ಮುಂದಿನ ಲೋಕಸಭೆಯಲ್ಲಿ 10 ಅವಧಿಯ ಸಂಸದರಿಲ್ಲ

ಭಾನುವಾರ, ಏಪ್ರಿಲ್ 21, 2019
32 °C
ಹಲವರಿಗೆ ಟಿಕೆಟ್‌ ಸಿಕ್ಕಿಲ್ಲ, ಕೆಲವರು ಸ್ಪರ್ಧಿಸಿಲ್ಲ, ತೆರೆ ಮರೆಗೆ ಅಡ್ವಾಣಿ, ಜೋಷಿ

ಮುಂದಿನ ಲೋಕಸಭೆಯಲ್ಲಿ 10 ಅವಧಿಯ ಸಂಸದರಿಲ್ಲ

Published:
Updated:
Prajavani

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಿಂದ ಕೆಲವು ಹಿರಿಯರು ಹಿಂದೆ ಸರಿದಿದ್ದಾರೆ. ಇನ್ನೂ ಕೆಲವರಿಗೆ ಪಕ್ಷಗಳು ಟಿಕೆಟ್‌ ನಿರಾಕರಿಸಿವೆ. ಆದ್ದರಿಂದ ಮುಂದಿನ ಲೋಕಸಭೆಯಲ್ಲಿ 10ನೇ ಅವಧಿಗೆ ಸಂಸತ್‌ ಪ್ರವೇಶಿಸುವ ಸದಸ್ಯರು ಯಾರೂ ಇರುವುದಿಲ್ಲ.

ಈಗ ಕೊನೆಗೊಳ್ಳುತ್ತಿರುವ ಲೋಕಸಭೆಯಲ್ಲಿದ್ದ ಅತ್ಯಂತ ಹಿರಿಯ ಸದಸ್ಯರೆಂದರೆ ಕಾಂಗ್ರೆಸ್‌ನ ಕಮಲ್‌ನಾಥ್‌ ಹಾಗೂ ಎಲ್‌ಜೆಪಿಯ ರಾಂವಿಲಾಸ್‌ ಪಾಸ್ವಾನ್‌. ಅವರಿಬ್ಬರೂ ಒಂಬತ್ತು ಬಾರಿ ಆಯ್ಕೆಯಾಗಿದ್ದವರು.  ಇಬ್ಬರೂ ಈ ಬಾರಿ ಚುನಾವಣೆಯಿಂದ ಹಿಂದೆ ಸರಿದು, ಹತ್ತನೇ ಬಾರಿಗೆ ಸದಸ್ಯರಾಗುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ. ಹಿಂದೆ ಲೋಕಸಭೆಯ ಸ್ಪೀಕರ್‌ ಆಗಿದ್ದ ಪಿ.ಎ. ಸಂಗ್ಮಾ ಅವರೂ ಒಂಬತ್ತು ಬಾರಿ ಆಯ್ಕೆಯಾಗಿದ್ದರು.

ಲೋಕಸಭೆಯು ಈ ಬಾರಿ ಅನೇಕ ಹಿರಿಯ ಸದಸ್ಯರಿಗೆ ವಿದಾಯ ಹೇಳಲಿದೆ. ಕೆಳಮನೆಯ ಹಿರಿಯ ಸದಸ್ಯರೆನಿಸಿದ್ದ ಎಲ್.ಕೆ. ಅಡ್ವಾಣಿ (7 ಬಾರಿ ಸದಸ್ಯ) ಮತ್ತು ಮುರಳಿ ಮನೋಹರ ಜೋಶಿ (6 ಬಾರಿ ಸದಸ್ಯ) ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್‌ ನಿರಾಕರಿಸಿದ್ದರಿಂದ ಅವರು ಸಂಸತ್ತಿನ ಕೆಳಮನೆಯನ್ನು ಪ್ರವೇಶಿಸುವುದಿಲ್ಲ. ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ (ಆರು ಬಾರಿ ಸದಸ್ಯೆ) ಅವರೂ ಚುನಾವಣಾ ಕಣದಲ್ಲಿಲ್ಲ. ಉತ್ತರ ಪ್ರದೇಶದ ಸುಲ್ತಾನ್‌ಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ಮೇನಕಾ ಗಾಂಧಿ ಆಯ್ಕೆಯಾದರೆ ಅವರು ಎಂಟನೇ ಬಾರಿ ಸದನವನ್ನು ಪ್ರವೇಶಿಸಲಿದ್ದು, ಸದನದ ಅತಿ ಹಿರಿಯ ಸದಸ್ಯರಲ್ಲಿ ಒಬ್ಬರೆನಿಸಿಕೊಳ್ಳಲಿದ್ದಾರೆ.

8 ಬಾರಿ ಸದಸ್ಯರಾಗಿರುವ, ಬಿಜೆಪಿಯ ಕರಿಯಮುಂಡಾ ಮತ್ತು ಸುಮಿತ್ರಾ ಮಹಾಜನ್‌, ಬಿಜೆಡಿಯ ಸದಸ್ಯ (ಈಗ ಬಿಜೆಪಿ ಸೇರಿರುವ) ಅರ್ಜುನ್‌ ಚರಣ್‌ ಸೇಠಿ ಹಾಗೂ ಜೆಎಂಎಂನ ಶಿಬು ಸೊರೇನ್‌ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಸೇಠಿ ಅವರ ಕ್ಷೇತ್ರದಲ್ಲಿ ಅವರ ಪುತ್ರ ಕಣಕ್ಕಿಳಿಯಲಿದ್ದಾರೆ. ಮುಂಡಾ ಅವರಿಗೆ ಟಿಕೆಟ್‌ ನೀಡಲು ಅವರ ಪಕ್ಷ ನಿರಾಕರಿಸಿದೆ. ಸುಮಿತ್ರಾ ಮಹಾಜನ್‌, ‘ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧಿಸುತ್ತೇನೆ’ ಎನ್ನುವ ಮೂಲಕ ತಮ್ಮ ಭವಿಷ್ಯವನ್ನು ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದಾರೆ.

ಎಂಟನೇ ಬಾರಿ ಆಯ್ಕೆ ಬಯಸಿ ಕಣಕ್ಕೆ ಇಳಿದಿರುವ ಕೇಂದ್ರದ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌, ಕಾಂಗ್ರೆಸ್‌ನ ಕೆ.ಎಚ್‌. ಮುನಿಯಪ್ಪ ಮತ್ತು ಬಿರೇನ್‌ ಸಿಂಗ್‌ ಅವರು ಆಯ್ಕೆಯಾದರೆ ಅತ್ಯಂತ ಹಿರಿಯ ಸದಸ್ಯರ ಪಟ್ಟಿಯಲ್ಲಿ ಮೇನಕಾಗೆ ಸಾಥ್‌ ನೀಡಬಹುದು. ಎಂಟನೇ ಬಾರಿ ಸಂಸದರಾಗುವ ಅವಕಾಶ ಇದ್ದ ಕೇರಳದ ಮುಲ್ಲಪ್ಪಳ್ಳಿ ರಾಮಚಂದ್ರನ್‌ ಈ ಬಾರಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದರೆ, ರಮೇಶ್‌ ಬೈಸ್‌ ಅವರಿಗೆ ಟಿಕೆಟ್‌ ನೀಡಲು ಬಿಜೆಪಿ ನಿರಾಕರಿಸಿದೆ.

ಹಿರಿಯರ ಸಂಸತ್ತು

ಈಗ ಕೊನೆಗೊಳ್ಳಲಿರುವ ಲೋಕಸಭೆಯ ಸದಸ್ಯರ ಸರಾಸರಿ ವಯಸ್ಸು 55.64 ವರ್ಷಗಳಾಗಿವೆ. ಭಾರತದ ಸಂಸತ್ತಿನ ಇತಿಹಾಸದಲ್ಲೇ ಇದು ಗರಿಷ್ಠ ಸರಾಸರಿ ವಯಸ್ಸು. 1952–57ರ ಮೊದಲ ಲೋಕಸಭೆಯಲ್ಲಿ ಸದಸ್ಯರ ಸರಾಸರಿ ವಯಸ್ಸು 46.5 ವರ್ಷವಾಗಿತ್ತು. 1998–99ರ ಲೋಕಸಭೆಯು ಈವರೆಗಿನ ಅತ್ಯಂತ ಯುವ ಸಂಸತ್ತಾಗಿತ್ತು. ಅದರ ಸದಸ್ಯರ ಸರಾಸರಿ ವಯಸ್ಸು 46.4 ವರ್ಷವಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !