ಗಾಂಧಿ ಕಲ್ಪನೆಯ ಶಿಕ್ಷಣ ಭವಿಷ್ಯರಹಿತ

7
ಗುಜರಾತ್‌ನ ಬರಹಗಾರ ತ್ರಿದೀಪ್ ಸುಹೃದ್ ಕಳವಳ

ಗಾಂಧಿ ಕಲ್ಪನೆಯ ಶಿಕ್ಷಣ ಭವಿಷ್ಯರಹಿತ

Published:
Updated:
Deccan Herald

ಸಾಗರ: ಗಾಂಧಿಯನ್ನು ಕೇವಲ ಒಂದು ಉಪಕರಣದಂತೆ, ಗಾಂಧಿ ಕಟ್ಟಿದ ಸಂಸ್ಥೆಗಳನ್ನು ಸ್ಮಾರಕ, ಯಾತ್ರಾ ಸ್ಥಳಗಳಂತೆ ನೋಡಲಾಗುತ್ತಿದೆ. ಗಾಂಧಿ ಚಿಂತನೆಯಿಂದ ದೂರ ಇರುವ ಕಾರಣ, ಭಾರತದಲ್ಲಿ ಗಾಂಧಿ ಕಲ್ಪನೆಯ ಶಿಕ್ಷಣ ಮಾರ್ಗಕ್ಕೆ ಭವಿಷ್ಯ ಇಲ್ಲದಂತಾಗಿದೆ ಎಂದು ಗುಜರಾತ್‌ನ ಬರಹಗಾರ ತ್ರಿದೀಪ್ ಸುಹೃದ್ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಸೋಮವಾರ ‘ಗಾಂಧಿ ಕಲ್ಪನೆ ಶಿಕ್ಷಣ ಮಾರ್ಗದ ಭೂತ ಮತ್ತು ಭವಿಷ್ಯ’ ವಿಷಯ ಕುರಿತು ಅವರು ಮಾತನಾಡಿದರು.

‘ಅರ್ಥಗ್ರಹಣ ಶಿಕ್ಷಣದ ಮೂಲ ಉದ್ದೇಶವಾಗಿದೆ. ಆದರೆ ಅರ್ಥಗ್ರಹಣಕ್ಕೆ ಅವಕಾಶವಿರುವ ವಿಭಾಗಗಳನ್ನು ಮುಚ್ಚುವ ಕೆಲಸ ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿದೆ’ ಎಂದು ಹೇಳಿದ ಅವರು, ಗುಜರಾತ್‌ನಲ್ಲಿ ರಾಜ್ಯಶಾಸ್ತ್ರ ವಿಭಾಗವನ್ನು ಯಾವ ರೀತಿ ನಗಣ್ಯ ಮಾಡಲಾಯಿತು ಎಂಬ ವಿದ್ಯಮಾನವನ್ನು ವಿವರಿಸಿದರು.

‘ಇಂದಿನ ಶಿಕ್ಷಣ ಪದ್ಧತಿ ನಮ್ಮ ರಾಜಕೀಯ ಇತಿಹಾಸದ ಅಧ್ಯಯನಕ್ಕೆ ಯಾವುದೇ ಮಹತ್ವ ನೀಡದೇ ಇರುವುದು ಕೂಡ ಗಾಂಧಿ ಚಿಂತನೆಗಳಿಗೆ ಹಿನ್ನಡೆಯಾಗಲು ಕಾರಣವಾಗಿದೆ. ವಿಶ್ವವಿದ್ಯಾಲಯವನ್ನು ನಷ್ಟವಿಲ್ಲದೆ ನಡೆಸುವುದು ಹೇಗೆ ಎಂಬುದೇ ಇಂದಿನ ಚಿಂತನೆಯ ಪ್ರಧಾನ ಧಾರೆಯಾಗಿದೆ. ಹೀಗಾಗಿ, ಇಂದಿನ ವಿಶ್ವವಿದ್ಯಾಲಯಗಳಲ್ಲಿ ಹೈಟೆಕ್ ಶೌಚಾಲಯಗಳು ಇರುತ್ತವೆಯೇ ಹೊರತು ನುರಿತ ಉಪನ್ಯಾಸಕರು ಇರುವುದಿಲ್ಲ’ ಎಂದು ವಿಶ್ಲೇಷಿಸಿದರು.

ಸಾರ್ವಜನಿಕ ವಲಯದ ವಿಶ್ವವಿದ್ಯಾಲಯಗಳಿಗೆ ವರ್ಷದಿಂದ ವರ್ಷಕ್ಕೆ ಸರ್ಕಾರ ನೀಡುತ್ತಿರುವ ಧನಸಹಾಯದ ಪ್ರಮಾಣ ಕಡಿಮೆಯಾಗುತ್ತಿದೆ. ಮತ್ತೊಂದೆಡೆ, ಸಾಮಾಜಿಕ ಜವಾಬ್ದಾರಿ ಹೆಸರಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ನವದೆಹಲಿಯ ಜೆಎನ್‌ಯುದಂತಹ ಪ್ರಭಾವಶಾಲಿ ವಿಶ್ವವಿದ್ಯಾಲಯ ಕೂಡ ತನ್ನ ಮಹತ್ವ ಕಳೆದುಕೊಂಡು, ಕಾರ್ಪೊರೇಟ್ ಸಂಸ್ಥೆಗಳೇ ವಿಶ್ವವಿದ್ಯಾಲಯಗಳನ್ನು ನಿರ್ವಹಿಸುವ ದಿನ ದೂರವಿಲ್ಲ ಎಂದು ಎಚ್ಚರಿಸಿದರು.

‘ಪರಿಕಲ್ಪನೆಯಲ್ಲಿ ಉಳಿದ ಗಾಂಧಿ ಚಿಂತನೆ’

ಗಾಂಧಿ ಚಿಂತನೆ ಎನ್ನುವುದು ಈಗ ಕೇವಲ ಒಂದು ಪರಿಕಲ್ಪನೆಯ ರೂಪದಲ್ಲಿ ಉಳಿದಿದೆ. ಗಾಂಧಿ ನಿರ್ಮಿಸಿದ ಸಂಸ್ಥೆಗಳಲ್ಲಿ ಗಾಂಧೀಜಿ ಕುರಿತ ಹಿತಕರವಾದ ಸ್ಮೃತಿಗಳನ್ನು ಮಾತ್ರ ಉಳಿಸಿಕೊಂಡು ಕಠಿಣವಾದದ್ದನ್ನು ಅಳಿಸಿ ಹಾಕಲಾಗುತ್ತಿದೆ. ಗಾಂಧೀಜಿ ವಿಚಾರಧಾರೆಗಳೊಂದಿಗೆ ಗಾಢವಾಗಿ ಅನುಸಂಧಾನ ನಡೆಸುವ ಮೂಲಕ ಮುಖಾಮುಖಿಯಾಗಬೇಕು ಎಂಬ ಪ್ರಜ್ಞೆ ಕಾಣೆಯಾಗಿದೆ ಎಂದು ತ್ರಿದೀಪ್ ಸುಹೃದ್ ಹೇಳಿದರು.

ಗಾಂಧೀಜಿ ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಲ್ಲೇ ಗಾಂಧಿಯನ್ನು ನಿರುಪದ್ರವಿ, ಚಿಂತನಾಶೂನ್ಯ ವ್ಯಕ್ತಿಯಂತೆ ಚಿತ್ರಿಸಲಾಗುತ್ತಿದೆ. ಗುಜರಾತ್‌ನಲ್ಲಿ ಗಾಂಧೀಜಿ ಸ್ಥಾಪಿಸಿದ ವಿದ್ಯಾಪೀಠ ಶಿಕ್ಷಣ ಸಂಸ್ಥೆಗೆ ಬಡ ಹಾಗೂ ಮಧ್ಯಮ ವರ್ಗದವರೂ ಪ್ರವೇಶ ಪಡೆಯುತ್ತಿಲ್ಲ. ಹೀಗಾಗಿ, ಇಲ್ಲಿ ದಲಿತರು ಮತ್ತು ಆದಿವಾಸಿ ಸಮುದಾಯಕ್ಕೆ ಸೇರಿದವರು ಮಾತ್ರ ವಿದ್ಯಾರ್ಥಿಗಳಾಗಿದ್ದು, ಅವರಿಗೂ ಅಪರಿಚಿತ ಸಮುದಾಯ ಮತ್ತು ಸಂಸ್ಕೃತಿ ಪರಿಚಯದ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !