ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಬ್ಯಾಂಕಿಂಗ್‌ನಲ್ಲೂ ಕನ್ನಡಕ್ಕೆ ಇಲ್ಲ ಮಣೆ

ಮುದ್ರಿತ ಅರ್ಜಿ ನಮೂನೆಗಳಲ್ಲಿ ಪ್ರಾದೇಶಿಕ ಭಾಷೆ ಇರಬೇಕೆಂಬ ಆರ್‌ಬಿಐ ನಿರ್ದೇಶನಕ್ಕಿಲ್ಲ ಮನ್ನಣೆ
Last Updated 28 ಸೆಪ್ಟೆಂಬರ್ 2019, 9:06 IST
ಅಕ್ಷರ ಗಾತ್ರ

ಬೆಂಗಳೂರು:ಕನ್ನಡದಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ಬರೆಯಲುಅವಕಾಶ ಸಿಗುತ್ತಿಲ್ಲ, ಕೇಂದ್ರ ಸರ್ಕಾರ ಹಿಂದಿ ಹೇರುತ್ತಿದೆ ಎಂಬ ಕೂಗು ಜೋರಾಗಿರುವ ಹೊತ್ತಲ್ಲೇ ಅಂಚೆ ಇಲಾಖೆಯ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್‌ ಮತ್ತು ಹಿಂದಿ ಮಾತ್ರ ಬಳಕೆಯಾಗುತ್ತಿದ್ದು, ಕನ್ನಡ ಇಲ್ಲದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಹಣಕಾಸು ಸಂಸ್ಥೆಗಳು ವ್ಯವಹಾರ ಭಾಷೆಯಾಗಿ ಇಂಗ್ಲಿಷ್‌, ಹಿಂದಿ ಜತೆಗೇ ಪ್ರಾದೇಶಿಕ ಭಾಷೆಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗ್ರಾಹಕ ಸೇವೆಗೆ ಸಂಬಂಧಿಸಿದ ‘ಮಾಸ್ಟರ್‌ ಸರ್ಕ್ಯೂಲೆಷನ್‌–2014’ ರಲ್ಲಿ ತಿಳಿಸಿದೆ. ಅದರಂತೆ, ಮಾಹಿತಿ ಫಲಕಗಳು, ಮುದ್ರಿತ ಅರ್ಜಿ ನಮೂನೆಗಳು( ಚಲನ್‌, ಖಾತೆ ತೆರೆಯುವ ಅರ್ಜಿ, ಪಾಸ್‌ಬುಕ್‌ ಇತ್ಯಾದಿ) ಕನ್ನಡದಲ್ಲಿರಬೇಕು. ಆದರೆ, ಗ್ರಾಮೀಣ ಭಾಗದಲ್ಲೇಹೆಚ್ಚು ಕಾರ್ಯಜಾಲ ಹೊಂದಿರುವ ಅಂಚೆ ಬ್ಯಾಂಕ್‌ಗಳು ಗ್ರಾಹಕರಿಗೆ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಅರ್ಜಿ ನಮೂನೆಗಳನ್ನು ನೀಡುತ್ತಿವೆ.

‘ಈ ಮೊದಲು ಅಂಚೆ ಬ್ಯಾಂಕ್‌ಗಳ ಅರ್ಜಿ ನಮೂನೆಗಳು ಕನ್ನಡದಲ್ಲಿ ಇರುತ್ತಿದ್ದವು. ಇತ್ತೀಚಿನ ಕೆಲ ವರ್ಷಗಳಿಂದ ಕನ್ನಡದಲ್ಲಿ ಮುದ್ರಣಗೊಂಡಿಲ್ಲ. ಸದ್ಯ ರಾಜ್ಯದಲ್ಲಿ ಬಳಸುತ್ತಿರುವ ಅರ್ಜಿ ನಮೂನೆಗಳು 2011ರಲ್ಲಿ ಮುದ್ರಣಗೊಂಡವು. ಇವುಗಳಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಮಾತ್ರ ಇವೆ. ಒಂದು ವೇಳೆ ಗ್ರಾಹಕರಿಗೆ ಕನ್ನಡದ ಅರ್ಜಿ ನಮೂನೆಗಳನ್ನು ನೀಡ
ಬೇಕಿದ್ದರೆ ಹೊಸದಾಗಿ ಮುದ್ರಿಸಬೇಕು,’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಂಚೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಬಗ್ಗೆ ‍‍ಪ್ರತಿಕ್ರಿಯಿಸಿರುವ ಅಂಚೆ ಇಲಾಖೆ ಕರ್ನಾಟಕ ವೃಂದದ ಉಪ ನಿರ್ದೇಶಕ ವೆಂಕಟಾಚಲ ಭಟ್‌ ‘ನಾವು ಕನ್ನಡದ ವಿರೋಧಿಗಳಲ್ಲ. ಅಂಚೆ ಇಲಾಖೆಯಲ್ಲಿ ಕನ್ನಡವನ್ನು ಆದ್ಯತೆ ಮೇಲೆ ಪಾಲಿಸಲಾಗುತ್ತಿದೆ. ಇನ್ನು ಬ್ಯಾಂಕಿಂಗ್‌ ಸೇವೆಯ ಅರ್ಜಿ ನಮೂನೆಗಳಲ್ಲಿ ಕನ್ನಡ ಬಳಸುವ ವಿಚಾರದಲ್ಲಿ ಅಲ್ಲಲ್ಲಿ ಸಮಸ್ಯೆಯಾಗಿರಬಹುದು. ಅರ್ಜಿಗಳನ್ನು ಕೆಲವೊಮ್ಮೆ ಸ್ಥಳೀಯವಾಗಿ ಅಗತ್ಯಕ್ಕೆ ತಕ್ಕಂತೆ ಮುದ್ರಿಸಿಕೊಂಡಿರಬಹುದು’ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿರುವುದುಎರಡೇ ಮುದ್ರಣ ಗೋದಾಮು:ರಾಜ್ಯದ ಅಂಚೆ ಕಚೇರಿಗಳಿಗೆ ಅರ್ಜಿ ನಮೂನೆಗಳು ಪೂರೈಕೆಯಾಗುವುದು ಅರಸೀಕೆರೆ ಮತ್ತು ಹುಬ್ಬಳ್ಳಿಯ ಮುದ್ರಣ ಗೋದಾಮು
ಗಳಿಂದ. ಮುದ್ರಿತ ಪ್ರತಿಗಳು, ಅರ್ಜಿ ನಮೂನೆಗಳು ಅಗತ್ಯವಿದ್ದಲ್ಲಿ ಈ ಗೋದಾಮುಗಳೇ ಪೂರೈಸಬೇಕು. ಎಂಥದ್ದೇ ಅಗತ್ಯವಿದ್ದರೂ ಸ್ಥಳೀಯವಾಗಿ ಮುದ್ರಿಸಿಕೊಳ್ಳಲು ಅವಕಾಶವಿಲ್ಲ ಎಂದು ಅಂಚೆ ಇಲಾಖೆ ನೌಕರರೊಬ್ಬರು ಹೇಳಿದರು.

ಪತ್ರ ಬರೆದರೂ ಉತ್ತರವಿಲ್ಲ

'ಅಂಚೆ ಇಲಾಖೆ ಬ್ಯಾಂಕ್‌ಗಳ ಅರ್ಜಿ ನಮೂನೆಗಳಲ್ಲಿ ಇಂಗ್ಲಿಷ್‌, ಹಿಂದಿ ಮಾತ್ರ ಇದೆ. ಕನ್ನಡ ಏಕಿಲ್ಲ ಎಂದು ಕೇಳಿ ‌ಕರ್ನಾಟಕ ಪೋಸ್ಟ್‌ ಮಾಸ್ಟರ್‌ ಜನರಲ್‌ ಅವರಿಗೆ ಪತ್ರ ಬರೆಯಲಾಗಿದೆ. ಈ ವರೆಗೆ ಅವರಿಂದ ಉತ್ತರವಿಲ್ಲ' ಎಂದು ವಕೀಲ ರಮೇಶ್‌ ಕುಮಾರ್‌ ಹೇಳಿದ್ದಾರೆ.

ನಾವು ಕನ್ನಡ ವಿರೋಧಿಗಳಲ್ಲ. ಬ್ಯಾಂಕಿಂಗ್‌ವ್ಯವಸ್ಥೆಯಲ್ಲೂ ಕನ್ನಡ ಬಳಸುತ್ತಿದ್ದೇವೆ. ಎಲ್ಲೋ ಕೆಲವೆಡೆ ತಪ್ಪಾಗಿರಬಹುದು. ಗಮನಕ್ಕೆ ಬಂದರೆ ಸರಿಪಡಿಸಲಾಗುವುದು

- ವೆಂಕಟಾಚಲ ಭಟ್‌, ಉಪ ನಿರ್ದೇಶಕರು, ಬೆಂಗಳೂರು

ಹಿಂದಿ ಹೇರುತ್ತಿಲ್ಲ ಎನ್ನುತ್ತಾರೆ. ಆದರೆ, ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರದ ಅಧೀನ ಸಂಸ್ಥೆಯ ವ್ಯವಸ್ಥೆಯೊಂದರ ಅರ್ಜಿ ನಮೂನೆಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಿರುವುದನ್ನು ಏನೆನ್ನಬೇಕು?

-ಅರುಣ್‌ ಜಾವಗಲ್‌, ಬನವಾಸಿ ಬಳಗ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT