 ಪರಿಹಾರ ಕೇಂದ್ರದಲ್ಲಿ ಇನ್ನೂ 510 ಮಂದಿ ಸಂತ್ರಸ್ತರು ಆಶ್ರಯ ಪಡೆದುಕೊಂಡಿದ್ದಾರೆ. ನೆರವಿನ ರೂಪದಲ್ಲಿ ಬಂದಿರುವ ಆಹಾರ ಪದಾರ್ಥಗಳನ್ನೇ ಪರಿಹಾರ ಕೇಂದ್ರಕ್ಕೆ ಪೂರೈಕೆ ಮಾಡಲಾಗುತ್ತಿದೆ.

ಆಗಸ್ಟ್‌ನಲ್ಲಿ ನೆರವಿನ ಮಹಾಪೂರವೇ ಹರಿದುಬಂದಿತ್ತು. ಕೆಲವು ಸಂಘ– ಸಂಸ್ಥೆಗಳು ನೇರವಾಗಿ ಸಂತ್ರಸ್ತರಿಗೆ ವಿತರಣೆ ಮಾಡಿದ್ದರು. ಇನ್ನು ಕೆಲವರು ಜಿಲ್ಲಾಡಳಿತ ಗೋದಾಮುಗಳಿಗೆ ಪೂರೈಕೆ ಮಾಡಿದ್ದರು. ಆ ಎಲ್ಲ ವಸ್ತುಗಳನ್ನು ಗೋದಾಮಿನಲ್ಲಿ ಇಡಲಾಗಿದೆ.

ಗೋಧಿ ಹಿಟ್ಟು, 1,030 ಬೆಡ್‌ಶೀಟ್‌, 250 ಜಮಕಾನ, ಅಂದಾಜು 60 ಸಾವಿರ ಸೋಪು, ಅಪಾರ ಪ್ರಮಾಣದ ಟೂತ್‌ಪೇಸ್ಟ್‌, ಬ್ರಶ್‌, ಪರುಷರ–ಮಹಿಳೆಯರ ಹಾಗೂ ಮಕ್ಕಳ ಉಡುಪು, ಪಾತ್ರೆ, ಕುಕ್ಕರ್, ಗ್ಯಾಸ್‌ ಪೈಪ್, ಹಾಟ್‌ಬಾಕ್ಸ್, ವಾಟರ್‌ ಕ್ಯಾನ್‌, ಸ್ಟೀಲ್‌ ಲೋಟ ಹಾಗೂ ತಟ್ಟೆ, ದಿಂಬು, ಸ್ಯಾನಿಟರಿ ಪ್ಯಾಡ್‌, ಜರ್ಕಿ, ಕೊಡೆ ಸೇರಿದಂತೆ ರಾಶಿ ರಾಶಿ ವಸ್ತುಗಳು ಶಾಲಾ ಕೊಠಡಿಯಲ್ಲಿ ಬಿದ್ದಿವೆ.

‘ಯಾವ ವಸ್ತುಗಳೂ ದುರುಪಯೋಗ ಆಗುತ್ತಿಲ್ಲ. ಅಕ್ಕಿಯೂ ಹಾಳಾಗುತ್ತಿಲ್ಲ. ಅಕ್ಕಿಯ ಗುಟ್ಟಮಟ್ಟ ಪರೀಕ್ಷಿಸಲು ಲ್ಯಾಬ್‌ಗೆ ಕಳುಹಿಸಲಾಗಿದೆ. ವಾರದಲ್ಲಿ ವರದಿ ಬರಲಿದೆ. ಪೊಲೀಸ್‌ ಕಾವಲಿದೆ. ಗೋದಾಮಿನ ಸುತ್ತ ಸಿ.ಸಿ ಟಿ.ವಿ ಕ್ಯಾಮೆರಾ ಕಣ್ಗಾವಲಿದೆ’ ಎಂದು ಗೋದಾಮಿನ ನೋಡಲ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಸಂತ್ರಸ್ತರು ಇನ್ನೂ ಪರಿಹಾರ ಕೇಂದ್ರದಲ್ಲಿಯೇ ತಂಗಿರುವ ಕಾರಣ ಸಂಕಷ್ಟಕ್ಕೆ ಒಳಗಾಗಿರುವ ಗ್ರಾಮದ ಜನರಿಗೆ ಈ ಸಾಮಗ್ರಿಗಳನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ. ಪರಿಹಾರ ಕೇಂದ್ರದಿಂದ ಸಂತ್ರಸ್ತರು ತೆರಳಿದ ಬಳಿಕವಷ್ಟೇ ಜಿಲ್ಲಾಧಿಕಾರಿ ಸೂಚನೆಯಂತೆ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗುವುದು. ಅದಕ್ಕಾಗಿಯೇ ಆಹಾರ ಕಿಟ್‌ ಸಿದ್ಧ ಮಾಡಿಕೊಳ್ಳಲಾಗುತ್ತಿದೆ’ ಎಂದೂ ವಿವರಿಸಿದರು.

ವಿದ್ಯಾರ್ಥಿಗಳಿಗೆ ತೊಂದರೆ: ಮೂರು ತಿಂಗಳಿಂದ ಸಾಮಗ್ರಿ ದಾಸ್ತಾನಿಗೆ ಕೊಠಡಿ ಬಿಟ್ಟುಕೊಡಲಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಕೊಠಡಿ ಬಿಟ್ಟುಕೊಡಿ ಎಂದು ಶಾಲಾ ಅಭಿವೃದ್ಧಿ ಸಮಿತಿ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT