ಗುರುವಾರ , ಸೆಪ್ಟೆಂಬರ್ 19, 2019
29 °C
ಪ್ರವಾಸಿ ತಾಣಗಳ ಅಭಿವೃದ್ಧಿಗೆ ‘ದತ್ತು ಯೋಜನೆ’; ಬಂಡವಾಳ ಹೂಡಿಕೆಗೂ ಅವಕಾಶ

‘ಮಡಿಕೇರಿ ಸ್ಕ್ವೇರ್‌’: ತನಿಖೆಗೆ ಸೂಚನೆ

Published:
Updated:
Prajavani

ಮಡಿಕೇರಿ: ಇಲ್ಲಿನ ಹಳೇ ಖಾಸಗಿ ಬಸ್‌ ನಿಲ್ದಾಣದಲ್ಲಿ ‘ಮಡಿಕೇರಿ ಸ್ಕ್ವೇರ್‌’ ಹೆಸರಿನಲ್ಲಿ ಕಾಮಗಾರಿ ಆರಂಭವಾಗಿ ಅರ್ಧಕ್ಕೆ ಸ್ಥಗಿತವಾಗಿದ್ದು ಅವ್ಯವಹಾರದ ಶಂಕೆ ವ್ಯಕ್ತವಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ನಡೆದ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದು, ಸಚಿವರು ಅವ್ಯವಹಾರ ತನಿಖೆಗೆ ಸೂಚಿಸಿದರು.

ಜಿ.ಚಿದ್ವಿಲಾಸ್ ವಿಷಯ ಪ್ರಸ್ತಾಪಿಸಿ, ತಡೆಗೋಡೆ ಮೇಲೆದ್ದಿಲ್ಲ. ಆದರೂ ಬಿಡುಗಡೆಯಾದ ₹ 1 ಕೋಟಿ ಖರ್ಚಾಗಿದೆ. ಬಿದ್ದ ಮಣ್ಣು ತೆರವಿಗೂ ನಗರಸಭೆಯಲ್ಲಿ ಹಣವಿಲ್ಲ ಎಂದು ಆರೋಪಿಸಿದರು.

₹ 1.70 ಕೋಟಿಗೆ ಏಜೆನ್ಸಿಯೊಂದು ಪ್ರವಾಸಿ ತಾಣ ರೂಪಿಸುವುದಾಗಿ ಪ್ರಸ್ತಾವ ಸಲ್ಲಿಸಿದ್ದರೂ, ₹ 3.50 ಕೋಟಿಗೆ ಬೇರೆಯವರಿಗೆ ಗುತ್ತಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಅದಕ್ಕೆ ಗರಂಗೊಂಡ ಸಚಿವರು, ಜಿಲ್ಲಾಧಿಕಾರಿ ಮಟ್ಟದಲ್ಲಿ ತನಿಖೆ ಆಗಲಿ ಎಂದು ಸೂಚಿಸಿದರು.

ಗ್ರಾಮಗಳ ‘ಇತಿಹಾಸ ದಾಖಲೀಕರಣ’: ಗ್ರಾಮಗಳ ಇತಿಹಾಸವನ್ನು ದಾಖಲು ಮಾಡುವ ಕೆಲಸ ಆಗಬೇಕು. ಈ ಕಾರ್ಯಕ್ಕೆ ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳಿ. ವಿದ್ಯಾರ್ಥಿಗಳಿಗೂ ನೆರವಾಗಲಿದೆ ಎಂದು ಸಚಿವರು ಸಲಹೆ ನೀಡಿದರು.

ದತ್ತು ಯೋಜನೆ: ಜಿಲ್ಲೆಯ ಪ್ರವಾಸಿ ತಾಣ ಅಭಿವೃದ್ಧಿ ಹಾಗೂ ನಿರ್ವಹಣೆಗೆ ದತ್ತು ಯೋಜನೆ ಜಾರಿಗೆ ತರಲಾಗುವುದು. ಸರ್ಕಾರವು ರೂಪುರೇಷೆ ಸಿದ್ಧ ಪಡಿಸಲಿದೆ. ಅದಕ್ಕೆ ತಕ್ಕಂತೆ ಅವರು ಪ್ರವಾಸಿ ತಾಣ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡಬೇಕು ಎಂದು ರವಿ ಹೇಳಿದರು.

ಪುರಾತತ್ವ ಇಲಾಖೆಯ ಪ್ರೇಕ್ಷಣೀಯ ಸ್ಥಳಗಳಿದ್ದರೆ ಅವುಗಳ ನಿರ್ವಹಣೆಯನ್ನೂ ಸಂಘ– ಸಂಸ್ಥೆಗಳಿಗೆ ನೀಡಬಹುದು. ಮಹಿಳಾ ಸಂಘಗಳನ್ನು ಬಳಕೆ ಮಾಡಿಕೊಳ್ಳಬೇಕು. ಕೂಡಲೇ ಈ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಬೇಕು ಎಂದು ಪ್ರವಾಸೋದ್ಯಮ ಅಧಿಕಾರಿ ರಾಘವೇಂದ್ರ ಅವರಿಗೆ ಸೂಚಿಸಿದರು.

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಮೈಸೂರು ಭಾಗದ ಪ್ರವಾಸಿ ಕ್ಷೇತ್ರಗಳ ಸುಸ್ಥಿರರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಅದರಲ್ಲಿ ಕೊಡಗು ಸಹ ಸೇರಿಕೊಳ್ಳಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಹೂಡಿಕೆಗೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ಪ್ರಭಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹಾಜರಿದ್ದರು. 

 

Post Comments (+)