ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ, ಧಾರ್ಮಿಕ ಸಂಚು ಅರ್ಥೈಸಿಕೊಳ್ಳಿ

ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲಹೆ
Last Updated 30 ಡಿಸೆಂಬರ್ 2018, 20:10 IST
ಅಕ್ಷರ ಗಾತ್ರ

ಮೈಸೂರು: ‘ಶೈವ ಕ್ಷೇತ್ರಗಳಿಗೆ ಹೋದರೆ ಮಾತ್ರ ಅಧಿಕಾರ ಕಳೆದುಕೊಳ್ಳುತ್ತಾರೆ. ವೈಷ್ಣವ ಕ್ಷೇತ್ರಗಳಿಗೆ ಹೋದರೆ ಅಧಿಕಾರ ಕಳೆದುಕೊಳ್ಳುವುದಿಲ್ಲ ಎಂಬುದರ ಹಿಂದಿರುವ ಧಾರ್ಮಿಕ, ಸಾಮಾಜಿಕ ಸಂಚನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದು ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಇಲ್ಲಿ ಹೇಳಿದರು.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಚಾಮರಾಜನಗರದ ಚಾಮರಾಜೇಶ್ವರ, ಮಲೆ ಮಹದೇಶ್ವರ ಶೈವ ದೇವರು. ಅದೇ ರೀತಿ ಹಂಪಿ, ಹಳೇಬೀಡಿಗೆ ಹೋದರೂ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುತ್ತಾರೆ. ಆದರೆ, ಬೇರೆ ಊರಿಗೆ ಹೋದರೆ ಏಕೆ ಕಳೆದುಕೊಳ್ಳುವುದಿಲ್ಲ? ಶೈವ ಕ್ಷೇತ್ರಗಳು ಅಭಿವೃದ್ಧಿ ಆಗಬಾರದು ಎಂದು ವೈದಿಕ ವೈಷ್ಣವರು ನೋಡಿಕೊಂಡಿದ್ದಾರೆ. ಇವುಗಳ ಹಿಂದೆ ಸಾಂಸ್ಕೃತಿಕ ಸಂಚು ಇದೆ’ ಎಂದು ತಿಳಿಸಿದರು.

‘ಗಾಯಕರು ಕೆಲ ಹಾಡು ಹಾಡುವಾಗ ಅವುಗಳ ಬಗ್ಗೆ ಮರುಚಿಂತನೆ ಮಾಡಬೇಕು. ಅವುಗಳಲ್ಲಿ ಬಳಕೆಯಾಗಿರುವ ಶಬ್ದ, ವಾಕ್ಯಗಳನ್ನು ಪರಿಷ್ಕರಿಸಲು ಸಾಧ್ಯವೇ ಎಂದು ಆಲೋಚನೆ ಮಾಡಿದರೆ ಮುಂದಿನ ದಿನಗಳಲ್ಲಿ ಹೆಚ್ಚು ಉಪಯುಕ್ತ’ ಎಂದು ಕಾರ್ಯಕ್ರಮದಲ್ಲಿ ಗಾಯಕರು ಹಾಡಿದ ಹಾಡುಗಳ ಕುರಿತು ಮಾತನಾಡಿದರು.

‘ಮಂಟೇಸ್ವಾಮಿ ಗೀತೆಯ ಭಾಗಗಳು ಜಮೀನ್ದಾರಿ ಕಾಲಘಟ್ಟದಲ್ಲಿ ರಚನೆಯಾದವು. ಅವು ಏನನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಗಂಡ ಇದ್ದಾಗ ಹೆಣ್ಣು ಮುತ್ತೈದೆ. ಗಂಡ ಸತ್ತರೆ ಆಕೆ ತಿರಸ್ಕಾರಕ್ಕೆ ಒಳಗಾಗುತ್ತಾಳೆ ಎನ್ನುವ ಜಮೀನ್ದಾರಿ ಯುಗದ ಮೌಲ್ಯ ಅಲ್ಲಿದೆ. ಗಂಡನಿಲ್ಲದ ಹೆಣ್ಣಿಗೆ ಸಾರ್ಥಕತೆಯೇ ಇಲ್ಲ. ಅಂಥ ಬದುಕು ಗೌರವಾರ್ಹ ಬದುಕಲ್ಲ ಎಂಬ ನೆಲೆಯಲ್ಲಿ ಹುಟ್ಟಿದ ಚಿಂತನೆಯನ್ನು ಈ ಕಾಲದಲ್ಲಿ ಒಪ್ಪಿಕೊಳ್ಳಬೇಕೇ ಎಂಬುದು ಪ್ರಮುಖವಾದ ಅಂಶ. ಇಂಥ ದೃಷ್ಟಿಕೋನಗಳಲ್ಲಿ ಪರಿಷ್ಕರಣೆ ಆಗಬೇಕಿದೆ’ ಎಂದು ವಿವರಿಸಿದರು.

‘ಸನ್ಯಾಸ, ಸ್ವಾಮಿತ್ವ ಎನ್ನುವುದು ಮೂಲತಃ ಶಿಕ್ಷೆಯಾಗಿ ಬಂದಿದೆ. ಆ ಬಳಿಕ ಅದನ್ನು ಸಾಮಾಜಿಕ ರಕ್ಷೆಯನ್ನಾಗಿ ಮಾಡಿಕೊಂಡರು. ಇಡೀ ಇತಿಹಾಸವನ್ನೇ ತಿರುಚಿಬಿಟ್ಟಿದ್ದಾರೆ. ತ್ಯಾಗಿ, ವಿರಾಗಿ ಎಂಬುದು ಬುದ್ಧನಿಗೆ ಸಹಜವಾಗಿ ಬಂದದ್ದಲ್ಲ. ಶಿಕ್ಷೆಯ ಮೂಲಕವೇ ಬಂದಿದೆ ಎಂಬುದನ್ನು ಅಂಬೇಡ್ಕರ್‌ ತೋರಿಸಿಕೊಟ್ಟಿದ್ದಾರೆ’ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT