ಗುರುವಾರ , ನವೆಂಬರ್ 21, 2019
24 °C
ಇ.ಡಿ. ವಿಚಾರಣೆ ವೇಳೆ ದಾಖಲೆ ಸಲ್ಲಿಕೆ: ಶಾಸಕಿ ಲಕ್ಷ್ಮಿ

ಶಿವಕುಮಾರ್‌ ಜೊತೆಗೆ ಯಾವುದೇಹಣಕಾಸಿನ ವ್ಯವಹಾರವಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್‌

Published:
Updated:
Prajavani

ನವದೆಹಲಿ: ‘ಡಿ.ಕೆ. ಶಿವಕುಮಾರ್‌ ನನ್ನ ರಾಜಕೀಯ ಗುರು. ನಾನು ಅವರೊಂದಿಗೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ನಡೆಸಿಲ್ಲ’ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದರು.

ಶುಕ್ರವಾರ ಜಾರಿ ನಿರ್ದೇಶನಾಲಯ (ಇ.ಡಿ)ದ ಅಧಿಕಾರಿಗಳಿಂದ ವಿಚಾರಣೆ ಎದುರಿಸಿ ರಾತ್ರಿ 7.30ಕ್ಕೆ ಹೊರಬಂದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮತ್ತೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸೂಚಿಸಿಲ್ಲ. ಬಹುಶಃ ವಿಚಾರಣೆ ಪೂರ್ಣಗೊಂಡಂತಿದೆ. ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೂ ಸಮಂಜಸ ಉತ್ತರ ನೀಡಿದ್ದೇನೆ. ಅವರು ಕೇಳಿರುವ ದಾಖಲೆಗಳನ್ನು ಸಲ್ಲಿಸಿದ್ದೇನೆ’ ಎಂದು ಅವರು ಹೇಳಿದರು.

‘ಶಿವಕುಮಾರ್‌ ಅವರೊಂದಿಗೆ ಯಾವುದೇ ವ್ಯವಹಾರ ಇಲ್ಲದಿದ್ದರೆ ಸಮನ್ಸ್‌ ಜಾರಿ ಮಾಡಿ ವಿಚಾರಣೆ ನಡೆಸಿದ್ದೇಕೆ’ ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ ಅವರು, ‘ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಅವರು ನನ್ನನ್ನು ರಾಜಕೀಯವಾಗಿ ಬೆಳೆಸಿದ್ದಾರಷ್ಟೇ’ ಎಂದರು.

ಗುರುವಾರವೂ ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ವಿಚಾರಣೆ ಎದುರಿಸಿದ್ದ ಹೆಬ್ಬಾಳ್ಕರ್‌, ಶುಕ್ರವಾರ ಮಧ್ಯಾಹ್ನ 12ಕ್ಕೆ ಇ.ಡಿ. ಕಚೇರಿಯೊಳಗೆ ತೆರಳಿದ್ದರು.

ಜಾಮೀನು; ವಿಚಾರಣೆ ಇಂದು: ಗುರುವಾರದಿಂದ ಇಲ್ಲಿನ ತಿಹಾರ್‌ ಕೇಂದ್ರ ಕಾರಾಗೃಹದಲ್ಲಿರುವ ಡಿ.ಕೆ. ಶಿವಕುಮಾರ್‌ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಇ.ಡಿ. ವಿಶೇಷ ನ್ಯಾಯಾಲಯದಲ್ಲಿ ಶನಿವಾರ ಬೆಳಿಗ್ಗೆ 11ಕ್ಕೆ ಮುಂದುವರಿಯಲಿದೆ.

ಗುರುವಾರ ಮಧ್ಯಾಹ್ನ ಸತತ ಒಂದೂವರೆ ಗಂಟೆ ಕಾಲ ಇ.ಡಿ. ಪರ ವಾದ ಮಂಡಿಸಿ ಜಾಮೀನು ನಿರಾಕರಿಸುವಂತೆ ಕೋರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌ ಅವರ ವಾದ ಮಂಡನೆ ಮುಂದುವರಿಯಲಿದೆ.

ನಂತರ ಶಿವಕುಮಾರ್‌ ಪರ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ ಹಾಗೂ ಮುಕುಲ್‌ ರೋಹಟ್ಗಿ ಅವರು ಜಾಮೀನು ಕೋರಿ ವಾದ ಮಂಡಿಸಲಿದ್ದಾರೆ.

ಪ್ರತಿಕ್ರಿಯಿಸಿ (+)