‘ದೈವ ಭಕ್ತಿ’ಗೆ ಉತ್ತರ ಪತ್ರಿಕೆಯಲ್ಲಿ ಇಲ್ಲ ಅವಕಾಶ: ಆರೋಗ್ಯ ವಿ.ವಿ ಸುತ್ತೋಲೆ

7

‘ದೈವ ಭಕ್ತಿ’ಗೆ ಉತ್ತರ ಪತ್ರಿಕೆಯಲ್ಲಿ ಇಲ್ಲ ಅವಕಾಶ: ಆರೋಗ್ಯ ವಿ.ವಿ ಸುತ್ತೋಲೆ

Published:
Updated:

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇನ್ನು ಮುಂದೆ ಉತ್ತರ ಪತ್ರಿಕೆಗಳಲ್ಲಿ ‘ಓಂ’, ‘ಓಂ ನಮಃ ಶಿವಾಯ, ಓಂ ಗಣಪತಯೇ ನಮಃ’ ಎಂದೆಲ್ಲ ಬರೆದು ‘ದೈವಭಕ್ತಿ’ ಪ್ರದರ್ಶಿಸುವಂತಿಲ್ಲ.

ಅದು ಕೇವಲ ದೈವಭಕ್ತಿಯಲ್ಲ. ಅದರ ಹಿಂದೆ ಮೌಲ್ಯಮಾಪಕರನ್ನು ಓಲೈಸುವ ತಂತ್ರಗಾರಿಕೆಯೂ ಅಡಗಿದೆ ಎಂಬ ತರ್ಕಕ್ಕೆ ಬಂದಿರುವ ವಿಶ್ವವಿದ್ಯಾಲಯ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ‘ದೈವ ಭಕ್ತಿ’ ಪ್ರದರ್ಶನ ಮುಂದುವರಿಸಿದರೆ ಅದನ್ನು ಪರೀಕ್ಷಾ ಅಕ್ರಮ ಎಂದೂ ಪರಿಗಣಿಸಲಾಗುತ್ತದೆ.

‘ಗುರುತನ್ನು ತಿಳಿಸಲು ಉತ್ತರ ಪತ್ರಿಕೆಯಲ್ಲಿ ಯಾವುದೇ ಸೂಚಕ ಚಿಹ್ನೆ, ಸಂಕೇತ, ಪದವನ್ನು ಬರೆಯಬಾರದು’ ಎಂದು ವಿಶ್ವ
ವಿದ್ಯಾಲಯದ ರಿಜಿಸ್ಟ್ರಾರ್‌ (ಮೌಲ್ಯಮಾಪನ) ಡಾ.ಎಂ.ಕೆ.ರಮೇಶ್‌ ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ.

‘ಉತ್ತರ ಪತ್ರಿಕೆಯಲ್ಲಿ ನಂಬಿಕೆಯ ದೇವರ ಹೆಸರುಗಳನ್ನು ಬರೆಯಬಾರದು’ ಎಂಬ ನಿಯಮದೊಂದಿಗೆ ಇನ್ನೂ ಕೆಲವು ಸೂಚನೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದೆ. ನಿಗದಿತ ಸ್ಥಳ ಅಲ್ಲದೇ, ನೋಂದಣಿ ಸಂಖ್ಯೆಯನ್ನು ಯಾವುದೇ ಪುಟದಲ್ಲಿ ಬರೆಯುವಂತಿಲ್ಲ. ವಿದ್ಯಾರ್ಥಿಯ ಹೆಸರು, ಪುಟದ ಕೊನೆಯಲ್ಲಿ ಪಿ.ಟಿ.ಓ (ಪುಟ ತಿರುಗಿಸಿ) ಬರೆಯಬಾರದು. ಕೇಳಿದ ಪ್ರಶ್ನೆಗೆ ಸಂಬಂಧವಿಲ್ಲದ ಸಂದೇಶಗಳು, ಪದಗಳು, ಸಂಖ್ಯೆ, ವಾಕ್ಯ ಉಲ್ಲೇಖಿಸುವಂತಿಲ್ಲ. ಉತ್ತರ ಪತ್ರಿಕೆಯನ್ನು ಮಡಚಬಾರದು ಎಂಬ ನಿಯಮಗಳು ಅವುಗಳಲ್ಲಿ ಪ್ರಮುಖವಾಗಿವೆ.  

ಈ ನಿಯಮಗಳನ್ನು ಮೀರಿದರೆ, ಅದನ್ನು ಪರೀಕ್ಷಾ ಅಕ್ರಮ ಎಂದು ಪರಿಗಣಿಸಿ, ವಿದ್ಯಾರ್ಥಿಗೆ ದಂಡ ವಿಧಿಸಲು ಅಥವಾ ಅನರ್ಹಗೊಳಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಜತೆಗೆ ಮೌಲ್ಯಮಾಪನ ಹಂತದ ಪರೀಕ್ಷಾ ಅಕ್ರಮಗಳ ಮೇಲೆ ಕಣ್ಣಿಡಲು ಸಮಿತಿಯೊಂದನ್ನು ರಚಿಸಿದೆ.

* ಧಾರ್ಮಿಕ ಸೂಚಕಗಳಿಂದ ಮಾತ್ರವಲ್ಲದೆ, ಬೇರೆ ಚಿಹ್ನೆಗಳಿಂದಲೂ ಪರೀಕ್ಷಾ ಅಕ್ರಮ ನಡೆಸಬಹುದು. ಭಕ್ತಿ ಸೂಚಕಗಳಿಗೆ ಕಡಿವಾಣ ಹಾಕುವ ಮೊದಲು ಅಕ್ರಮದಲ್ಲಿ ಭಾಗಿಯಾಗುವ ಮೌಲ್ಯಮಾಪಕರನ್ನು ದಂಡಿಸಲಿ

-ಹರ್ಷ, ರಾಜ್ಯ ಕಾರ್ಯದರ್ಶಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌

* ವೈದ್ಯಕೀಯ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತನೆ ಮಾಡಬೇಕು. ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಜಾರಿ ಮಾಡುವ ಬದಲು, ನ್ಯಾಯಯುತವಾಗಿ ಪರೀಕ್ಷೆ ಬರೆಯುವ ಅರಿವು ಮೂಡಿಸಬೇಕು
-ಗುರುರಾಜ್‌ ದೇಸಾಯಿ, ರಾಜ್ಯ ಕಾರ್ಯದರ್ಶಿ, ಭಾರತ ವಿದ್ಯಾರ್ಥಿ ಒಕ್ಕೂಟ

ಅಂಕಿ–ಅಂಶ

* 700 ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಕಾಲೇಜುಗಳು

* 39,484 ಒಟ್ಟು ವಿದ್ಯಾರ್ಥಿಗಳು

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !