ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಫ್‌ಡೌನ್‌ ಕಥೆಗಳು | ಬಳ್ಳಾರಿ: ರಸ್ತೆ ಕಾಣದ ಬೋಡಜ್ಜನ ಬಂಡೆ

ಅರ್ಧಕ್ಕೆ ಶಾಲೆ ಬಿಡುವ ಹೆಣ್ಣು ಮಕ್ಕಳು, ಬಾರದ ಬಸ್, ಆಂಬ್ಯುಲೆನ್ಸ್‌
Last Updated 23 ಜೂನ್ 2020, 3:21 IST
ಅಕ್ಷರ ಗಾತ್ರ

ಬಳ್ಳಾರಿ: ಇದು ಬೋಡಜ್ಜನ ಬಂಡೆ. ಇದುವರೆಗೂ ರಸ್ತೆಯನ್ನೇ ಕಾಣದ ಗಣಿನಾಡಿನ ಒಂದು ಕುಗ್ರಾಮ.

ಇಲ್ಲಿನ ಜನ ಬಸ್‌ ನೋಡಿಲ್ಲ. ಆಂಬುಲೆನ್ಸ್‌‌ ಬರುವುದು ಕನಸಿನ ಮಾತು. ಆಟೊರಿಕ್ಷಾ ಕೂಡ ಇಲ್ಲ. ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಉಪ ಕೇಂದ್ರವಿದೆ. ಆಹಾರ ಧಾನ್ಯದ ವಾಹನ ಸಹ ಈ ಊರಿನತ್ತ ಬರುವುದಿಲ್ಲ.

ಇಲ್ಲಿ ಬೈಕಿದ್ದವರೇ ಅದೃಷ್ಟವಂತರು. ಬೈಸಿಕಲ್‌ ಕೆಲವರ ಬಳಿ ಇದೆ. ಉಳಿದವರಿಗೆ ಕಾಲ್ನಡಿಗೆಯೇ ಸಕಲ ಸಾರಿಗೆ. ಅನಾರೋಗ್ಯ, ಹೆರಿಗೆಯಂತಹ ತುರ್ತು ಸಂದರ್ಭಗಳಲ್ಲಿ ಬೈಕಿದ್ದವರೇ ಆಪದ್ಬಾಂಧವರು.

ಕೂಡ್ಲಿಗಿ ತಾಲ್ಲೂಕಿನ ಜುಮ್ಮೋ ಬನಹಳ್ಳಿ ಪಂಚಾಯ್ತಿಗೆ ಸೇರಿದ ಈ ಗ್ರಾಮವು ಬಂಡೆಯ ಮೇಲಿರುವುದರಿಂದ ಅಲ್ಲಿನ ಹಿರಿಯನ ಹೆಸರಿನಲ್ಲಿ ಈ ಊರಿಗೆ ಬೋಡಜ್ಜನ ಬಂಡೆ ಎಂದೇ ಕರೆಯಲಾಗುತ್ತದೆ.

25 ಕುಟುಂಬಗಳ ಗ್ರಾಮದಲ್ಲಿ 200 ಜನಸಂಖ್ಯೆ ಇದೆ. ಬಡವರೇ ಹೆಚ್ಚಿರುವ ಇದೇ ಪಂಚಾಯ್ತಿಯ ಕುಮತಿ ಗ್ರಾಮದಿಂದ ಈ ಗ್ರಾಮದವರೆಗೂ ಸಂಪರ್ಕ ರಸ್ತೆಯೇ ಇಲ್ಲ. ಬಳ್ಳಾರಿ ಜಾಲಿಯಿಂದ ಆವೃತ್ತವಾದ, ತಗ್ಗುದಿನ್ನೆಗಳಿಂದ ಕೂಡಿದ ಸುಮಾರು ಎರಡೂವರೆ ಕಿ.ಮೀ. ಮಣ್ಣಿನ ಕಚ್ಚಾರಸ್ತೆಯೇ ಸಂಪರ್ಕ ಸಾಧನ. ಹಗಲಲ್ಲಿ ನಡೆದು ಹೋಗುವುದೇ ಸಾಹಸ. ಸಂಜೆಯಾದರೆ ಈ ದಾರಿಯಲ್ಲಿ ನರಪಿಳ್ಳೆಯೂ ಕಾಣಿಸುವುದಿಲ್ಲ. ಮಳೆಗಾಲದಲ್ಲಿ ಬಂಡೆಯಾಚೆಗೆ ಜನ ಬರಲು ಆಗುವುದಿಲ್ಲ. ಇಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಆರನೇ ಕ್ಲಾಸಿಗೆ ಸೇರಬೇಕೆಂದರೆ ಕುಮತಿಗೆ ನಡೆದು ಹೋಗಬೇಕು. ಹಲವರು ಆರನೇ ಕ್ಲಾಸಿಗೆ ಸೇರುವುದೇ ಇಲ್ಲ. ಪೋಷಕರೂ ಸುಮ್ಮನಿದ್ದು ಬಿಡುತ್ತಾರೆ. ‘ಪ್ರಜಾವಾಣಿ’ಯು ಗ್ರಾಮಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಶಾಲೆ ಬಿಟ್ಟ ಹತ್ತಾರು ಹೆಣ್ಣುಮಕ್ಕಳು ಕಂಡುಬಂದರು. ಶಾಲೆ ಅರ್ಧಕ್ಕೆ ಬಿಟ್ಟ ಗಂಡುಮಕ್ಕಳೂ ಈ ಗ್ರಾಮದಲ್ಲಿದ್ದರು. ಅವರೆಲ್ಲ ಉದ್ಯೋಗ ಖಾತರಿ ಯೋಜನೆಯ ಕೆಲಸಕ್ಕೆ ಹೋಗುತ್ತಾರೆ ಎಂದು ಗ್ರಾಮಸ್ಥರು ಹೇಳಿದರು.

‘ಸರಿಯಾದ ರಸ್ತೆಯೊಂದು ಇದ್ದಿದ್ದರೆ ಈ ಗ್ರಾಮದಲ್ಲಿ ವಿದ್ಯಾವಂತರ ಸಂಖ್ಯೆಯೂ ಹೆಚ್ಚಿರುತ್ತಿತ್ತು’ ಎಂದು ಗ್ರಾಮದ ಓಬಣ್ಣ
ವಿಷಾದಿಸಿದರು.

ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಯೂ ಇಲ್ಲ. ನಿವಾಸಿಗಳು ಪ್ರತಿ ತಿಂಗಳೂ ಪಡಿತರವನ್ನು ಕುಮತಿ ಗ್ರಾಮದಿಂದ ಹೊತ್ತು ತರುತ್ತಾರೆ. ಗ್ರಾಮದಲ್ಲಿ ಗುಡಿಸಲುಗಳೇ ಹೆಚ್ಚಿವೆ. ಮೂವತ್ತು ವರ್ಷದ ಹಿಂದೆ ನೀಡಿದ್ದ ಕೆಲವೇ ಆಶ್ರಯ ಯೋಜನೆ ಮನೆಗಳು ಸೋರುತ್ತಿವೆ. ನಾಲ್ಕೈದು ವರ್ಷದಿಂದ ಇಲ್ಲಿ ಯಾರಿಗೂ ಆಶ್ರಯ ಮನೆ ಸಿಕ್ಕಿಲ್ಲ. ಇಲ್ಲಿರುವ ನಾಟಿವೈದ್ಯ ಓಬಣ್ಣನವರ ಕಾರಣಕ್ಕೆ, ಬಳ್ಳಾರಿಯಷ್ಟೇ ಅಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಪ್ರಖ್ಯಾತವಾಗಿದೆ ಬೋಡಜ್ಜನ ಬಂಡೆ. ಕೀಲು, ನೋವು, ಮೂಳೆ ಮುರಿತಕ್ಕೆ ಅವರಿಂದ ಚಿಕಿತ್ಸೆ ಪಡೆಯಲು ಜನ ಕಾರುಗಳಲ್ಲಿ ಈ ಗ್ರಾಮ ವನ್ನು ಹುಡುಕಿಕೊಂಡು ಬರುತ್ತಾರೆ. ಗ್ರಾಮಕ್ಕೆ ಎಲ್ಲಿಯೂ ನಾಮಫಲಕವೇ ಇಲ್ಲ.

ಇಂದ್ರಮ್ಮನ ಕಾಲದಲ್ಲಿ ರಸ್ತೆ ಬಂತು!

‘ನಾವು ಹುಡುಗರಾಗಿದ್ದಾಗ ಕಾಲುದಾರಿ ಇತ್ತು. ಇಂದ್ರಮ್ಮ (ಇಂದಿರಾ ಗಾಂಧಿ) ಮಾಡಿದ ರೋಡಿದು’ ಎಂದು ಕುಮತಿ ಗ್ರಾಮದ ನಿಂಗಪ್ಪ ಸ್ಮರಿಸಿದರು. ಕುಮತಿ ಗ್ರಾಮದ ಬಹುತೇಕರ ಜಮೀನುಗಳು ಈ ಗ್ರಾಮದ ಸುತ್ತಮುತ್ತ ಇರುವುದರಿಂದ, ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಗ್ರಾಮದ ಮುಖ್ಯರಸ್ತೆಗೆ ಮಾತ್ರ ಕಾಂಕ್ರಿಟ್‌ ಹಾಕಲಾಗಿದೆ. ‘ಮಣ್ಣು ಹಾಕಿ ಸಮತಟ್ಟು ಮಾಡದೇ ಇರುವುದರಿಂದ ವೃದ್ಧರು, ಮಕ್ಕಳಿಗೆ ತೊಂದರೆಯಾಗಿದೆ’ ಎಂದು ಗ್ರಾಮದ ರತ್ನಮ್ಮ, ನಿಂಗಣ್ಣ ದೂರಿದರು.

* ನಾನು ಬಾಲಕನಾಗಿದ್ದಾಗಿಂದಲೂ ಈ ರಸ್ತೆ ಅಧ್ವಾನವಾಗಿಯೇ ಇದೆ.
– ನಿಂಗಪ್ಪ, ಕುಮತಿ ಗ್ರಾಮಸ್ಥ

* ಗ್ರಾಮದಲ್ಲಿ ಸೌಕರ್ಯ ಎಂಬುದೇ ಇಲ್ಲ. ನಾವೆಲ್ಲ ಇನ್ನೂ ಕಾಡಲ್ಲೇ ಇದ್ದಂತೆ ಇದ್ದೇವೆ
– ರತ್ನಮ್ಮ, ಬೋಡಜ್ಜನ ಬಂಡೆ ನಿವಾಸಿ

* ಎರಡೂವರೆ ಕಿ.ಮೀ ಮುಳ್ಳುಕಂಟಿಯ ರಸ್ತೆಯಲ್ಲಿ ನಡೆದು ಹೋಗಬೇಕಾಗಿರುವುದರಿಂದ ಗ್ರಾಮದ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ
– ಭವಾನಿ, ವಿದ್ಯಾರ್ಥಿನಿ

* ಡಾಂಬರು ರಸ್ತೆ ಬೇಕೆಂದು ನಾವು ಸಲ್ಲಿಸಿದ ಮನವಿಗಳಿಗೆ ಲೆಕ್ಕವೇ ಇಲ್ಲ.
– ಕಾಮಯ್ಯ, ಪಂಚಾಯ್ತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT