ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯಗೊಂಡು ಹೊರಗೆ ಓಡಿಬಂದಿದ್ದ ಜನ; ದಕ್ಷಿಣ ಕೊಡಗಿನ ಸ್ಥಳೀಯರಲ್ಲಿ ಆತಂಕ

Last Updated 24 ಮೇ 2019, 12:52 IST
ಅಕ್ಷರ ಗಾತ್ರ

ಪೊನ್ನಂಪೇಟೆ/ಸಿದ್ದಾಪುರ: ದಕ್ಷಿಣ ಕೊಡಗಿನ ಹಲವು ಗ್ರಾಮ ಹಾಗೂ ಸಿದ್ದಾಪುರ ಸಮೀಪದ ಕೆಲವು ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಗುರುವಾರ ರಾತ್ರಿ ಸುರಿದ ಮಳೆ, ಗಾಳಿ ಹಾಗೂ ಗುಡುಗಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಸುಮಾರು 3 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವ ಜನರನ್ನು ಬೆಚ್ಚಿ ಬೀಳಿಸಿತು.

ಸಿದ್ದಾಪುರ ಸಮೀಪದ ಮರಗೋಡು ವ್ಯಾಪ್ತಿಯಲ್ಲೂ ಇಂತಹ ಅನುಭವವಾಗಿದೆ. ಕುರ್ಚಿ ಗ್ರಾಮದಲ್ಲಿ ಹೆದರಿ ಮನೆಯಿಂದ ಹೊರ ಬಂದು ಘಟನೆ ಕೂಡ ನಡೆದಿದೆ. ನೆಲ್ಯಹುದಿಕೇರಿ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ದಕ್ಷಿಣ ಕೊಡಗಿನಲ್ಲಿ ಗುರುವಾರ ರಾತ್ರಿ 10 ಗಂಟೆವರೆಗೆ ವಿವಿಧ ಗ್ರಾಮಗಳಲ್ಲಿ ಹಂತ ಹಂತವಾಗಿ ಭೂಕಂಪನದ ಅನುಭವವಾಗಿರುವ ಬಗ್ಗೆ ಗ್ರಾಮಸ್ಥರು ಅನುಭವ ಹಂಚಿಕೊಂಡಿದ್ದಾರೆ.

ಪೊನ್ನಂಪೇಟೆ, ಮತ್ತೂರು, ಬಾಳಾಜಿ ಗ್ರಾಮಗಳಲ್ಲಿ ಸಂಜೆ 7ರ ಸುಮಾರಿಗೆ ಮಿಂಚು, ಗುಡುಗು ಕಾಣಿಸಿಕೊಂಡಿದ್ದು, ಭೂಮಿ ನಡುಗಿದ ಅನುಭವ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೆಲ ಸೆಕೆಂಡ್‌ಗಳ ಕಾಲ ಭೂಮಿಯಲ್ಲಿ ಭಯಾನಕ ಶಬ್ದ ಕೇಳಿ ಬಂದಿದೆ. ಮನೆಯ ವಸ್ತುಗಳು ಕೂಡ ಅಲುಗಾಡಿದೆ. ಇದೇ ರೀತಿ ತೆರಾಲು ಸುತ್ತಮುತ್ತ ಗ್ರಾಮದ ಜನರೂ ಅನುಭವ ಹಂಚಿಕೊಂಡಿದ್ದಾರೆ. ನಾಲ್ಕೇರಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕುರ್ಚಿ ಗ್ರಾಮದಲ್ಲಿ ರಾತ್ರಿ 9.45 ಸುಮಾರಿಗೆ ನಡುಗಿದ ಅನುಭವದಿಂದ ಹೆದರಿ ಕಾಫಿ ಬೆಳೆಗಾರ ಅಜ್ಜಮಾಡ ಕುಶಾಲಪ್ಪ ಹಾಗೂ ಅವರ ಕುಟುಂಬ ಮನೆಯಿಂದ ಹೊರ ಬಂದು, ನಂತರ ಮನೆ ಸೇರಿಕೊಂಡಿತು.

ಒಂದೆರಡು ನಿಮಿಷಗಳ ಕಾಲ ಭೂಮಿಯಲ್ಲಿ ಶಬ್ದ ಬಂದಿದೆ. ಮನೆಯ ವಸ್ತುಗಳು ಕೂಡ ಅಲುಗಾಡಿದೆ. ಇದರಿಂದ ಏನು ಎಂದು ತಿಳಿಯದೆ ಗ್ರಾಮದ ಅಜ್ಜಮಾಡ ಕುಶಾಲಪ್ಪ ಹಾಗೂ ಮನೆಯಲ್ಲಿದ್ದವರು ಮನೆಯಿಂದ ಹೊರ ಬಂದಿದ್ದೆವು. ನಂತರ ಮನೆಗೆ ಸೇರಿಕೊಂಡೆವು ಎಂದು ಕುಶಾಲಪ್ಪ ಮಾಹಿತಿ ನೀಡಿದ್ದಾರೆ.

ಬಲ್ಯಮುಂಡೂರು ತಾವರೆಕೆರೆ ರಸ್ತೆಯ ವ್ಯಾಪ್ತಿಯಲ್ಲಿ ಮಿಂಚಿಗೆ ಭೂಮಿಯ ಕುರುಚಲು ಕಾಡು 50 ಮೀಟರ್ ಅಗಲದಷ್ಟು ಬೆಂದು ಹೋಗಿದೆ. ಕಾಂಕ್ರೀಟ್‌ ರಸ್ತೆ, ವಿದ್ಯುತ್ ಕಂಬದಲ್ಲಿನ ಕಾಂಕ್ರೀಟ್‌ ಕಿತ್ತು ಬಂದಿದೆ. ಬಲ್ಯಮುಂಡೂರು ಗ್ರಾಮ ಪಂಚಾಯ್ತಿ ನೀರೆತ್ತುವ ಪಂಪ್‌ಸೆಟ್ ಸುಟ್ಟು ಹೋಗಿದೆ. ಗ್ರಾಮದ ಬಹುತೇಕ ಮನೆಗಳ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT