ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ್ ಆಟಕ್ಕೆ ಮೆಚ್ಚುಗೆಯ ಮಳೆ

ಅಂತಿಮ ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಜಯ ಗಳಿಸಿಕೊಟ್ಟ ಕನ್ನಡಿಗ
Last Updated 23 ಏಪ್ರಿಲ್ 2018, 20:09 IST
ಅಕ್ಷರ ಗಾತ್ರ

ಜೈಪುರ: ಸೋಲಿನತ್ತ ಸಾಗುತ್ತಿದ್ದ ತಂಡವನ್ನು ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವಿನ ದಡ ಸೇರಿಸಿದ ಕೃಷ್ಣಪ್ಪ ಗೌತಮ್‌ ಅವರ ಮೇಲೆ ಅನೇಕರು ಮೆಚ್ಚುಗೆಯ ಮಳೆ ಸುರಿಸಿದ್ದಾರೆ.

ಭಾನುವಾರ ರಾತ್ರಿ ಮುಂಬೈ ಇಂಡಿಯನ್ಸ್ ಎದುರು ನಡೆದ ಪಂದ್ಯದ ಕೊನೆಯ ಓವರ್‌ಗಳಲ್ಲಿ 11 ಎಸೆತಗಳಲ್ಲಿ 33 ರನ್‌ (2 ಸಿ, 4 ಬೌಂ) ಗಳಿಸಿದ ಗೌತಮ್‌ ತಂಡಕ್ಕೆ ಮೂರು ವಿಕೆಟ್‌ಗಳ ರೋಚಕ ಜಯ ಗಳಿಸಿಕೊಟ್ಟಿದ್ದರು.

ಅವರ ಆಟವನ್ನು ತಂಡದ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಕೊಂಡಾಡಿದ್ದಾರೆ. ‘ಗೌತಮ್ ಒಬ್ಬ ಅಸಾಮಾನ್ಯ ಆಟಗಾರ. ಭಾನುವಾರ ಅವರ ಇನಿಂಗ್ಸ್‌ ಸ್ವತಃ ಅವರಿಗೂ ನಮಗೂ ವಿಶೇಷ ಅನುಭವ ನೀಡಿದೆ’ ಎಂದು ಪಂದ್ಯದ ನಂತರ ಮಾತನಾಡಿದ ಸಂಜು ಹೇಳಿದರು.

‘ಗೌತಮ್‌ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಗಬೇಕಿತ್ತು. ಆದರೆ 22ಕ್ಕೆ3 ವಿಕೆಟ್ ಕಬಳಿಸಿದ ಜೊಫ್ರಾ ಆರ್ಚರ್ ಅವರನ್ನು ಪಂದ್ಯಶ್ರೇಷ್ಠ ಎಂದು ಘೋಷಿಸಲಾಗಿದೆ. ತಂಡದ ಗೆಲುವಿನಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದು. ಆದ್ದರಿಂದ ಜೊಫ್ರಾ ಅವರಿಗೆ ಪ್ರಶಸ್ತಿ ನೀಡಿದ್ದರಲ್ಲಿ ಅಸಮಾಧಾನವಿಲ್ಲ’ ಎಂದು ಸಂಜು ಹೇಳಿದರು.

ಈಶಾನ್‌ ಕಿಶನ್‌ ಅಭಿನಂದನೆ: ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್‌ ಈಶಾನ್ ಕಿಶನ್ ಕೂಡ ಗೌತಮ್‌ ಅವರನ್ನು ಕೊಂಡಾಡಿದರು.

‘ಗೌತಮ್‌ ಅವರು ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಭಾರಿ ಹೊಡೆತಗಳಿಗೆ ಕೈ ಹಾಕುವ ಮುನ್ನ ಅವರು ಚೆಂಡಿನ ಗತಿಯನ್ನು ಸರಿ ಯಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದ್ದರಿಂದ ಅವರಿಗೆ ಉತ್ತಮ ಹೊಡೆತಗಳ ಮೂಲಕ ತಂಡವನ್ನು ಗೆಲ್ಲಿಸಲು ಸಾಧ್ಯವಾಯಿತು’ ಎಂದು ಕಿಶನ್ ಹೇಳಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಏಳು ವಿಕೆಟ್‌ಗಳಿಗೆ 167 ರನ್‌ ಗಳಿಸಿತ್ತು. ರಾಜಸ್ಥಾನ ರಾಯಲ್ಸ್ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗ ಏಳು ವಿಕೆಟ್ ಕಳೆದುಕೊಂಡು ಜಯ ಗಳಿಸಿತ್ತು.

ಸಂಜು ಸ್ಯಾಮ್ಸನ್‌ 52 ಮತ್ತು ಬೆನ್‌ ಸ್ಟೋಕ್ಸ್ 40 ರನ್ ಗಳಿಸಿ ತಂಡದ ಇನಿಂಗ್ಸ್‌ಗೆ ಬಲ ತುಂಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT