ಗುರುವಾರ , ಅಕ್ಟೋಬರ್ 29, 2020
20 °C

ಕೊಡಗಿನಲ್ಲಿ ಭೂಮಿ ಕಂಪಿಸಿದ ಅನುಭವ; ಭಾರೀ ಮಳೆ ಜತೆ ಕೇಳಿಸಿದ ಜೋರಾದ ಶಬ್ದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಭೂಕುಸಿತ ಹಾಗೂ ಪ್ರವಾಹದ ನಂತರ ಚೇತರಿಸಿಕೊಳ್ಳುತ್ತಿರುವ ಕೊಡಗಿನಲ್ಲಿ, ಗುರುವಾರ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಈ ರೀತಿಯ ಅನುಭವವಾಗಿದ್ದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. 

ನೆಲ್ಯಹುದಿಕೇರಿ, ನಲ್ವತ್ತೆಕ್ರೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಮಳೆಯಾಗಿದ್ದು, ಆ ಸಂದರ್ಭದಲ್ಲಿ ಭೂಮಿಯೂ ಕಂಪಿಸಿದೆ. ಮನೆಯಲ್ಲಿದ್ದ ಪಾತ್ರೆ ಹಾಗೂ ಇತರ ವಸ್ತುಗಳು ಅಲುಗಾಡಿದವು ಎಂದು ಸ್ಥಳೀಯ ನಿವಾಸಿ ಅರ್ಚನಾ ತಿಳಿಸಿದರು.

ದಕ್ಷಿಣ ಕೊಡಗು ವ್ಯಾಪ್ತಿಯ ಕುರ್ಚಿ, ಪೊನ್ನಂಪೇಟೆ, ಕಾನೂರು, ಬಾಳೆಲೆ, ಮಾಯಮುಡಿ, ನಾಲ್ಕೇರಿ, ಕಳತ್ಮಾಡು, ಕೋಟೂರು, ಬಲ್ಯಮಂಡೂರು, ತೂಚಮಕೇರಿ ವ್ಯಾಪ್ತಿಯಲ್ಲಿ ರಾತ್ರಿ ಭೂಮಿಯ ಒಳಗಿನಿಂದಲೇ ಜೋರಾದ ಶಬ್ದ ಕೇಳಿಬಂದಿದೆ. ಕುರ್ಚಿ ಗ್ರಾಮದಲ್ಲಿ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ರಾತ್ರಿ 10 ಗಂಟೆಯ ತನಕವೂ ವಿವಿಧೆಡೆ ಹಂತ ಹಂತವಾಗಿ ಶಬ್ದ ಕೇಳಿಸುವ ಜತೆಗೆ ಸಣ್ಣ ಪ್ರಮಾಣದ ಕಂಪನವಾಗಿದೆ. ಇದೇ ಸಮಯದಲ್ಲಿ ದಕ್ಷಿಣ ಕೊಡಗಿನಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯೂ ಸುರಿದಿದೆ. ಬಾಳೆಲೆಯಲ್ಲಿ ಬೇಕರಿ ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದಾಗಿ ಸ್ಥಳೀಯರು ತಿಳಿಸಿದರು.

ಕಳೆದ ವರ್ಷದ ಜುಲೈ 8ರಂದು ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ, ಶಾಂತಳ್ಳಿ, ಬೆಟ್ಟದಳ್ಳಿ, ಮಕ್ಕಂದೂರು ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿತ್ತು. ಬಳಿಕ ಆಗಸ್ಟ್‌ನಲ್ಲಿ ಮಹಾಮಳೆಗೆ ಕೊಡಗಿನಲ್ಲಿ ಭೂಕುಸಿತದ ದುರಂತ ನಡೆದಿತ್ತು. 

‘ಗಾಳಿಬೀಡು, ಕುಶಾಲನಗರ ಸಮೀಪದ ಹಾರಂಗಿ ಜಲಾಶಯ, ಮಂಡ್ಯದ ಕೆಆರ್‌ಎಸ್‌ನಲ್ಲಿ ಅಳವಡಿಸಿರುವ ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ ದಾಖಲಾಗಿಲ್ಲ. 1ಕ್ಕಿಂತ ಹೆಚ್ಚಿನ ತೀವ್ರತೆಯಿದ್ದರೆ ಮಾತ್ರ ದಾಖಲಾಗಲಿದೆ. ಗುಡುಗಿನ ತೀವ್ರತೆಗೆ ಈ ರೀತಿ ಆಗಿರಲೂಬಹುದು. ಜನರು ಆತಂಕ ಪಡುವುದು ಬೇಡ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ’ಪ್ರಜಾವಾಣಿ’ಗೆ ತಿಳಿಸಿದರು. 

ಅಧಿಕಾರಿಗಳ ಭೇಟಿ: ನೆಲ್ಯಹುದಿಕೇರಿ, ನಲ್ವತ್ತೆಕ್ರೆ ಭಾಗದಲ್ಲಿ ಭೂಮಿ ಕಂಪಿಸಿದ ಸ್ಥಳಕ್ಕೆ ಅಮ್ಮತ್ತಿ ಹೋಬಳಿ‌ ಕಂದಾಯ ಪರಿವೀಕ್ಷಕ ಅನಿಲ್ ಹಾಗೂ ಸಹಾಯಕ ಕೃಷ್ಣ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು