ಕೊಡಗು ನೆರೆ ಸಂತ್ರಸ್ತರಿಗೆ ಮದೆಯಲ್ಲಿ ಮನೆ: ತಿಂಗಳ ಅಂತ್ಯಕ್ಕೆ ಪೂರ್ಣ

ಸೋಮವಾರ, ಮೇ 27, 2019
23 °C

ಕೊಡಗು ನೆರೆ ಸಂತ್ರಸ್ತರಿಗೆ ಮದೆಯಲ್ಲಿ ಮನೆ: ತಿಂಗಳ ಅಂತ್ಯಕ್ಕೆ ಪೂರ್ಣ

Published:
Updated:
Prajavani

ಮಡಿಕೇರಿ: ಕೊಡಗು ನೆರೆ ಸಂತ್ರಸ್ತರಿಗೆ ರಾಷ್ಟ್ರೀಯ ಹೆದ್ದಾರಿ–275ರ (ಮಡಿಕೇರಿ–ಸಂಪಾಜೆ) ಸಮೀಪದ ಮದೆ ಗ್ರಾಮದಲ್ಲಿ ನಿರ್ಮಿಸುತ್ತಿರುವ ಮನೆಗಳು ಇದೇ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆಯಿದ್ದು ಕಾಮಗಾರಿ ಬರದಿಂದ ಸಾಗುತ್ತಿದೆ.

ಉತ್ತರ ಭಾರತದಿಂದ ಬಂದಿರುವ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದು ಮೇ 31ರ ವೇಳೆಗೆ ಎಲ್ಲ ಮನೆಗಳ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದು ಕಾರ್ಮಿಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮದೆ ಗ್ರಾಮದ ಸರ್ವೆ ನಂಬರ್ 399ರಲ್ಲಿ 11 ಎಕರೆ ಸರ್ಕಾರಿ ಜಾಗವನ್ನು ಪುನರ್ವಸತಿಗಾಗಿ ಜಿಲ್ಲಾಡಳಿತ ವಶಕ್ಕೆ ಪಡೆದಿತ್ತು. ಆ ಸ್ಥಳದಲ್ಲಿ 82 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು 74 ಮನೆಗಳ ಕಾಮಗಾರಿ ಪೂರ್ಣವಾಗಿದೆ. ಉಳಿದ 8 ಮನೆಗಳ ಕಾಮಗಾರಿ ಬಾಕಿಯಿದ್ದು, ಕೆಲವೇ ದಿನಗಳಲ್ಲಿ ಆ ಮನೆಗಳೂ ಪೂರ್ಣಗೊಳ್ಳಲಿವೆ ಎಂದು ಗುತ್ತಿಗೆದಾರರು ಹಾಗೂ ಕಾರ್ಮಿಕರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆರಂಭಿಕ ಹಂತದಲ್ಲಿ ಜಿಲ್ಲೆಯ ಕರ್ಣಂಗೇರಿ, ಬಿಳಿಗೇರಿ, ಗಾಳಿಬೀಡು, ಮದೆ ಹಾಗೂ ಜಂಬೂರು (ಮಾದಾಪುರ) ಗ್ರಾಮದಲ್ಲಿ 78.46 ಎಕರೆ ಪ್ರದೇಶದಲ್ಲಿ 770 ನಿವೇಶನ ಗುರುತಿಸಲಾಗಿತ್ತು. ಮೊದಲ ಹಂತದಲ್ಲಿ ಕರ್ಣಂಗೇರಿ, ಮದೆ ಹಾಗೂ ಜಂಬೂರಿನಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಕರ್ಣಂಗೇರಿಯಲ್ಲಿ 35 ಮನೆ ಪೂರ್ಣಗೊಂಡು ಸಂತ್ರಸ್ತರಿಗೆ ಹಂಚಿಕೆ ಕಾರ್ಯವೂ ಮುಕ್ತಾಯವಾಗಿದೆ. ಆ ಸ್ಥಳದಲ್ಲಿ ರಸ್ತೆ, ನೀರು ಹಾಗೂ ವಿದ್ಯುತ್‌ ಸೌಲಭ್ಯ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ವಾರದಲ್ಲಿ ಅದೂ ಪೂರ್ಣಗೊಳ್ಳಲಿದೆ. ಜಂಬೂರಿನಲ್ಲಿ ಇನ್ಫೊಸಿಸ್‌ ‍ಪ್ರತಿಷ್ಠಾನದಿಂದ 200 ಮನೆ ನಿರ್ಮಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಜಂಬೂರಿನಲ್ಲಿ ಈ ಮಳೆಗಾಲಕ್ಕೆ ಮನೆ ಸಿಗುವುದು ಕಷ್ಟ ಎನ್ನುವ ಮಾತುಗಳೂ ವ್ಯಕ್ತವಾಗುತ್ತಿವೆ.

‘ಮಳೆಯಿಂದ ಸಂಕಷ್ಟಕ್ಕೆ ಒಳಗಾದವರಿಗೇ ಮನೆ ಕಟ್ಟುತ್ತಿರುವುದು. ಮುಂಗಾರು ಮಳೆ ಜಿಲ್ಲೆಗೆ ಕಾಲಿಡುವ ಮೊದಲೇ ಮದೆಯಲ್ಲಿ ಮನೆ ವಿತರಣೆ ಮಾಡುತ್ತೇವೆ. ಜಂಬೂರಿನಲ್ಲಿ 150ರಿಂದ 200 ಮನೆಗಳು ಮಾತ್ರ ಜೂನ್‌ 15ರ ವೇಳೆಗೆ ಪೂರ್ಣಗೊಳ್ಳಲಿವೆ. ಉಳಿದವು ವಿಳಂಬವಾಗಲಿವೆ’ ಎಂದು ಮದೆ ಗ್ರಾಮದಲ್ಲಿ ಎಂಜಿನಿಯರ್‌ ಒಬ್ಬರು ಮಾಹಿತಿ ನೀಡಿದರು.

ಎರಡು ಬೆಡ್‌ ರೂಂ ಮನೆ: ಮದೆಯಲ್ಲೂ ಎರಡು ಬೆಡ್‌ ರೂಂ ಮನೆಯನ್ನೇ ರಾಜೀವ್‌ ಗಾಂಧಿ ವಸತಿ ನಿಗಮದಿಂದ ನಿರ್ಮಿಸುತ್ತಿದ್ದು, ಪ್ರತಿ ಮನೆಗೆ ₹ 9.85 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಮದೆಯಲ್ಲಿ ಜಾಗವು ಸಮತಟ್ಟಾಗಿದ್ದು ಮಳೆಗಾಲದಲ್ಲಿ ಯಾವುದೇ ಆತಂಕ ಎದುರಾಗುವುದಿಲ್ಲ. ಸುತ್ತಲೂ ಯಾವುದೇ ಬೆಟ್ಟಗಳೂ ಇಲ್ಲ. ಈ ಸ್ಥಳದಲ್ಲಿ ಆರು ಮನೆ ಹೊರತು ಪಡಿಸಿ ಉಳಿದ ಮನೆಗಳು ಛಾವಣಿ ಹಂತದಲ್ಲಿವೆ. ಟೈಲ್ಸ್‌ ಅಳವಡಿಕೆ ಕೆಲಸ ಸಾಗುತ್ತಿದೆ. ಕಿಟಕಿ, ಬಾಗಿಲು ಅಳವಡಿಕೆ, ವಿದ್ಯುತ್‌ ಸಂಪರ್ಕ, ಚರಂಡಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿ ಬಾಕಿಯಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !