ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಾಪಸಿಂಹ ಜನರ ಸೇವೆ ಮರೆತು ವ್ಯಾಪಾರ: ಕೆ.ಕೆ.ಮಂಜುನಾಥ್ ವಾಗ್ದಾಳಿ

Last Updated 3 ಏಪ್ರಿಲ್ 2019, 13:49 IST
ಅಕ್ಷರ ಗಾತ್ರ

ಪೊನ್ನಂಪೇಟೆ: ಜಿಲ್ಲೆಯ ಆರ್ಥಿಕ ವ್ಯವಸ್ಥೆ ಹಾಳಾಗಲು ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪಸಿಂಹ ಕಾರಣರಾಗುವ ಮೂಲಕ ಜಿಲ್ಲೆಗೆ ಶಾಪವಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಆರೋಪಿಸಿದರು.

ಇಲ್ಲಿನ ನೀಲೇಶ್ವರ ಕಾಂಪ್ಲೆಕ್ಸ್‌ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಾಪಸಿಂಹ ಜನರ ಸೇವೆ ಮಾಡದೇ, ವ್ಯಾಪಾರ ಮಾಡಲು ಬಂದಿದ್ದಾರೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕೊಡಗಿನ ರೈತರ ಜೀವನವನ್ನು ಹಾಳು ಮಾಡಿದ್ದಾರೆ. ಉದ್ಯಮಿಗಳ ಜೊತೆ ಕೈಜೋಡಿಸಿ ಮೈಸೂರಿನಲ್ಲಿ ಕಚೇರಿ ತೆರೆದು ವ್ಯವಹಾರ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

‘ಕರಿಮೆಣಸು ಬೆಲೆ ಕುಸಿತಕ್ಕೆ ಪರೋಕ್ಷವಾಗಿ ಸಂಸದರು ಕಾರಣ. ರೈತರ ಪರ ಉತ್ತಮ ಚಿಂತನೆಗಳನ್ನು ಹೊಂದಿರುವ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರನ್ನು ವಿಜಯಶಾಲಿಯನ್ನಾಗಿ ಮಾಡಬೇಕು. ಆ ಮೂಲಕ ಪ್ರತಾಪಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಮಯ ಬಂದಿದೆ. ಮೋದಿ ಸರ್ಕಾರ ಜನಪರ ಯೋಜನೆಗಳನ್ನು ರೂಪಿಸಿಲ್ಲ. ಉದ್ಯೋಗ ಸೃಷ್ಟಿ ಬಗ್ಗೆ ಬಿಜೆಪಿ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ. ಸರ್ಜಿಕಲ್ ಸ್ಟ್ರೈಕ್‌ ವಿಚಾರವನ್ನು ಗೋಪ್ಯವಾಗಿ ಇರಿಸುವುದನ್ನು ಬಿಟ್ಟು ಮಾಹಿತಿ ಸೋರಿಕೆ ಮಾಡಿ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಚುನಾವಣಾ ವೀಕ್ಷಕ ಟಿ.ಎಂ.ಶಾಹಿದ್ ಮಾತನಾಡಿ, ಕೋಮು ಗಲಭೆಗಳಲ್ಲಿ ಯುವಕರನ್ನು ಭಾಗವಹಿಸುವಂತೆ ಯುವಜನತೆಯನ್ನು ಬಿಜೆಪಿ ದಾರಿ ತಪ್ಪಿಸುತ್ತಿದೆ. ಬಿಜೆಪಿ ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಪ್ರಚಾರದಲ್ಲಿ ಮನೆಗಳಿಗೆ ತೆರಳಿ ಮೋದಿ ಉದ್ಯೋಗ ಸೃಷ್ಟಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಉದ್ಯೋಗ ಸೃಷ್ಟಿ ಯಾವ ದೃಷ್ಟಿಯಲ್ಲಿ ಅಧಿಕವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ವಿವರಣೆ ನೀಡಬೇಕು ಎಂದು ಹೇಳಿದರು.

ಜೆಡಿಎಸ್ ಮುಖಂಡ ದಯಾ ಚಂಗಪ್ಪ ಮಾತನಾಡಿ, ‘ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಕಾರ್ಯಕರ್ತರು ಸಕ್ರಿಯರಾಗಿ ಕೆಲಸ ಮಾಡಬೇಕು. ಬಿಜೆಪಿ ಕಾರ್ಯಕರ್ತರು ಮೈತ್ರಿ ಸರಕಾರದ ಪರ ಮತ ಚಲಾಯಿಸಲು ಒಲವು ಹೊಂದಿರುವ ಜನರನ್ನು ದಾರಿ ತಪ್ಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೈತ್ರಿ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸುವ ಕೆಲಸವನ್ನು ಮೈತ್ರಿ ಪಕ್ಷದ ಕಾರ್ಯಕರ್ತರು ಮಾಡಬೇಕು’ ಎಂದು ಕರೆ ನೀಡಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕುಲ್ಲಚಂಡ ಗಣಪತಿ, ಜೆಡಿಎಸ್ ಮುಖಂಡ ಮನೆಯಪಂಡ ಬೆಳ್ಯಪ್ಪ, ಜೆಡಿಎಸ್ ವಕ್ತಾರ ಎಂ.ಟಿ.ಕಾರ್ಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ, ಪರಿಶಿಷ್ಟ ವರ್ಗಗಳ ಅಧ್ಯಕ್ಷೆ ಪಂಕಜಾ, ಹಿಂದುಳಿದ ವರ್ಗಗಳ ಅಧ್ಯಕ್ಷ ಸರಾ ಚಂಗಪ್ಪ, ವಕ್ತಾರ ಟಾಟು ಮೊಣ್ಣಪ್ಪ, ಪ್ರಮುಖರಾದ ಮೂಕಳೇರ ಕುಶಾಲಪ್ಪ, ಕುಸುಮಾ ಜೋಯಪ್ಪ, ಶ್ರೀಜಾ ಅಚ್ಚುತ್ತನ್, ಆಶಾ ಜೇಮ್ಸ್, ಮೂಕಳೇರ ಆಶಾ ಇದ್ದರು.

ಈಚೆಗೆ ನಿಧನರಾದ ಕಾಂಗ್ರೆಸ್ ಮುಖಂಡ ಜಮ್ಮಡ ಕರುಂಬಯ್ಯ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT