ಎಸ್ಸೆಸ್ಸೆಲ್ಸಿ: ಫಲ ನೀಡಿದ ‘ರಾತ್ರಿ ಶಿಕ್ಷಣ’: ಮೂಡಿದ ಸಂತಸ

ಸೋಮವಾರ, ಮೇ 27, 2019
24 °C
ಪರೀಕ್ಷೆಯಲ್ಲಿ ಶೇ 39ರಷ್ಟು ಫಲಿತಾಂಶ ಹೆಚ್ಚಿಸಿಕೊಂಡ ಆದಿಜಾಂಭವ ಪ್ರೌಢಶಾಲೆ

ಎಸ್ಸೆಸ್ಸೆಲ್ಸಿ: ಫಲ ನೀಡಿದ ‘ರಾತ್ರಿ ಶಿಕ್ಷಣ’: ಮೂಡಿದ ಸಂತಸ

Published:
Updated:
Prajavani

ಮುಂಡಗೋಡ: 52 ದಿನ ಶಿಕ್ಷಕರ ಹಾಗೂ ಬೋಧಕೇತರ ಸಿಬ್ಬಂದಿಯ ಶ್ರಮ ಫಲ ನೀಡಿದೆ. ಶೇಕಡಾ ನೂರಕ್ಕೆ ನೂರು ಸಾಧಿಸದಿದ್ದರೂ ಕಳೆದ ಬಾರಿಗಿಂತ ಶೇ 39ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ‘ರಾತ್ರಿ ಶಿಕ್ಷಣ’ ನೀಡಿ ಶಾಲೆಯ ಫಲಿತಾಂಶ ಹೆಚ್ಚಿಸಬೇಕೆನ್ನುವ ಗುರಿಯತ್ತ ಸಾಗಿದ್ದಕ್ಕೆ ಶಿಕ್ಷಕ, ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಮನೆ ಮಾಡಿದೆ.

ಇಲ್ಲಿನ ಆದಿಜಾಂಭವ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ 86.20ರಷ್ಟು ಆಗಿದೆ. ಕಳೆದ ವರ್ಷ ಶೇ 48 ಆಗಿತ್ತು. ಇದರಿಂದ ಆತಂಕಗೊಂಡಿದ್ದ ಶಿಕ್ಷಕರು ಶಾಲೆಯ ಫಲಿತಾಂಶ ಹೆಚ್ಚಿಸಬೇಕೆಂದು ನಿರ್ಧರಿಸಿದ್ದರು. ಈ ಮೂಲಕ ಮಕ್ಕಳಿಗೆ ವಸತಿ, ಊಟ ಸಹಿತ ರಾತ್ರಿ ಶಿಕ್ಷಣ ನೀಡಿದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಕ್ಕೂ ಒಂದು ತಿಂಗಳ ಮೊದಲಿನಿಂದ ಪಾಳಿ ಪ್ರಕಾರ ವಿಷಯವಾರು ಶಿಕ್ಷಕರು ಪ್ರತಿ ದಿನ ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿದ್ದರು. ಅವರೂ ಶಾಲೆಯಲ್ಲಿಯೇ ಮಲಗುತ್ತಿದ್ದರು. ಶಿಕ್ಷಕರಿಗೆ ತಲಾ ಒಬ್ಬ ಬೋಧಕೇತರ ಸಿಬ್ಬಂದಿ ಸಹ ಸಾಥ್ ನೀಡುತ್ತಿದ್ದರು. ಶಿಕ್ಷಕ ಹಾಗೂ ಸಿಬ್ಬಂದಿಯ ಪರಿಶ್ರಮ ಮಕ್ಕಳ ಸಾಧನೆಯಲ್ಲಿ ವ್ಯಕ್ತವಾಗಿದೆ.

‘ನಾಲ್ಕು ವರ್ಷಗಳ ಹಿಂದೆ ನಮ್ಮ ಶಾಲೆ ಶೇ 100 ಫಲಿತಾಂಶ ದಾಖಲಿಸಿತ್ತು. ಕೆಲವು ವರ್ಷಗಳವರೆಗೆ ಶೇ 60ರಿಂದ ಶೇ 78ರವರೆಗೆ ಫಲಿತಾಂಶ ಬರುತ್ತಿತ್ತು. ಆದರೆ, ಕಳೆದ ವರ್ಷ ಶೇ 50ಕ್ಕಿಂತ ಕಡಿಮೆಯಾಗಿದ್ದರಿಂದ ಆಡಳಿತ ಮಂಡಳಿ, ಇಲಾಖೆ ಎಲ್ಲರೂ ಅಸಮಾಧಾನಗೊಂಡಿದ್ದರು. ಈ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳವಾಗದಿದ್ದರೆ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದುಕೊಂಡು ಯೋಜನೆ ರೂಪಿಸಿದೆವು’ ಎನ್ನುತ್ತಾರೆ ಮುಖ್ಯಶಿಕ್ಷಕ ಎಸ್‌.ಡಿ.ಮುಡೆಣ್ಣನವರ್.

31 ವಿದ್ಯಾರ್ಥಿಗಳಿಗೆ ವಿಶೇಷ ಬೋಧನೆ: ‘ಊಟ, ವಸತಿ ಸಹಿತ ರಾತ್ರಿ ಶಿಕ್ಷಣ ನೀಡಲು ಎಲ್ಲ ಶಿಕ್ಷಕರು ಒಪ್ಪಿಗೆ ಸೂಚಿಸಿದರು. ಮುಖ್ಯವಾಗಿ ಮಕ್ಕಳ ಪಾಲಕರು ಶಿಕ್ಷಕರ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಶೇಕಡಾ 100 ಫಲಿತಾಂಶದ ಗುರಿ ಹೊಂದಲಾಗಿತ್ತು. ಆದರೂ ಈಗ ಬಂದಿರುವ ಫಲಿತಾಂಶದಿಂದ ಸಂತಸವಾಗಿದೆ’ ಎಂದು ಎಸ್‌.ಡಿ.ಮುಡೆಣ್ಣನವರ್ ತಿಳಿಸಿದರು.

‘ಒಟ್ಟು 31 ವಿದ್ಯಾರ್ಥಿಗಳಿಗೆ ರಾತ್ರಿ ಶಿಕ್ಷಣ ನೀಡಲಾಗಿತ್ತು. ವಿದ್ಯಾರ್ಥಿನಿಯರು ರಾತ್ರಿ 8 ಗಂಟೆಯವರೆಗೆ ಶಾಲೆಯಲ್ಲಿ ಅಭ್ಯಾಸ ಮಾಡಿ ಮರಳಿ ವಸತಿ ನಿಲಯಕ್ಕೆ ತೆರಳುತ್ತಿದ್ದರು. ವಿದ್ಯಾರ್ಥಿಗಳು ರಾತ್ರಿ 10ರವರೆಗೆ ಅಭ್ಯಾಸ ಮಾಡಿ, ಶಾಲೆಯಲ್ಲಿಯೇ ಮಲಗಿ ಬೆಳಿಗ್ಗೆ 5ರಿಂದ ಓದುತ್ತಿದ್ದರು’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !