ಬೊಕ್ಕಸಕ್ಕೆ ಬಾರದ ₹ 500 ಕೋಟಿ

7
ಆಮದು ಪರಿಣಾಮ: ಕರ್ನಾಟಕದ ಅದಿರು ಕೇಳುವವರಿಲ್ಲ

ಬೊಕ್ಕಸಕ್ಕೆ ಬಾರದ ₹ 500 ಕೋಟಿ

Published:
Updated:

ಬೆಂಗಳೂರು: ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅದಿರು ಲಭ್ಯವಿದ್ದರೂ ಉಕ್ಕು ಕಾರ್ಖಾನೆಗಳು ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ರಾಜಧನ ಹಾಗೂ ಉಳಿದ ತೆರಿಗೆಗಳ ರೂಪದಲ್ಲಿ ರಾಜ್ಯದ ಬೊಕ್ಕಸಕ್ಕೆ ಬರಬೇಕಾದ ₹ 500 ಕೋಟಿ ಆದಾಯ ಕೈತಪ್ಪಿದೆ.   

ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ 70 ಲಕ್ಷ ಟನ್‌ ಅದಿರು ಉತ್ಪಾದಿಸಲಾಗಿದ್ದು, 20 ಲಕ್ಷ ಟನ್‌ ಮಾತ್ರ ಮಾರಾಟವಾಗಿದೆ. ಉಳಿದ 50 ಲಕ್ಷ ಟನ್‌ ಗಣಿಗಳಲ್ಲೇ ಬಿದ್ದಿದೆ. 

ಕೇಂದ್ರ ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕೆ, ಉಕ್ಕು ಹಾಗೂ ಗಣಿ ಸಚಿವಾಲಯ, ನೀತಿ ಆಯೋಗಕ್ಕೆ ಫಿಮಿ ಸಲ್ಲಿಸಿರುವ ಮನವಿಯಲ್ಲಿ, ರಾಜ್ಯದಲ್ಲಿ ಉಕ್ಕು ಕಾರ್ಖಾನೆ ಹೊಂದಿರುವ ಕಂಪನಿಗಳು ಹೊರಗಿನಿಂದ ಸುಮಾರು 50 ಲಕ್ಷ ಟನ್‌ ಅದಿರು ತರಿಸಿಕೊಂಡಿರುವುದರಿಂದ ಸ್ಥಳೀಯವಾಗಿ ಉತ್ಪಾದಿಸಲಾದ ಅದಿರಿಗೆ ಬೇಡಿಕೆ ಇಲ್ಲದಂತಾಗಿದೆ ಎಂದು ಅಲವತ್ತುಕೊಂಡಿದೆ.

ವಾರ್ಷಿಕ 1.20 ಕೋಟಿ ಟನ್‌ ಉಕ್ಕು ಉತ್ಪಾದನೆ ಸಾಮರ್ಥ್ಯ ಹೊಂದಿರುವ ಖಾಸಗಿ ವಲಯದ ‘ಜೆಎಸ್‌ಡಬ್ಲ್ಯು’ ಮತ್ತು ಸರ್ಕಾರಿ ಸ್ವಾಮ್ಯದ ‘ಕುದುರೆಮುಖ ಕಬ್ಬಿಣ ಅದಿರು ಕಂಪನಿ’. (ಕೆಐಒಸಿಎಲ್‌) ದೊಡ್ಡ ಪ್ರಮಾಣದಲ್ಲಿ ಅದಿರು ಆಮದು ಮಾಡಿಕೊಳ್ಳುತ್ತಿವೆ. 

ಇದರಿಂದ ಪ್ರತಿ ಟನ್‌ ಅದಿರಿಗೆ ಬರುವ ಶೇ 15 ರಷ್ಟು ರಾಜಧನ (ಅದಿರು ಮಾರಾಟ ದರದ ಮೇಲೆ ಸಂಗ್ರಹ ಮಾಡುವ ಹಣ), ‍‍‍ಪರಿಸರ ಪುನರ್‌ನಿರ್ಮಾಣ ಹಾಗೂ ಗಣಿಗಾರಿಕೆಯಿಂದ ತೊಂದರೆಗೊಳಗಾದ ಜನರ ಪುನರ್ವಸತಿಗೆ ಸಂಗ್ರಹಿಸುವ ಶೇ 10ರಷ್ಟು ಶುಲ್ಕ (ಎಸ್‌ಪಿವಿ ಶುಲ್ಕ) ಮತ್ತು ಶೇ 4.5ರಷ್ಟು ‘ಜಿಲ್ಲಾ ಖನಿಜ ನಿಧಿ’ಗೆ (ಡಿಎಂಎಫ್‌) ಬರುವ ಆದಾಯ ಖೋತಾ ಆಗಲಿದೆ.  

ಈಗ, ಕರ್ನಾಟಕ ಹೊರತುಪಡಿಸಿ ಅದಿರು ಉತ್ಪಾದಿಸುತ್ತಿರುವ ಉಳಿದ ರಾಜ್ಯಗಳು ರಫ್ತು ಮಾಡುತ್ತಿವೆ. ‘ನಾವು ಉತ್ಪಾದಿಸಿದ ಅದಿರನ್ನು ಉದ್ಯಮಗಳು ಬಳಸದೆ ಇರುವುದರಿಂದ ರಫ್ತಿಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗುವುದು’ ಎಂದು ‘ಫಿಮಿ’ಯ ಹಿರಿಯ ಪದಾಧಿಕಾರಿ ಬಸಂತ್‌ ಪೊದ್ದಾರ್‌ ತಿಳಿಸಿದರು.

ಕಬ್ಬಿಣದ ಅದಿರೂ ಸೇರಿದಂತೆ ಪ್ರಮುಖ ಖನಿಜಗಳ ಗಣಿಗಾರಿಕೆಯಿಂದ ರಾಜಧನ ಮತ್ತಿತರ ತೆರಿಗೆಗಳ ರೂಪದಲ್ಲಿ ರಾಜ್ಯದ ಬೊಕ್ಕಸಕ್ಕೆ 2018ರ ನವೆಂಬರ್‌ವರೆಗೆ ₹611 ಕೋಟಿ ಆದಾಯ ಬಂದಿದೆ. 2016–17ರಲ್ಲಿ 1,042 ಕೋಟಿ ಬಂದಿತ್ತು.

ರಾಜ್ಯದಲ್ಲಿ ವ್ಯಾಪಕವಾಗಿ ನಡೆದಿದ್ದ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಆಮೇಲೆ ಗಣಿಗಾರಿಕೆ ಸ್ಥಗಿತಗೊಂಡಿತ್ತು. 2011ರಲ್ಲಿ ಅದಿರು ರಫ್ತು ನಿಷೇಧಿಸಲಾಗಿತ್ತು. ಗಣಿಗಾರಿಕೆ ಆರಂಭಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌, 2013ರಲ್ಲಿ ವರ್ಷಕ್ಕೆ 30ಲಕ್ಷ ಟನ್‌ ಅದಿರು ಹೊರತೆಗೆಯಬೇಕು; ಅದಿರನ್ನು ಉಕ್ಕು ಕಾರ್ಖಾನೆಗಳಿಗೇ ಇ– ಹರಾಜು ಮಾಡಬೇಕು ಎಂಬ ಷರತ್ತು ಹಾಕಿತ್ತು.  2017ರ ಡಿಸೆಂಬರ್‌ನಲ್ಲಿ ಉತ್ಪಾದನಾ ಮಿತಿಯನ್ನು 35 ಲಕ್ಷ ಟನ್‌ಗೆ ಹೆಚ್ಚಿಸಿತು.

**

ದೇಶದಲ್ಲಿ 150 ದಶಲಕ್ಷ ಟನ್‌ ಅದಿರಿದೆ. ಆದರೂ, ಆಮದು ಮಾಡಿಕೊಳ್ಳುತ್ತಿರುವ ಅದಿರಿನ ಮೇಲೆ ಶೇ 30ರಷ್ಟು ಸುಂಕ ಹೇರುವ ತೀರ್ಮಾನ ಮಾಡಲು ಸರ್ಕಾರಕ್ಕೆ ಸಮಯವಿಲ್ಲ.
-ಆರ್‌.ಕೆ. ಶರ್ಮ, ಫಿಮಿ ‍ಪ್ರಧಾನ ಕಾರ್ಯದರ್ಶಿ, ನವದೆಹಲಿ

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 1

  Frustrated
 • 8

  Angry

Comments:

0 comments

Write the first review for this !