ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಾ.ಕಲಬುರ್ಗಿ ಹತ್ಯೆಗೂ ನಮಗೂ ಸಂಬಂಧ ಇಲ್ಲ’

ಆರೋಪಿಗಳಾದ ಅಮೋಲ ಕಾಳೆ, ಪ್ರವೀಣ ಚತುರ ಹೇಳಿಕೆ
Last Updated 6 ಜೂನ್ 2019, 19:45 IST
ಅಕ್ಷರ ಗಾತ್ರ

ಧಾರವಾಡ: ‘ನಮಗೂ ಡಾ.ಕಲಬುರ್ಗಿ ಹತ್ಯೆ ಪ್ರಕರಣಕ್ಕೂ ಸಂಬಂಧವಿಲ್ಲ. ನಮ್ಮನ್ನು ಯಾಕೆ ಕರೆದುಕೊಂಡು ಬಂದಿದ್ದಾರೆ ಎಂಬುದು ಗೊತ್ತಿಲ್ಲ. ಪೊಲೀಸರು ನಮ್ಮಿಂದ ಖಾಲಿ ಹಾಳೆ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ...’

ಹಿರಿಯ ಚಿಂತಕ ಡಾ. ಎಂ.ಎಂ.ಕಲಬುರ್ಗಿ ಹತ್ಯೆ ಆರೋಪದ ಮೇಲೆ ಬಂಧಿತರಾಗಿರುವ ಮಹಾರಾಷ್ಟ್ರದ ಅಮೋಲ ಕಾಳೆ ಮತ್ತು ಪ್ರವೀಣ ಪ್ರಕಾಶ ಚತುರ ಗುರುವಾರ ನ್ಯಾಯಾಲಯದ ಮುಂದೆ ನೀಡಿದ ಹೇಳಿಕೆ ಇದು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ವಶದಲ್ಲಿದ್ದ ಈ ಇಬ್ಬರನ್ನು ಜೂನ್ 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಆದರೆ ಅವಧಿಗೂ ಒಂದು ದಿನ ಮೊದಲೇ ಎಸ್‌ಐಟಿ ತಂಡ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಈ ಸಂದರ್ಭದಲ್ಲಿ ನ್ಯಾಯಾಧೀಶರು, ‘ಪೊಲೀಸರ ವಶದಲ್ಲಿದ್ದ ಸಂದರ್ಭದಲ್ಲಿ ನಿಮಗೇನಾದರೂ ತೊಂದರೆ ನೀಡಲಾಯಿತೆ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಆರೋಪಿಗಳು, ತಮಗೂ ಈ ಪ್ರಕರಣಕ್ಕು ಸಂಬಂಧವಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶೆ ಡಿ. ಮಮತಾ, ‘ತನಿಖೆಗೆ ಸಂಬಂಧಿಸಿದಂತೆ ಈ ನ್ಯಾಯಾಲಯ ಮಧ್ಯ ಪ್ರವೇಶಿಸಲು ಇಚ್ಛಿಸುವುದಿಲ್ಲ. ಪೊಲೀಸರು ನಿಮಗೆ ಏನಾದರೂ ತೊಂದರೆ ನೀಡಿದ್ದಾರೆಯೇ ಎನ್ನುವುದು ಮಾತ್ರ ನ್ಯಾಯಾಲಯದ ಪ್ರಶ್ನೆ’ ಎಂದಾಗ ಆರೋಪಿಗಳು ‘ಇಲ್ಲ’ ಎಂದರು.

ಅಮೋಲ್‌ ಕಾಳೆಯನ್ನು ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಎಸ್‌ಐಟಿ ಪೊಲೀಸರು ಆರೋಪಿಗಳನ್ನು ಮಧ್ಯಾಹ್ನವೇ ನ್ಯಾಯಾಲಯಕ್ಕೆ ಕರೆ ತಂದಿದ್ದರು. ನ್ಯಾಯಾಲಯದ ಅವಧಿ ಮುಗಿಯುವ ಸಮಯಕ್ಕೆ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಇದಕ್ಕೂ ಮೊದಲು ಪೊಲೀಸ್ ಅತಿಥಿ ಗೃಹದಲ್ಲಿ ಈ ಇಬ್ಬರನ್ನು ವಿಶೇಷ ತನಿಖಾ ತಂಡ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಜತೆಗೆ ಮಹಾರಾಷ್ಟ್ರ ಎಸ್‌ಐಟಿ ಅಧಿಕಾರಿಗಳೂ ಇಲ್ಲಿಗೆ ಬಂದು, ಗೋವಿಂದ ಪಾನ್ಸರೆ ಮತ್ತು ನರೇಂದ್ರ ದಾಬೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT