ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ

7

ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ

Published:
Updated:
Deccan Herald

ಮೈಸೂರು: ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಎಲಿವೇಟೆಡ್ ಕಾರಿಡಾರ್ (ಮೇಲ್ಸೇತುವೆ) ನಿರ್ಮಾಣ ಮಾಡಬಾರದು ಎಂದು ಆಗ್ರಹಿಸಿ ಪರಿಸರವಾದಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.

ಮೈಸೂರು ಗ್ರಾಹಕ ಪರಿಷತ್, ಸೇವ್ ವೈಲ್ಡ್‌ಲೈಫ್ ಸಂಘಟನೆ, ಪರಿಸರ ಸಂರಕ್ಷಣಾ ಸಮಿತಿ, ಪ್ರಕೃತಿ ಸಾವಯವ ಕೃಷಿಕರು ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಬಂಡೀಪುರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣದಿಂದ ಅರಣ್ಯ ನಾಶವಾಗುತ್ತದೆ. ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

‌‘ಇದು ಕಳ್ಳಬೇಟೆಯಂತಹ ಚಟುವಟಿಕೆಗಳಿಗೂ ನಾಂದಿ ಹಾಡುವ ಸಂಭವ ಇದೆ. ಮೇಲ್ಸೇತುವೆ ಮೇಲೆ ಸಾಗುವ ಪ್ರಯಾಣಿಕರು ಕೊಳೆತ ತರಕಾರಿ, ಪ್ಲಾಸ್ಟಿಕ್ ವಸ್ತುಗಳನ್ನು ಮೇಲಿನಿಂದ ಕೆಳಕ್ಕೆ ಸುರಿಯುವ ಆತಂಕ ಇದೆ’ ಎಂದು ಅವರು ಹೇಳಿದರು.

1986ರ ಪರಿಸರ ಸಂರಕ್ಷಣೆ ಕಾಯಿದೆಯು ರಾಷ್ಟ್ರೀಯ ಉದ್ಯಾನದ ಸಂರಕ್ಷಿತ ತಾಣಗಳ ಗಡಿಯಿಂದ 10 ಕಿ.ಮೀ. ದೂರದವರೆಗೆ ಯಾವುದೇ ಬೃಹತ್ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ನೀಡುವುದಿಲ್ಲ. ಹೀಗಾಗಿ, ಹುಲಿ ಯೋಜನೆ ಅಡಿಯಲ್ಲಿ ಬರುವಂತಹ ಬಂಡೀಪುರ ರಾಷ್ಟ್ರೀಯ ಉದ್ಯಾನದ ಒಳಗೆ ಮೇಲು ಸೇತುವೆಗಳನ್ನು ಕಟ್ಟಲು ಕಾನೂನಿನ ಪ್ರಕಾರವೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಮೇಲ್ಸೇತುವೆ ಪರವಾಗಿ ದೊಡ್ಡ ಮಾಫಿಯಾ

ಮೇಲ್ಸೇತುವೆ ನಿರ್ಮಿಸಬೇಕು ಎಂದು ಕೇರಳ ರಾಜ್ಯದಿಂದ ದೊಡ್ಡ ಮಾಫಿಯಾ ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಪರಿಸರವಾದಿ ತನುಜಾ ಮಾತನಾಡಿ, ‘ಮೇಲ್ಸೇತುವೆ ವಿರುದ್ಧ ಹೋರಾಟ ರೂಪಿಸುವ ಕುರಿತು ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್‌ನ್ನು ಕಂಡ ವ್ಯಕ್ತಿಯೊಬ್ಬ ಕೇರಳದ ಸುಲ್ತಾನ್‌ಬತೇರಿಯಿಂದ ಕರೆ ಮಾಡಿ ಪ್ರತಿಭಟನೆ ನಡೆಸದಂತೆ ಹೇಳಿದ್ದ’ ಎಂದು ದೂರಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !