ಗುರುವಾರ , ನವೆಂಬರ್ 14, 2019
18 °C

ಸಿದ್ದರಾಮಯ್ಯ ಜತೆ ಭಿನ್ನಾಭಿಪ್ರಾಯವಿಲ್ಲ: ಪರಮೇಶ್ವರ ಸ್ಪಷ್ಟನೆ

Published:
Updated:
Prajavani

ಬೆಂಗಳೂರು: ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕೆಲವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಶಾಸಕ ಜಿ.ಪರಮೇಶ್ವರ ಇಲ್ಲಿ ಗುರುವಾರ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ‘ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಮಾಡುವ ಸಲುವಾಗಿ ದೆಹಲಿಗೆ ಹೋಗಿದ್ದೆ. ಅದೇ ಸಮಯದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅರವನ್ನು ಭೇಟಿ ಮಾಡಿದ್ದೇನೆ. ದೆಹಲಿಯಲ್ಲೇ ಉಳಿದಿದ್ದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ’ ಎಂದು ವಿವರಣೆ ನೀಡಿದರು.

‘ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಒಟ್ಟಾಗಿ ಪಕ್ಷ ಕಟ್ಟಿ ಮತ್ತೆ ಅಧಿಕಾರಕ್ಕೆ ತರುತ್ತೇವೆ. ಒಬ್ಬರಿಂದ ಪಕ್ಷ ಬೆಳೆಸಲು ಸಾಧ್ಯವಾಗದು. ಪಕ್ಷದಿಂದ ಯಾರನ್ನೂ ದೂರವಿಟ್ಟು ಸಂಘಟನೆ ಮಾಡುವುದು ಕಷ್ಟಕರ. ಸಾಮೂಹಿಕ ನಾಯಕತ್ವದ ಮೂಲಕ ಅಧಿಕಾರಕ್ಕೆ ತರಲಾಗುವುದು. ವಿರೋಧ ಪಕ್ಷದ ನಾಯಕರನ್ನು ಮುಂದಿನ ಅಧಿವೇಶನದ ಒಳಗಾಗಿ ಆಯ್ಕೆ ಮಾಡಲಾಗುತ್ತದೆ’ ಎಂದರು.

‘ಡಿಸೆಂಬರ್‌ನಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಈ ಬಗ್ಗೆ ಸೋನಿಯಾ ಬಳಿ ಚರ್ಚಿಸಿದ್ದೇನೆ. ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದ್ದೇನೆ’ ಎಂದು ಹೇಳಿದರು.

ರಾಜ್ಯದ ಜನರು ಪ್ರವಾಹದಿಂದ ತತ್ತರಿಸಿದ್ದರೂ ಕೇಂದ್ರ ಸರ್ಕಾರ ಈವರೆಗೂ ಪರಿಹಾರ ನೀಡಿಲ್ಲ. ಕೇಂದ್ರದಿಂದ ಪರಿಹಾರ ಕೇಳುವ ಧೈರ್ಯವೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಲ್ಲವಾಗಿದೆ. ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗುವ ಪ್ರಯತ್ನವನ್ನೂ ಮಾಡಿಲ್ಲ. ಆಡಳಿತ ನಡೆಸುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)