ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಹಾನ್ಸ್‌: ಆರು ಸಿಬ್ಬಂದಿಗೆ ಕೋವಿಡ್‌

ಇನ್ನೆರಡು ವಾರಗಳಲ್ಲಿ ಸಾವಿನ ಪ್ರಮಾಣ ಹೆಚ್ಚುವ ಆತಂಕ l ಶೀತಜ್ವರ ಮಾದರಿಯೇ ಅಧಿಕ
Last Updated 13 ಜೂನ್ 2020, 21:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶನಿವಾರ ಒಟ್ಟು 31 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಈ ಪೈಕಿ ನಿಮ್ಹಾನ್ಸ್‌ನ ನಾಲ್ವರು ಮಹಿಳಾ ಸ್ವಚ್ಛತಾ ಸಿಬ್ಬಂದಿ ಮತ್ತು ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಸೇರಿದ್ದಾರೆ.

ಸೋಂಕಿತರ ಸಂಪರ್ಕದಿಂದಾಗಿ ನಿಮ್ಹಾನ್ಸ್‌ನ 13 ಮಂದಿ ರೋಗಿಗಳು ಮತ್ತು 36 ಮಂದಿ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಆರು ಮಂದಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಅವರೆಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸ
ಲಾಗಿದೆ. ಇವರೆಲ್ಲರೂ 28ರಿಂದ 51 ವರ್ಷದೊಳಗಿನವರು.

ಗುರಪ್ಪನಪಾಳ್ಯದಲ್ಲಿದ್ದ ಮಾನಸಿಕ ಅಸ್ವಸ್ಥೆಯೊಬ್ಬರನ್ನು ಪೊಲೀಸರು ಇದೇ 5ರಂದು ನಿಮ್ಹಾನ್ಸ್‌ಗೆ ದಾಖಲಿಸಿದ್ದರು. ಆಕೆಗೆ ಕೋವಿಡ್‌ ಇರುವುದು ಬಳಿಕ ಗೊತ್ತಾಗಿತ್ತು. ಆಕೆಯ ಸಂಪರ್ಕಕ್ಕೆ ಬಂದಿದ್ದ ಒಟ್ಟು 49 ಮಂದಿಯ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಶೀತಜ್ವರ ಮಾದರಿಯೇ ಅಧಿಕ: ನಗರದಲ್ಲಿ ಶನಿವಾರ ದೃಢಪಟ್ಟ ಪ್ರಕರಣಗಳಲ್ಲಿ 12 ಮಂದಿಗೆ ಶೀತಜ್ವರ ಮಾದರಿಯ (ಐಎಲ್‌ಐ) ಲಕ್ಷಣದ ಕಾರಣಕ್ಕಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ‘ಕೆಪಿಎಂಇ ನೋಂದಾಯಿತ ವೈದ್ಯಕೀಯ ಸಂಸ್ಥೆಗಳಲ್ಲಿ ಐಎಲ್‌ಐ ಮತ್ತು ಸಾರಿ ಪ್ರಕರಣಗಳ ಕುರಿತು ಕಟ್ಟು ನಿಟ್ಟಾಗಿ ನಿಗಾ ವಹಿಸುವಂತೆ ಸೂಚನೆ ನೀಡಿದ್ದರಿಂದ ಇಂತಹ ಪ್ರಕರಣಗಳು ಹೆಚ್ಚು ಹೆಚ್ಚು ಬೆಳಕಿಗೆ ಬರುವಂತಾಗಿದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಶ್ರೀನಿವಾಸ್ ತಿಳಿಸಿದರು.

2 ವಾರಗಳಲ್ಲಿ ಸಾವಿನ ಪ್ರಮಾಣ ಏರಿಕೆ?: ಕಳೆದ ಒಂದು ವಾರದಿಂದೀಚೆಗೆ ಕೋವಿಡ್‌ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಇನ್ನೂ ಎರಡು ವಾರ ಇದೇ ಪರಿಸ್ಥಿತಿ ಮುಂದುವರಿಯಬಹುದು ಎಂದು ಕರ್ನಾಟಕ ಪಲ್ಮನಾಜಲಿ ಅಸೋಸಿಯೇಷನ್‌ನ ಅಧ್ಯಕ್ಷ ಡಾ.ಕೆ.ಎಸ್‌.ಸತೀಶ್ ಅಭಿಪ್ರಾಯಪಟ್ಟಿದ್ದಾರೆ.

‘ಜೂನ್‌ ತಿಂಗಳ ಮೊದಲ 13 ದಿನಗಳಲ್ಲಿ ಸೋಂಕಿತರ ಪ್ರಮಾಣ ಶೇ 111.9ರಷ್ಟು ಹೆಚ್ಚಿದೆ. 27 ಸಾವು ಸಂಭವಿಸಿದೆ. ಈ ಪೈಕಿ 12 ಸಾವುಗಳು ನಗರದಲ್ಲೇ ಆಗಿದೆ. ಮುಂದಿನ 15 ದಿನಗಳಲ್ಲಿ ಈ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ’ ಎಂದು ರಾಜ್ಯದಲ್ಲಿ ಕೋವಿಡ್‌ ಸಾವಿನ ಕುರಿತು ಅಧ್ಯಯನ ನಡೆಸಿರುವ ಎರಡು ಅಧಿಕೃತ ಆಡಿಟ್ ಗುಂಪಿನ ಸದಸ್ಯರೂ ಆಗಿರುವ ಡಾ.ಸತೀಶ್ ಅಭಿಪ್ರಾಯಪಟ್ಟರು.

‘ಮಧುಮೇಹಿಗಳಿಗೆ ಕೊರೊನಾ ಸೋಂಕು ತಗುಲಿದರೆ ಅವರು ಸಾಯುವ ಸಾಧ್ಯತೆ ಶೇ 10ರಷ್ಟಿದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ 400 ಮತ್ತು ಅದಕ್ಕಿಂತ ಅಧಿಕ ಇರುವವರು ಕೋವಿಡ್‌ನಿಂದ ಮೃತಪಟ್ಟಿದ್ದನ್ನು ಗುರುತಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಕೋವಿಡ್‌ ವಾರ್‌ರೂಂನಲ್ಲಿ ದೊರೆತ ಮಾಹಿತಿಯಂತೆ ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಇದ್ದ ಕೋವಿಡ್‌ 19 ಸೋಂಕಿತರ ಸಾವಿನ ಪ್ರಮಾಣ ಶೇ 30.4ರಷ್ಟು ಹಾಗೂ ಇತರ ಕಾಯಿಲೆಗಳು ಇದ್ದವರ ಸಾವಿನ ಪ್ರಮಾಣ ಶೇ 18.8 ಇರುವುದನ್ನು ಗುರುತಿಸಲಾಗಿದೆ.‌

ಪ್ರಾಥಮಿಕ ಸಂಪರ್ಕ: ‘ನಗರದಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ್ದ 1,935 ಮಂದಿಯ ಪೈಕಿ 1,343 ಮಂದಿ ಕ್ವಾರಂಟೈನ್‌ ಮುಗಿಸಿದ್ದು, 592 ಮಂದಿ ಈಗಲೂ ಪ್ರತ್ಯೇಕವಾಸದಲ್ಲಿದ್ದಾರೆ. ಸಂಪರ್ಕಿತರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸುವ ಕೆಲಸ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಾಗಿದೆ. ಆಗ ಮಾತ್ರ ಅಧಿಕ ಪ್ರಮಾಣದಲ್ಲಿ ಸೋಂಕಿತರನ್ನು ಪತ್ತೆಹಚ್ಚುವುದು ಸಾಧ್ಯವಾಗಬಹುದು’ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ.ಗಿರಿಧರ ಬಾಬು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT