ಸೋಮವಾರ, ಅಕ್ಟೋಬರ್ 21, 2019
21 °C
ಅನರ್ಹರಿಗೆ ಮಣೆ ಹಾಕಲು ಪರಾಜಿತರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ: ಕಾಂಗ್ರೆಸ್‌ನತ್ತ ಕಾಗೆ, ಶರತ್‌ ಚಿತ್ತ?

ನಿಗಮ ಮಂಡಳಿ ನೇಮಕ: ಬಿಜೆಪಿಗೆ ‘ನಿಷ್ಠ’ರ ಸಡ್ಡು

Published:
Updated:
prajavani

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾಗಿ ಅನರ್ಹಗೊಂಡ ಶಾಸಕರಿಗೆ ಉಪಚುನಾವಣೆಯ ದಾರಿ ಸುಗಮಗೊಳಿಸುವ ಸಲುವಾಗಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ನಿಗಮ–ಮಂಡಳಿಗಳ ಅಧ್ಯಕ್ಷ ಸ್ಥಾನದ ಆಮಿಷ ತೋರಿದ್ದ ನಾಯಕರ ವಿರುದ್ಧ ಪಕ್ಷ ‘ನಿಷ್ಠ’ ಪರಾಜಿತ ಅಭ್ಯರ್ಥಿಗಳು ಸಡ್ಡು ಹೊಡೆದಿದ್ದಾರೆ.

ಅನರ್ಹಗೊಂಡಿರುವ 15 ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿಯಾಗಿದ್ದು, ಪಕ್ಷಕ್ಕೆ ಬೆಂಬಲ ಕೊಟ್ಟವರಿಗೆ ಟಿಕೆಟ್‌ ನೀಡುವ ವಾಗ್ದಾನವನ್ನು ಬಿಜೆಪಿ ನೀಡಿತ್ತು. ಆದರೆ, 2018ರಲ್ಲಿ ನಡೆದ ಚುನಾವಣೆಯಲ್ಲಿ ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಅಭ್ಯರ್ಥಿಗಳು ತಮಗೆ ಟಿಕೆಟ್ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.

ಗೋಕಾಕ, ಕಾಗವಾಡ, ಹಿರೇಕೆರೂರ, ಮಸ್ಕಿ, ಯಲ್ಲಾಪುರ, ವಿಜಯನಗರ, ಕೆ.ಆರ್‌.ಪುರ ಮತ್ತು ಹೊಸಕೋಟೆ ಕ್ಷೇತ್ರಗಳಲ್ಲಿ ಅನರ್ಹ ಶಾಸಕರ ಸ್ಪರ್ಧೆಗೆ ಎದುರಾಗಿದ್ದ ವಿಘ್ನ ನಿವಾರಿಸಲು ಮುಂದಾಗಿದ್ದ ಯಡಿಯೂರಪ್ಪ, ಎಂಟು ಮಂದಿಗೆ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ನೀಡಿ ಓಲೈಸುವ ಯತ್ನ ನಡೆಸಿದರು.

ಈ ಪೈಕಿ ಹೊಸಕೋಟೆಯ ಶರತ್‌ ಬಚ್ಚೇಗೌಡ, ಮಸ್ಕಿಯ ಬಸನಗೌಡ ತುರವಿಹಾಳ, ಕಾಗವಾಡದ ಭರಮಗೌಡ (ರಾಜು) ಕಾಗೆ, ಗೋಕಾಕದ ಅಶೋಕ ಪೂಜಾರಿ ಅವರು ತಮಗೆ ನೀಡಿರುವ ‘ಕೊಡುಗೆ’ಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಉಳಿದವರು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವರ್ತಿಸಿದ್ದಾರೆ.

ಇದರಿಂದಾಗಿ, ಉಪ ಚುನಾವಣೆಯಲ್ಲಿ ಗೆದ್ದು ಸರ್ಕಾರ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇರುವ ಬಿಜೆಪಿ ನಾಯಕರಿಗೆ ಹೊಸ ತಲೆನೋವು ಎದುರಾದಂತಾಗಿದೆ.

ಚಾಕೊಲೇಟ್‌ ನೀಡಲು ನಾವೇನು ಮಕ್ಕಳಾ?: ‘ನಾನು ನಾಲ್ಕು ಸಲ ಶಾಸಕನಾದವನು. ‌ನನಗೆ ಮಕ್ಕಳ ರೀತಿ ಚಾಕೊಲೇಟ್‌ (ಅಧ್ಯಕ್ಷ ಸ್ಥಾನ) ನೀಡಿದರೆ ತೆಗೆದುಕೊಳ್ಳುತ್ತೇನೆಯೇ? ಯಾವುದೇ ಕಾರಣಕ್ಕೂ ಸ್ಥಾನವನ್ನು ಸ್ವೀಕರಿಸುವುದಿಲ್ಲ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೇಳಿದ್ದೇನೆ. ಟಿಕೆಟ್‌ ನೀಡಿದರೆ ಸರಿ, ಇಲ್ಲದಿದ್ದರೆ ಕಾಂಗ್ರೆಸ್‌ ಬಾಗಿಲು ತಟ್ಟುತ್ತೇನೆ. ಆದರೆ, ಅನರ್ಹ ಶಾಸಕ ಶ್ರೀಮಂತ ಪಾಟೀಲ ಪರ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಭರಮಗೌಡ(ರಾಜು) ಕಾಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ವಿ.ಎ ಪಾಟೀಲ ಸಂತಸ: ‘ಅಧಿಕಾರದ ಬೆನ್ನು ಹತ್ತಿ ಹೋಗುವುದಕ್ಕಿಂತ, ಅದಾಗಿಯೇ ಬಂದಾಗ ಅನುಭವಿಸುವುದು ಹೆಚ್ಚಿನ ಸಂತಸ ಕೊಡುತ್ತದೆ. ಪಕ್ಷಕ್ಕೆ ಪ್ರಾಮಾಣಿಕವಾಗಿ ಇದ್ದಾಗ ಪಕ್ಷ ಯಾವತ್ತೂ ಕೈಬಿಡುವುದಿಲ್ಲ ಎನ್ನುವುದು ಸಾಬೀತಾಗಿದೆ’ ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹುದ್ದೆಗೆ ನೇಮಕಗೊಂಡಿರುವ ವಿ.ಎಸ್.ಪಾಟೀಲ ಪ್ರತಿಕ್ರಿಯಿಸಿದ್ದಾರೆ.

‘ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮದ ಅಧ್ಯಕ್ಷನನ್ನಾಗಿ ನೇಮಕ ಮಾಡಿರುವುದಕ್ಕೆ ವರಿಷ್ಠರಿಗೆ ಧನ್ಯವಾದ ಸಲ್ಲಿಸುತ್ತೇನೆ. ಕ್ಷೇತ್ರದ ಕಾರ್ಯಕರ್ತರು, ಮುಖಂಡರು, ಚುನಾಯಿತ ಪ್ರತಿನಿಧಿಗಳ ಚರ್ಚೆ ನಡೆಸಿ, ಅವರೆಲ್ಲರ ಅಭಿಪ್ರಾಯವನ್ನು ವರಿಷ್ಠರ ಗಮನಕ್ಕೆ ತರುತ್ತೇನೆ’ ಎಂದು ಯು.ಬಿ.ಬಣಕಾರ ತಿಳಿಸಿದ್ದಾರೆ.

***

ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಒಂದು ಅವಕಾಶ ನೀಡಲು ನಿಗಮ– ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ, ಪಕ್ಷ ಬಲಪಡಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ
–ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹುದ್ದೆ ಒಪ್ಪಿಕೊಳ್ಳುವುದಿಲ್ಲ. ಹೊಸಕೋಟೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ನೀಡದಿದ್ದರೆ ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತೇನೆ
–ಶರತ್‌ ಬಚ್ಚೇಗೌಡ, ಪರಾಜಿತ ಅಭ್ಯರ್ಥಿ

ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಬಗ್ಗೆ ಈಗ ಏನನ್ನೂ ಹೇಳಲಾರೆ. ಗುರುವಾರ ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವೆ
–ಎಚ್‌.ಆರ್‌.ಗವಿಯಪ್ಪ, ಪರಾಜಿತ ಅಭ್ಯರ್ಥಿ

Post Comments (+)