ಶಿರಾಡಿ: ಗುಡ್ಡ ಕುಸಿದು 3 ಗಂಟೆ ಸಂಚಾರ ಸ್ಥಗಿತ

7
ಬೆಂಗಳೂರು– ಮಂಗಳೂರು, ಮಡಿಕೇರಿ– ಮಂಗಳೂರು ಹೆದ್ದಾರಿ ಬಂದ್ l ಹೊಸಮಠ ಸೇತುವೆ ಮುಳುಗಡೆ

ಶಿರಾಡಿ: ಗುಡ್ಡ ಕುಸಿದು 3 ಗಂಟೆ ಸಂಚಾರ ಸ್ಥಗಿತ

Published:
Updated:
Deccan Herald

ಬೆಂಗಳೂರು: ಕರಾವಳಿ, ಮಲೆನಾಡು. ಘಟ್ಟ ‍ಪ್ರದೇಶ ಹಾಗೂ ಅರೆಮಲೆನಾಡಿನಲ್ಲಿ ಸೋಮವಾರವೂ ಮಳೆಯ ಅಬ್ಬರ ಹೆಚ್ಚಾಗಿದ್ದು, ಹಲವೆಡೆ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಮಂಗಳೂರು-ಬೆಂಗಳೂರು ರಸ್ತೆಯಲ್ಲಿ ಶಿರಾಡಿ ಸಮೀಪ ಕೊಡ್ಯಕಲ್ಲು ಎಂಬಲ್ಲಿ ಭಾನುವಾರ ರಾತ್ರಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಿದ್ದು, 3 ಗಂಟೆ ವಾಹನ ಸಂಚಾರ ಸ್ಥಗಿತವಾಗಿತ್ತು. ಸೋಮವಾರವೂ ಶಿರಾಡಿ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮೂರು ಜೆಸಿಬಿ ಬಳಸಿ ಮಣ್ಣು ತೆರವು ಮಾಡಲಾಯಿತು.

ಮಳೆಯಿಂದಾಗಿ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಹೊಸಮಠ ಸೇತುವೆ ಮುಳುಗಡೆಯಾಗಿದ್ದು, 2 ದಿನಗಳಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರ ನದಿಯ ನೆರೆ ನೀರು ರಸ್ತೆಗೆ ನುಗ್ಗಿದ್ದು, ಇಲ್ಲಿಯೂ ರಸ್ತೆ ಸಂಚಾರ ಅಸ್ತವ್ಯವಸ್ತಗೊಂಡಿದೆ.

ಸುಳ್ಯ– ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಎರಡು ಬಾರಿ ಗುಡ್ಡ ಕುಸಿದಿದ್ದರಿಂದ ಸೋಮವಾರ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಡಿಕೇರಿ ಸಮೀಪದ ಮದೆನಾಡಿನಲ್ಲಿ ಭಾನುವಾರ ರಾತ್ರಿ ರಸ್ತೆ ಬದಿಯ ಗುಡ್ಡ ಕುಸಿದಿದೆ. ರಾತ್ರಿ ಸಂಚರಿಸುತ್ತಿದ್ದ ಬೆಂಗಳೂರು, ತಮಿಳುನಾಡು ಮತ್ತು ಮೈಸೂರು ಕಡೆಯಿಂದ
ಬರುವ ಬಸ್‌ಗಳು ಕುಶಾಲನಗರದಿಂದ ಬಿಸಿಲೆ, ಶಿರಾಡಿ ಘಾಟ್ ಮೂಲಕ ಸಂಚರಿಸಿದವು.

ಶವ ಪತ್ತೆ: ಬೆಳ್ತಂಗಡಿ ತಾಲ್ಲೂಕಿನ ನಾರಾವಿಯಲ್ಲಿ ಕಾಲುಸಂಕದಿಂದ ಬಿದ್ದು ನೀರು ಪಾಲಾಗಿದ್ದ ಬೊಮ್ಮಯ್ಯ ದಾಸ್‌ (65) ಎಂಬವರ ಶವ ಸೋಮವಾರ ಮರೋಡಿಯಲ್ಲಿ ಪತ್ತೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಮಾರ್ಗದಲ್ಲಿ ಗುಡ್ಡದ ಮಣ್ಣು ರಸ್ತೆಗೆ ಕುಸಿದಿದ್ದು, ಸೋಮವಾರ ಸಂಚಾರ ಬಂದ್ ಆಗಿತ್ತು.

ಕೊಡಗು ಹಾಗೂ ಹಾಸನ ಭಾಗದಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಸಕಲೇಶಪುರದಲ್ಲಿ ಭಾನುವಾರ ಸಂಜೆಯಿಂದ ಸುರಿದ ಭಾರಿ ಮಳೆ ಹಾಗೂ ಬೀಸುಗಾಳಿಗೆ ಬೆಂಗಳೂರು– ಮಂಗಳೂರು ಹೆದ್ದಾರಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತ
ಗೊಂಡಿತ್ತು.

ಕೊಡಗಿನಲ್ಲಿ ಸುರಿದ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 275ರ ಮದೆನಾಡು ಗ್ರಾಮದ ಬಳಿ ಗುಡ್ಡ ಕುಸಿದು ಮಡಿಕೇರಿ– ಮಂಗಳೂರು ಹೆದ್ದಾರಿ ಬಂದ್ ಆಗಿತ್ತು. 

ಅಂತರರಾಜ್ಯ ಸಂಚಾರವೂ ಬಂದ್: ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು– ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲೂ ಭೂಕುಸಿತವಾಗಿದೆ. ಕೊಡಗಿನ ಗಡಿಗ್ರಾಮ ಮಾಕುಟ್ಟದ ಬಳಿ ಬೆಟ್ಟದ ಮೇಲಿಂದ ಬೃಹತ್‌ ಬಂಡೆಯೊಂದು ರಸ್ತೆಗೆ ಉರುಳಿದ್ದು, ವಾಹನ ಸಂಚಾರ ಬಂದ್ ಆಗಿದೆ. ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರವೂ ಧಾರಾಕಾರ ಮಳೆ ಮುಂದುವರಿದಿದೆ. ಹೊಸನಗರ ಹಾಗೂ ತೀರ್ಥಹಳ್ಳಿಯಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಸಾರ್ವಜನಿಕರು ಮನೆಯಿಂದ ಹೊರಬರಲು ಸಾಧ್ಯವಾಗದೆ ಜನಜೀವನ ಅಸ್ತವ್ಯಸ್ತವಾಗಿದೆ.  

ತುಂಗಭದ್ರಾ ನದಿ ಅಪಾಯದಮಟ್ಟ ತಲುಪಿದೆ. ತುಂಗಾನದಿಯ ಕೋರ್ಪಲಯ್ಯನ ಛತ್ರದ ಬಳಿಯಿರುವ ಮಂಟಪ ಮುಳುಗಡೆಯಾಗಿದೆ. 

4 ಸೇತುವೆ ಜಲಾವೃತ: ದಕ್ಷಿಣ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ, ಕೃಷ್ಣಾ ನದಿಗೆ ಹರಿದುಬರುತ್ತಿರುವ ನೀರಿನ ಹರಿವು ಹೆಚ್ಚಳವಾಗಿದೆ. ಸುಮಾರು 45,000 ಕ್ಯುಸೆಕ್‌ ಹರಿದು ಬರುತ್ತಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರ ಗ್ರಾಮಗಳ ಮಧ್ಯೆದ ಸೇತುವೆ ಜಲಾವೃತ
ಗೊಂಡಿದೆ. ಮಲಿಕವಾಡ– ದತ್ತವಾಡ ಗ್ರಾಮಗಳ ಮಧ್ಯೆಇರುವ ಸೇತುವೆಯೂ ದೂಧಗಂಗಾ ನದಿ ನೀರಿನಲ್ಲಿ ಮುಳುಗಡೆಯಾಗಿದೆ.

ಹಿಡಕಲ್ ಜಲಾಶಯದಿಂದ ಅಧಿಕ ನೀರು ಬಿಟ್ಟಿರುವುದರಿಂದ ಘಟಪ್ರಭಾ ನದಿಯ ನೀರಿನ ಹರಿವು ಸೋಮವಾರ ಬೆಳಿಗ್ಗೆಯಿಂದ ಹೆಚ್ಚಾಗಿದೆ. ಇದರಿಂದಾಗಿ ಮೂಡಲಗಿ ಸಮೀಪದ ಸುಣಧೋಳಿ ಸೇತುವೆ ಹಾಗೂ ಅವರಾದಿ– ನಂದಗಾಂವ ಸಂಪರ್ಕಿಸುವ ಸೇತುವೆಯು ಜಲಾವೃತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನವಿಡೀ ಬಿರುಸಿನ ಮಳೆಯಾಗಿದ್ದು, ರಭಸದ ಗಾಳಿಯೂ ಬೀಸಿ ಆತಂಕ ಮೂಡಿಸಿತು. ಗೋಕರ್ಣದ ಕೋಟಿ ತೀರ್ಥದಲ್ಲಿರುವ ಕ್ರಿಯಾಮಂಟಪದ ಮೇಲೆ ಅಳವಡಿಸಲಾಗಿದ್ದ ತಗಡಿನ ಚಾವಣಿಯು, ರಭಸದ ಗಾಳಿಗೆ ಕಳಚಿ ರಸ್ತೆ ಮೇಲೆ ಬಿದ್ದಿತ್ತು. ಒಂದು ಕಾರು ಮತ್ತು ಆಟೊರಿಕ್ಷಾ ಜಖಂಗೊಂಡಿದೆ.

ಸಮುದ್ರದಲ್ಲಿ ದೊಡ್ಡ ಗಾತ್ರದ ಅಲೆಗಳು ಏಳುತ್ತಿರುವ ಕಾರಣ ಮೀನುಗಾರರು ಮರಳಿ ದಡಕ್ಕೆ ಬಂದಿದ್ದು, ಕಾರವಾರದ ಬೈತಖೋಲ್ ಬಂದರಿನಲ್ಲಿ ದೋಣಿಗಳನ್ನು ಲಂಗರು ಹಾಕಿದ್ದಾರೆ. ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಶಾಲಾ– ಕಾಲೇಜುಗಳಿಗೆ ರಜೆ

ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮಂಗಳವಾರ (ಆ. 14) ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳಲ್ಲಿ ಶಾಲಾ– ಕಾಲೇಜುಗಳಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಸಿದ್ದಾಪುರ, ಅಂಕೋಲಾ, ಭಟ್ಕಳ. ಹೊನ್ನಾವರ ಮತ್ತು ಕಾರವಾರ ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಿದೆ.

ಮಾರ್ಗ ಬದಲಿಸಿದ ಕುಮಾರಸ್ವಾಮಿ

ಸಕಲೇಶಪುರ- ಶಿರಾಡಿ ಘಾಟ್ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಬೇಕಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಭೂಕುಸಿತ ಹಿನ್ನೆಲೆಯಲ್ಲಿ ಮಾರ್ಗ ಬದಲಿಸಿ ಮೂಡಿಗೆರೆ– ಚಾರ್ಮಾಡಿ ಘಾಟ್ ಮಾರ್ಗವಾಗಿ ತೆರಳಿದರು.

ಮಳೆ ಅನಾಹುತಕ್ಕೆ 774 ಮಂದಿ ಬಲಿ
 

ನವದೆಹಲಿ (ಪಿಟಿಐ): ಮಳೆ ಅನಾಹುತದಿಂದಾಗಿ ದೇಶದ ಏಳು ರಾಜ್ಯಗಳಲ್ಲಿ ಒಟ್ಟು 774 ಜನ ಮೃತಪಟ್ಟಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಸಚಿವಾಲಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರ (ಎನ್‌ಡಿಆರ್‌ಎಫ್‌) ಈ ಕುರಿತ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್‌, ಅಸ್ಸಾಂ ಹಾಗೂ ನಾಗಾಲ್ಯಾಂಡ್‌ ಈ ರಾಜ್ಯಗಳಲ್ಲಿ ಸೇರಿವೆ.

ಹಲವು ರಾಜ್ಯಗಳಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಕೇರಳದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯ ಕಾರಣ ಶಿಮ್ಲಾ, ಕಾಂಗ್ಡಾ ಮತ್ತು ಸೋಲನ್‌ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಭೂಕುಸಿತದ ಕಾರಣ ಕೆಲ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಉತ್ತರ ಪ್ರದೇಶದ ಹಲವೆಡೆ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !