ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಚುನಾವಣೆ: ಬಿಜೆಪಿ ಮೊದಲ ಪಟ್ಟಿಯಲ್ಲಿ ಮುಸ್ಲಿಮರ ಹೆಸರಿಲ್ಲ

Last Updated 13 ನವೆಂಬರ್ 2018, 8:48 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆ ಉಮೇದುವಾರರ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಒಬ್ಬರೂ ಮುಸ್ಲಿಂ ಅಭ್ಯರ್ಥಿಯಿಲ್ಲ. ಓರ್ವ ಮುಸ್ಲಿಂ ಶಾಸಕ ಮತ್ತು ಓರ್ವ ಮುಸ್ಲಿಂ ಸಚಿವರ ಹೆಸರನ್ನು ಮೊದಲ ಪಟ್ಟಿಯಲ್ಲಿ ಕೈಬಿಡಲಾಗಿದೆ.

ಭಾನುವಾರ ರಾತ್ರಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯು ಪಕ್ಷದ ಹಲವರಿಗೆ ಆಘಾತ ಉಂಟು ಮಾಡಿತು. ಮುಖ್ಯಮಂತ್ರಿ ವಸುಂಧರ ರಾಜೆ ಅವರ ಆಪ್ತ ಮತ್ತು ಸಾರಿಗೆ ಖಾತೆ ನಿರ್ವಹಿಸುತ್ತಿದ್ದ ಮುಸ್ಲಿಂ ನಾಯಕ ಯೂನುಸ್ ಖಾನ್ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣ.

ದಿಡ್ವಾನ ಕ್ಷೇತ್ರದಿಂದ ಆಯ್ಕೆಯಾಗಿದ್ದ ಖಾನ್, ರಾಜೆ ಸಂಪುಟದಲ್ಲಿ ‘ನಂ.2’ ಎನ್ನುವ ಪ್ರಾಮುಖ್ಯತೆ ಪಡೆದಿದ್ದರು. ನಾಗೋರ್ ಕ್ಷೇತ್ರದ ಹಬೀಬ್ ಉರ್ ರೆಹಮಾನ್ ಅವರ ಹೆಸರನ್ನೂ ಮೊದಲ ಪಟ್ಟಿಯಿಂದ ಕೈಬಿಡಲಾಗಿದೆ. ರೆಹಮಾನ್ 2013ರಲ್ಲಿ ಬಿಜೆಪಿಗೆ ಸೇರಿಕೊಂಡಿದ್ದರು. ಅದಕ್ಕೂ ಮೊದಲು ಕಾಂಗ್ರೆಸ್‌ನಲ್ಲಿದ್ದ ಅವರು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತವಲಯದಲ್ಲಿದ್ದರು.

ಖಾನ್ ಅವರಿಗೆ ಎರಡನೇ ಪಟ್ಟಿಯಲ್ಲೂ ಸ್ಥಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಹಿರಿಯ ನಾಯಕರೊಬ್ಬರು, ‘ಹಬೀಬ್ ಉರ್ ರೆಹಮಾನ್ ಬಿಜೆಪಿ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಅಥವಾ ಕಾಂಗ್ರೆಸ್‌ಗೆ ಸೇರಿಕೊಳ್ಳುವ ಸಾಧ್ಯತೆ ಇದೆ. ಆದರೆ ಯೂನುಸ್ ಖಾನ್ ವಿಚಾರದಲ್ಲಿ ಹಾಗಾಗಲಾರದು. ಫತೇಪುರ್ ಕ್ಷೇತ್ರದಿಂದ ಖಾನ್ ಸ್ಪರ್ಧಿಸಲಿ ಎಂಬುದು ರಾಜೆ ಅವರ ಇಂಗಿತ. ಬಿಜೆಪಿ ಉನ್ನತ ನಾಯಕರಿಗೆ ಖಾನ್ ದಿಡ್ವಾನ ಕ್ಷೇತ್ರದಿಂದ ಸ್ಪರ್ಧಿಸಿದರೆ ಒಳಿತು ಎನ್ನುವ ಅಭಿಪ್ರಾಯವಿದೆ. ನಾಯಕರಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮೊದಲ ಪಟ್ಟಿಯಲ್ಲಿ ಅವರ ಹೆಸರು ನಮೂದಾಗಿಲ್ಲ’ ಎಂದು ಹೇಳಿದರು.

2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಒಟ್ಟು ನಾಲ್ವರು ಸ್ಪರ್ಧಿಸಿದ್ದರು. ಈ ಪೈಕಿ ಇಬ್ಬರು ಜಯಗಳಿಸಿದ್ದರು.

ಕೆಲ ಹಾಲಿ ಶಾಸಕರು ಮತ್ತು ಸಚಿವರಿಗೆ ಅವಕಾಶ ನೀಡುವ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಮುಖ್ಯಮಂತ್ರಿ ವಸುಂಧರ ರಾಜೆ ಅವರ ನಡುವೆ ಸಹಮತ ಮೂಡದಿದ್ದುದೇ ಮುಖ್ಯ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

‘ಬಿಜೆಪಿಯ ಮೊದಲು ಪಟ್ಟಿಯು ಕೆಲ ಹಳೆಯ ಮತ್ತು ಹೊಸ ಅಭ್ಯರ್ಥಿಗಳ ಹೆಸರುಗಳನ್ನು ಒಳಗೊಂಡಿದೆ. ಆರ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿರುವವರು ಮತ್ತು ಸದಸ್ಯರಲ್ಲದವರ ಹೆಸರುಗಳೂ ಇವೆ. ಮುಸ್ಲಿಮರಿಗೆ ಅವಕಾಶ ನಿರಾಕರಿಸುವ ಮೂಲಕ ಬಿಜೆಪಿ ಹಿಂದುತ್ವದ ಆಟ ಹೂಡಲು ಯತ್ನಿಸುತ್ತಿರುವ ಸಾಧ್ಯತೆ ಇದೆ’ ಎಂದುರಾಜಕೀಯ ವಿಶ್ಲೇಷಕ ಓ ಸೈನಿ ಅಭಿಪ್ರಾಯಪಡುತ್ತಾರೆ.

ಮೊದಲ ಪಟ್ಟಿಯಲ್ಲಿ ಸ್ಥಾನ ಸಿಗದ ಪ್ರಮುಖರಲ್ಲಿ ರಾಜಸ್ಥಾನದ ಆರೋಗ್ಯ ಸಚಿವ ಮತ್ತು ಐದು ಬಾರಿ ಶಾಸಕ ಕಾಳಿಚರಣ್ ಸರಾಫ್, ಕೈಗಾರಿಕೆ ಸಚಿವ ರಾಜ್‌ಪಾಲ್ ಸಿಂಗ್ ಶೇಖಾವತ್, ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಜಸ್ವಂತ್ ಸಿಂಗ್ ಯಾದವ್ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT