ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಕೊರತೆ ಆಗದು: ಜೋಶಿ ವಿಶ್ವಾಸ

ಮಹದಾಯಿಗಾಗಿ ಸರ್ವ ಪಕ್ಷ ಸಭೆ ಕರೆಯಲಿ , ಜಿಂದಾಲ್‌ಗೆ ಜಮೀನು ಬೇಡ
Last Updated 1 ಜೂನ್ 2019, 18:47 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ 16ರಿಂದ 17 ದಿನ ಪೂರೈಸಲು ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹ ಇದೆ. ಮುಂದಿನ ದಿನಗಳಲ್ಲೂ ಕಲ್ಲಿದ್ದಲು ಕೊರತೆಯಾಗದಂತೆ ನೋಡಿಕೊಳ್ಳಲಿದ್ದೇವೆ’ ಎಂದು ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದೆಲ್ಲೆಡೆ 24–25 ದಿನಗಳಿಗೆ ಬೇಕಾದಷ್ಟು ಕಲ್ಲಿದ್ದಲು ದಾಸ್ತಾನು ಇದೆ. ಈ ವಿಚಾರದಲ್ಲಿ ಕರ್ನಾಟಕಕ್ಕೆ ತಾರತಮ್ಯ ಮಾಡುವುದಿಲ್ಲ’ ಎಂದರು.

‘ಮಹದಾಯಿ ವಿಚಾರದಲ್ಲಿ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಎರಡೂ ಸರ್ಕಾರಗಳು ಸ್ಪಷ್ಟೀಕರಣ ಕೇಳಿದ್ದು, ನಾವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಅಲ್ಲಿ ತೀರ್ಮಾನ ಆಗುವವರೆಗೆ ಅಧಿಸೂಚನೆ ಹೊರಡಿಸುವುದು ಬಹಳ ಕಷ್ಟ. ಕರ್ನಾಟಕ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಕಾನೂನು ತಜ್ಞರು, ಸರ್ವಪಕ್ಷಗಳ ಸಭೆ ಕರೆಯಲಿ, ಈ ಹಂತದಲ್ಲಿ ಅಧಿಸೂಚನೆ ಆದರೆ ಬಜೆಟ್‌ನಲ್ಲಿ ನಯಾ ಪೈಸೆ ಇಟ್ಟಿಲ್ಲ ಎಂಬುದನ್ನು ಗಮನಿಸಬೇಕು. ಹೀಗಿದ್ದರೂ, ಅಧಿಸೂಚನೆ ಹೊರಡಿಸಬಹುದು ಎಂದು ರಾಜ್ಯದ ಕಾನೂನು ತಜ್ಞರು ಹೇಳಿದರೆ ಅದನ್ನು ನಾವು ಪರಿಶೀಲಿಸಲು ಸಿದ್ಧ. ಇಲ್ಲವಾದರೆ ಎರಡೂ ಸರ್ಕಾರಗಳು ಸಲ್ಲಿಸಿರುವ ಅರ್ಜಿ, ಸುಪ್ರೀಂ ಕೋರ್ಟ್‌ನಲ್ಲಿ ವಿಷಯ ಇತ್ಯರ್ಥಗೊಂಡ ಬಳಿಕವಷ್ಟೇ ಅಧಿಸೂಚನೆ ಹೊರಡಿಸಬಹುದಷ್ಟೇ’ ಎಂದರು.

‘ಬರಗಾಲದಿಂದ ತತ್ತರಿಸಿರುವ ಕರ್ನಾಟಕಕ್ಕೆ ಮೋದಿ ಸರ್ಕಾರ ಶೇ 35ರಷ್ಟು ಪರಿಹಾರ ನೀಡಿದೆ. ಮನಮೋಹನ್‌ ಸಿಂಗ್ ಸರ್ಕಾರ ಇದ್ದಾಗ ಕೇಂದ್ರ ನೀಡಿದ್ದು ಶೇ 10ರಷ್ಟು ಮಾತ್ರ. ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿಕಾರ್ಮಿಕರಿಗೆ ಕೊಡಬೇಕಾದ ಹಣವನ್ನು ಕೇಂದ್ರ ಹಿಡಿದಿಟ್ಟುಕೊಳ್ಳುವುದಿಲ್ಲ’ ಎಂದರು.

ಜಿಂದಾಲ್‌ಗೆ ಕಡಿಮೆ ದರಕ್ಕೆ ಗಣಿ ಜಮೀನು ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ತಾವು ವಿರೋಧಿಸುವುದಾಗಿ ಅವರು ಹೇಳಿದರು.

ಚರ್ಚೆಗೆ ಸಿದ್ಧ: ‘ಸಂಸತ್‌ನಲ್ಲಿ ಯಾವುದೇ ವಿಷಯದ ಬಗ್ಗೆ ಚರ್ಚೆಗೆ ಸಿದ್ಧ, ವಿರೋಧ ಪಕ್ಷಗಳು ಚರ್ಚೆಗೆ ಅವಕಾಶ ಮಾಡಿಕೊಡಬೇಕು’ ಎಂದು ಸಂಸದೀಯ ವ್ಯವಹಾರಗಳ ಸಚಿವರೂ ಆಗಿರುವ ಜೋಶಿ ಹೇಳಿದರು.

ರಾಜ್ಯದ ಹಿತ:15 ದಿನಕ್ಕೊಮ್ಮೆ ಸಭೆ
‘ಕೇಂದ್ರದಲ್ಲಿ ರಾಜ್ಯವನ್ನುಪ್ರತಿನಿಧಿಸುತ್ತಿರುವ ನಾಲ್ವರು ಸಚಿವರು 15 ದಿನಕ್ಕೊಮ್ಮೆ ಒಂದೆಡೆ ಸೇರಿ ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ರಾಜ್ಯದ ಜನರ ತೀರ್ಪಿಗೆ ಬೆಲೆ ಕೊಟ್ಟು, ರಾಜ್ಯದ ಸಮಸ್ಯೆಗಳಿಗೆ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಪರಿಹಾರ ದೊರಕಿಸಿಕೊಡಲು ಶ್ರಮಿಸಲಿದ್ದೇವೆ’ ಎಂದು ಪ್ರಹ್ಲಾದ ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT