ಬುಧವಾರ, ಆಗಸ್ಟ್ 21, 2019
22 °C
ಉತ್ತರ ಕನ್ನಡದ ಹಲವು ತಾಲ್ಲೂಕುಗಳಲ್ಲಿ ಮಂಗಳವಾರ ರಾತ್ರಿಯಿಂದ ಆಗಾಗ ರಭಸದ ಮಳೆ

ರಾಷ್ಟ್ರೀಯ ಹೆದ್ದಾರಿ 66 ಜಲಾವೃತ

Published:
Updated:
Prajavani

ಕಾರವಾರ: ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು, ನಗರದ ಹಲವು ಬಡಾವಣೆಗಳಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. 

ಗುರುವಾರ ಬೆಳಗಿನ ಜಾವ ನಗರದಲ್ಲಿ ಭಾರಿ ಮಳೆಯಾಯಿತು. ಮಂಗಳವಾರ ರಾತ್ರಿಯಿಂದಲೇ ಆಗಾಗ ಬಿರುಸಿನ ಮಳೆಯಾಗುತ್ತಿತ್ತು. ಇದರಿಂದ ನೀರಿನ ಪ್ರಮಾಣ ಹೆಚ್ಚಾಗಿ ಚರಂಡಿಗಳಲ್ಲಿ ಹರಿದು ಹೋಗಲು ಜಾಗ ಸಾಕಾಗಲಿಲ್ಲ. ಇದರ ಪರಿಣಾಮ ಜಿಲ್ಲಾ ಆಸ್ಪತ್ರೆಯ ಸುತ್ತಮುತ್ತ ಕೂಡ ನೀರು ಸಂಗ್ರಹವಾಗಿ, ಆಸ್ಪತ್ರೆಯ ಡಯಾಲಿಸಿಸ್ ಘಟಕದ ಕೋಣೆಯೂ ಜಲಾವೃತವಾಯಿತು. ಯಂತ್ರೋಪಕರಣಗಳನ್ನು ಸುರಕ್ಷಿತವಾಗಿ ಕೋಣೆಯೊಂದಕ್ಕೆ ರವಾನಿಸಲಾಗಿದೆ. 

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಕುಡ್ತರಕರ್, ‘ಬುಧವಾರ ರಾತ್ರಿಯಿಡೀ ಭಾರಿ ಮಳೆಯಾಗಿದೆ. ಇದರಿಂದ ಸುತ್ತಮುತ್ತ ನೀರು ಸರಾಗವಾಗಿ ಹರಿದು ಹೋಗದೇ ಸಮಸ್ಯೆಯಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ನೀರನ್ನು ತೆರವು ಮಾಡುತ್ತಾರೆ. ಸಂಜೆಯ ಒಳಗಾಗಿ ಘಟಕ ಪುನರಾರಂಭವಾಗಲಿದೆ’ ಎಂದು ತಿಳಿಸಿದರು. 

ಕಾರವಾರ ಸಮೀಪದ ಬಿಣಗಾದಲ್ಲಿ ಹಳ್ಳದ ನೀರು ಉಕ್ಕಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ಸುಮಾರು ಒಂದು ಅಡಿಯಷ್ಟು ನೀರು ನಿಂತಿತ್ತು. ರಸ್ತೆಯ ಅಂಚು ಮತ್ತು ಹೊಂಡ ಒಂದೇ ರೀತಿ ಕಂಡು ವಾಹನ ಸವಾರರು ಗೊಂದಲಕ್ಕೊಳಗಾದರು. ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಹೊಂಡದ ಬಳಿಯಿದ್ದ ಮಣ್ಣಿನ ರಾಶಿಯನ್ನು ತೆರವು ಮಾಡಿಸಿದರು. ಬಳಿಕ ಹೆದ್ದಾರಿಯಿಂದ ನೀರು ಇಳಿದು ವಾಹನ ಸಂಚಾರ ಸುಗಮವಾಯಿತು. 

ಕಾರವಾರದ ನ್ಯೂ ಕೆಎಚ್‌ಬಿ ಕಾಲೊನಿಯ ರಸ್ತೆಗಳಲ್ಲಿ ಸುಮಾರು ಎರಡು ಅಡಿಗಳಷ್ಟು ಮಳೆ ನೀರು ನಿಂತಿತ್ತು. ಇಡೀ ಬಡಾವಣೆಯೇ ಕೆರೆಯಂತೆ ಕಂಡುಬಂತು. ಡಾಂಬರು, ಕಾಂಕ್ರೀಟ್ ಕಾಣದ ರಸ್ತೆಗಳಲ್ಲಿ ಹೋಗಲು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಪೋಷಕರು ಗೊಣಗುತ್ತ ಸಾಗಿದರು.

ಇದೇರೀತಿ, ಅಂಕೋಲಾ, ಜೊಯಿಡಾ, ಯಲ್ಲಾಪುರ, ಭಟ್ಕಳ ಭಾಗದಲ್ಲೂ ಬುಧವಾರದಿಂದ ದಿನವಿಡೀ ಆಗಾಗ ಜೋರಾಗಿ ಮಳೆಯಾಗುತ್ತಿದೆ. ಹಳಿಯಾಳದಲ್ಲಿ ಸಾಧಾರಣ ಮಳೆ ಬಂದಿದೆ.

Post Comments (+)