ಮಂಗಳವಾರ, ನವೆಂಬರ್ 19, 2019
23 °C

ಪಕ್ಷದ ನಾಯಕತ್ವ ಭಿನ್ನಾಭಿಪ್ರಾಯ ಇಲ್ಲ: ಎಚ್‌. ಡಿ. ದೇವೇಗೌಡ

Published:
Updated:
Prajavani

ಬೆಂಗಳೂರು: ‘ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಲ್ಲಿ ಪಕ್ಷದ ನಾಯಕತ್ವ ಕುರಿತು ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಗಿನ ನಾಯಕತ್ವದ ಬಗ್ಗೆ ಪಕ್ಷದ ಶಾಸಕರು ಅಪಸ್ವರ ಎತ್ತಿಲ್ಲ. ಪಕ್ಷ ಕಟ್ಟುವಲ್ಲಿ ಬಸವರಾಜ ಹೊರಟ್ಟಿ ಅವರ ಪಾತ್ರವೂ ಇದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌. ಡಿ. ದೇವೇಗೌಡ ಹೇಳಿದರು.

‘ಇಂದಿನ ಸಭೆಗೆ ಹೊರಟ್ಟಿ ಸಹಿತ ಕೆಲವು ಶಾಸಕರಿಗೆ ಬೇರೆ ಬೇರೆ ಕಾರಣಗಳಿಂದ ಬರುವುದಕ್ಕೆ ಆಗಿರಲಿಲ್ಲ. ಎಲ್ಲರೂ ಮುಂಚಿತವಾಗಿಯೇ ತಿಳಿಸಿದ್ದಾರೆ. 33 ಶಾಸಕರು, 15 ಪರಿಷತ್ ಸದಸ್ಯರ ಸಭೆಯನ್ನು ನವೆಂಬರ್‌ 1 ಅಥವಾ 2 ರಂದು ಕರೆಯಲಿದ್ದೇನೆ. ಯಾವುದೇ ರೀತಿ ಭಿನ್ನಾಭಿಪ್ರಾಯ ಇಟ್ಟುಕೊಳ್ಳದೆ ಎಲ್ಲರೂ ಒಗ್ಗಟ್ಟಾಗಿ ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳವುದಕ್ಕೆ ಶಕ್ತಿಮೀರಿ ಹೋರಾಟ ಮಾಡುತ್ತೇವೆ’ ಎಂದು ಅವರು ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನಾಲ್ವರ ಆಯ್ಕೆಗೆ ಚಿಂತನೆ: ’ವಿಧಾನ ಪರಿಷತ್‌ಗೆ ಬೆಂಗಳೂರು ಆಗ್ನೇಯ, ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಗ್ಗೆ ಕುರಿತು ಸಭೆ ನಡೆಸಲಾಗಿದೆ. ರಂಗನಾಥ, ಶಿಕ್ಷಕರ ಕ್ಷೇತ್ರದ ಆಕಾಂಕ್ಷಿ. ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಚೌಡರೆಡ್ಡಿ ತೂಪಲ್ಲಿ, ರಮೇಶ್ ಬಾಬು, ಶಿವಶಂಕರ್ ಅವರು ಆಕಾಂಕ್ಷಿಗಳಾಗಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದ ಬಗ್ಗೆ ಚರ್ಚೆ ಆಗಿಲ್ಲ’ ಎಂದರು.

**

ಸುಪ್ರೀಂ ಕೋರ್ಟ್‌ನಲ್ಲಿ ಇದೇ 23ಕ್ಕೆ ಏನು ಬೇಕಾದರೂ ತೀರ್ಪು ಬರಲಿ, ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತೇವೆ‌
- ಎಚ್‌. ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ

ಪ್ರತಿಕ್ರಿಯಿಸಿ (+)