ಗುರುವಾರ , ಜುಲೈ 16, 2020
22 °C
ಗಾಳಿ ಬೀಸಿದತ್ತ ಮಿಡತೆಯ ಪಯಣ

ರಾಜ್ಯಕ್ಕೆ ಮಿಡತೆ ಕಾಟ ಇಲ್ಲ, ರೈತರು ಗಾಬರಿಗೊಳ್ಳುವ ಅಗತ್ಯ ಇಲ್ಲ: ಬಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜಸ್ಥಾನದಿಂದ ಹೊರಟು ಮಹಾರಾಷ್ಟ್ರಕ್ಕೆ ಬಂದಿರುವ ಲೋಕ್ಟಸ್‌ ಮಿಡತೆಗಳ ಹಿಂಡು ಪೂರ್ವದಿಕ್ಕಿನತ್ತ ಬೀಸಲಿರುವ ಗಾಳಿಯೊಂದಿಗೆ ಸಂಚರಿಸುವ ಸಾಧ್ಯತೆ ಇದೆ. ಹೀಗಾಗಿ ಅವುಗಳು ರಾಜ್ಯದತ್ತ ಬರಲಾರವು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

‘ಎರಡು ದಿನ ದಕ್ಷಿಣದತ್ತ ಗಾಳಿ ಬೀಸಿತ್ತು. ಆದರೆ ಶುಕ್ರವಾರದಿಂದ ಗಾಳಿ ಪೂರ್ವ ದಿಕ್ಕಿನತ್ತ ಬೀಸುವ ಸಾಧ್ಯತೆಯನ್ನು ಹವಾಮಾನ ತಜ್ಞರು ಹೇಳಿದ್ದಾರೆ. ಮಿಡತೆಗಳ ಹಿಂಡು ಸದ್ಯ ಬೀದರ್‌ನಿಂದ ಉತ್ತರ ಭಾಗದಲ್ಲಿ ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿವೆ. ಗಾಳಿಯ ವಿರುದ್ಧ ಸಂಚರಿಸುವ ಶಕ್ತಿ ಇಲ್ಲವಾದ ಕಾರಣ ಮುಂದಿನ ದಿನಗಳಲ್ಲಿ ಅವುಗಳು ಪೂರ್ವ ಮತ್ತು ಈಶಾನ್ಯ ದಿಕ್ಕಿನತ್ತ ಸಂಚರಿಸಬಹುದೇ ಹೊರತು ದಕ್ಷಿಣದತ್ತ ಬರಲಾರವು. ಹೀಗಾಗಿ ರೈತರು ನೆಮ್ಮದಿಯಿಂದ ಇರಬಹುದು’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೋಲಾರದಲ್ಲಿ ಕಂಡುಬಂದ ಮಿಡತೆಗಳಿಗೂ, ಲೋಕ್ಟಸ್‌ ಮಿಡತೆಗಳಿಗೂ ಸಂಬಂಧ ಇಲ್ಲ. ಕೋಲಾರದ ಮಿಡತೆಗಳು ಎಕ್ಕೆ ಎಲೆಗಳನ್ನು ಮಾತ್ರ ತಿನ್ನುತ್ತವೆ. ರೈತರಿಗೆ ತಮ್ಮ ಜಮೀನುಗಳಲ್ಲಿ ಮಿಡತೆ ಬಾಧೆ ಕಂಡುಬಂದಲ್ಲಿ ಶಬ್ದ ಮಾಡುವ ಮೂಲಕ ದೂರ ಓಡಿಸಬಹುದು. ಇಂತಹ ಬೆಳೆಗಳು ದುಬಾರಿ ಬೆಳೆಗಳಾಗಿದ್ದಲ್ಲಿ ಅವುಗಳ ರಕ್ಷಣೆಗಾಗಿ ಬೇವು ಆಧಾರಿತ ಕೀಟನಾಶಕಗಳನ್ನು ರೈತರೆ ಸಿಂಪಡಿಸಿಕೊಳ್ಳಬೇಕಾಗುತ್ತದೆ. ಸಿಂಪಡಣಾ ವ್ಯವಸ್ಥೆಗಾಗಿ ಡ್ರೋನ್‌, ಟ್ರ್ಯಾಕ್ಟರ್ ಚಾಲಿತ ಸ್ಪ್ರೇಯರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ’ ಎಂದು ಸಚಿವರು ಹೇಳಿದರು.

‘ಮಹಾರಾಷ್ಟ್ರದ ಕೃಷಿ ಆಯುಕ್ತರೊಂದಿಗೆ ರಾಜ್ಯದ ಕೃಷಿ ಆಯುಕ್ತರು ಪ್ರತಿ ಗಂಟೆಗೊಮ್ಮೆ ಮಿಡತೆಗಳ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಜಿಲ್ಲಾಮಟ್ಟದಲ್ಲಿ ಕೀಟನಾಶಕ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿ ರಚಿಸಲಾಗಿದೆ. ಕೃಷಿ ಮತ್ತು ತೋಟಗಾರಿಕಾ ನಿರ್ದೇಶಕರು ಹಾಗೂ ಉನ್ನತಮಟ್ಟದ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ಈ ತಂಡ ಬೀದರ್, ಕೊಪ್ಪಳ, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿ ಮಿಡತೆ ನಿಯಂತ್ರಣ ಮುನ್ನೆಚ್ಚರಿಕೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿ ಆತ್ಮಸ್ಥೈರ್ಯ ತುಂಬಲಿದೆ’ ಎಂದರು.

ಒಂದು ವೇಳೆ ಮಿಡತೆಗಳು ಬಂದರೂ ಅವುಗಳನ್ನು ನಿಯಂತ್ರಿಸಲು ಬೇಕಾದ ಕೀಟನಾಶಕಗಳ ಸಂಗ್ರಹ ಇದೆ. ಸಿಂಪಡಣೆಗೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಕೀಟನಾಶಕ ಪರಿಣಾಮಕಾರಿ

ಕ್ಲೋರೊಪೈರಿಪಾಸ್, ಲಾಮ್ಡಾಸಹಲೋಥ್ರಿನ್‌ ಕೀಟನಾಶಕಗಳು ಬಹಳ ಪರಿಣಾಮಕಾರಿಯಾಗಿವೆ. ಜತೆಗೆ ಡೆಲ್ಪಮೆಥ್ರಿನ್‌, ಪಿಪ್ರೊನಿಲ್‌, ಮಲಾಥಿಯಾನ್‌ ಕೀಟನಾಶಕಗಳೂ ಕೆಲಸ ಮಾಡುತ್ತವೆ. ಮಹಾರಾಷ್ಟ್ರದಲ್ಲಿ ಇದನ್ನು ಬಳಸಿದ್ದರಿಂದ ಭಾರಿ ಸಂಖ್ಯೆಯಲ್ಲಿ ಮಿಡತೆಗಳು ಸತ್ತಿವೆ. ಹೀಗಾಗಿ ರಾಜಸ್ಥಾನದಿಂದ ವಲಸೆ ಹೊರಟಾಗ ಇದ್ದ ಮಿಡತೆಗಳ ಪ್ರಮಾಣ ಈಗ ಇಲ್ಲ. ಬರಬರುತ್ತ ಅವುಗಳ ಸಂಖ್ಯೆ ಇನ್ನಷ್ಟು ಕ್ಷೀಣಿಸುತ್ತದೆ. ಆದರೆ ಮಿಡತೆಗಳು ತಿನ್ನದ ಸಸ್ಯ, ಎಲೆಗಳಿಲ್ಲ. ಬೇವಿನ ಚಿಗುರನ್ನು ಸಹ ತಿನ್ನುತ್ತವೆ. ಒಮ್ಮೆ ದಾಳಿ ಇಟ್ಟ ಬಕಾಸುರ ಮಿಡತೆಗಳ ದಂಡು ಸುಮಾರು 3,500 ಜನರಿಗೆ ಪ್ರತಿದಿನ ಬೇಕಾಗುವಷ್ಟು ಆಹಾರಧಾನ್ಯ ಬೆಳೆಯುವ ಪ್ರದೇಶವನ್ನು ಒಂದೇ ದಿನದಲ್ಲಿ ಕಬಳಿಸುತ್ತವೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ.ಎ.ಆರ್‌.ವಿ.ಕುಮಾರ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು